ADVERTISEMENT

ಬೆಂಗಳೂರಿನಲ್ಲಿ ಅಕ್ರಮ ವಾಸ: ಕೆಐಎನಲ್ಲಿ ಬಾಂಗ್ಲಾದ ಮೂವರು ಪ್ರಜೆಗಳ ಬಂಧನ

ಹೆಸರು ಬದಲಿಸಿಕೊಂಡಿದ್ದ ಆರೋಪಿಗಳು

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2022, 21:01 IST
Last Updated 11 ಆಗಸ್ಟ್ 2022, 21:01 IST
   

ಬೆಂಗಳೂರು: ನಗರದಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾದ ಮೂವರು ಪ್ರಜೆಗಳನ್ನು ನಗರದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ವಲಸೆ ಅಧಿಕಾರಿಗಳು ವಶಕ್ಕೆ ಪಡೆದು ಪೊಲೀಸರಿಗೆ ಒಪ್ಪಿಸಿದ್ದಾರೆ.

‘ಬಾಂಗ್ಲಾದೇಶದ ಹಬಿಗಂಜ್‌ನ ನಿಖಿಲೇಶ್ ದಾಸ್ ಅಲಿಯಾಸ್ ನಿಖೇಶ್ (34), ಛಾಯನ್ ದಾಸ್ ಅಲಿಯಾಸ್ ದೀಪಾಂಜಲ್ (25) ಹಾಗೂ ನಾಜೀರ್ ಪೈಕ್ ಅಲಿಯಾಸ್ ಹೆಸರು ಅಮಿನ್ ಮೊಹಮ್ಮದ್ ಚೌಧರಿ (27) ಬಂಧಿತರು. ಹೊರ ದೇಶಕ್ಕೆ ಹೋಗಲು ನಿಲ್ದಾಣಕ್ಕೆ ಬಂದಿದ್ದ ವೇಳೆಯಲ್ಲೇ ಮೂವರು ವಲಸೆ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾರೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘2013ರಲ್ಲಿ ಗಡಿ ಮೂಲಕ ದೇಶದೊಳಗೆ ನುಸುಳಿದ್ದ ನಿಖಿಲೇಶ್ ದಾಸ್ ಹಾಗೂ ಛಾಯನ್ ದಾಸ್, ಕೆಲ ದಿನ ಪಶ್ಚಿಮ ಬಂಗಾಳದಲ್ಲಿದ್ದರು. ಹೆಸರು ಬದಲಾಯಿಸಿಕೊಂಡು ನಕಲಿ ದಾಖಲೆಗಳನ್ನು ಸೃಷ್ಟಿಸಿ, ಆಧಾರ್ ಪಡೆದಿದ್ದರು. ನಂತರ, ಪಾಸ್‌ಪೋರ್ಟ್ ಸಹ ಮಾಡಿಸಿದ್ದರು. ಬೆಂಗಳೂರಿಗೆ ಬಂದು ವಿವಿಧ ಕಂಪನಿಗಳಲ್ಲಿ ಕೆಲಸ ಮಾಡಿದ್ದರು.’

ADVERTISEMENT

‘ಮಲೇಷ್ಯಾಕ್ಕೆ ಹೋಗಲೆಂದು ಇಬ್ಬರೂ ಆಗಸ್ಟ್ 8ರಂದು ನಿಲ್ದಾಣಕ್ಕೆ ಬಂದಿದ್ದರು. ದಾಖಲೆಗಳ ಪರಿಶೀಲನೆ ವೇಳೆ ಅನುಮಾನ ಬಂದಿತ್ತು. ವಲಸೆ ಅಧಿಕಾರಿಗಳು ಹೆಚ್ಚಿನ ತಪಾಸಣೆ ನಡೆಸಿದಾಗ, ಬಾಂಗ್ಲಾದೇಶದವರೆಂದು ಆರೋಪಿಗಳು ತಪ್ಪೊಪ್ಪಿಕೊಂಡಿದ್ದರು.
ಆರೋಪಿ ನಾಜೀರ್, 2008ರಲ್ಲೇ ಭಾರತಕ್ಕೆ ಬಂದು ಅಕ್ರಮವಾಗಿ ವಾಸವಿದ್ದ. ಈತನ ನಿಜವಾದ ಹೆಸರು ಅಮಿನ್ ಮೊಹಮ್ಮದ್ ಚೌಧರಿ. ಹೆಸರು ಬದಲಾಯಿಸಿಕೊಂಡು ನಕಲಿ ದಾಖಲೆ ಸೃಷ್ಟಿಸಿ, ಗುರುತಿನ ಚೀಟಿ ಪಡೆದಿದ್ದ. ಆಧಾರ್ ಹಾಗೂ ಪಾರ್ಸ್‌ಪೋರ್ಟ್ ಸಹ ಮಾಡಿಸಿದ್ದ. ಮಾಲ್ಡೀವ್ಸ್‌ಗೆ ಆಗಸ್ಟ್ 8ರಂದು ನಿಲ್ದಾಣಕ್ಕೆ ಬಂದಿದ್ದಾಗಲೇ ವಲಸೆ ಅಧಿಕಾರಿಗಳಿಗೆ ಸಿಕ್ಕಿಬಿದ್ದ’ ಎಂದೂ ಮೂಲಗಳು
ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.