ADVERTISEMENT

'ಲಕ್ಕಿ ಭಾಸ್ಕರ್' ಸಿನಿಮಾ ಶೈಲಿಯಲ್ಲಿ ಹಣ ದೋಚಿ ಪರಾರಿಯಾದ ಬ್ಯಾಂಕ್ ಮ್ಯಾನೇಜರ್

ಗ್ರಾಹಕರ ಹೆಸರಿನಲ್ಲಿ ‘ಚಿನ್ನದ ಸಾಲ’: ಪರಾರಿ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2025, 13:50 IST
Last Updated 29 ಡಿಸೆಂಬರ್ 2025, 13:50 IST
<div class="paragraphs"><p>ಎನ್‌.ರಘು</p></div>

ಎನ್‌.ರಘು

   
ಸಿನಿಮೀಯ ಶೈಲಿಯಲ್ಲಿ ಬ್ಯಾಂಕ್‌, ಗ್ರಾಹಕರ ಹಣ ದೋಚಿದ್ದ ಅಧಿಕಾರಿ

ಬೆಂಗಳೂರು: ಸಾಲ ಪಡೆದು ಬ್ಯಾಂಕ್‌ಗೆ ಮರು ಪಾವತಿಸದೇ ಗ್ರಾಹಕರು ತಲೆಮರೆಸಿಕೊಂಡಿರುವ ಪ್ರಕರಣಗಳು ಅಲ್ಲಲ್ಲಿ ವರದಿ ಆಗುತ್ತವೆ. ಆದರೆ, ಇಲ್ಲೊಂದು ಪ್ರಕರಣದಲ್ಲಿ ಬ್ಯಾಂಕ್‌ನ ಹಿರಿಯ ವ್ಯವಸ್ಥಾಪಕರೊಬ್ಬರು ಬ್ಯಾಂಕ್‌ಗೆ ಸಿನಿಮೀಯ ಮಾದರಿಯಲ್ಲಿ ವಂಚಿಸಿ ನಾಪತ್ತೆ ಆಗಿದ್ದಾರೆ.

ಕೆನರಾ ಬ್ಯಾಂಕ್‌ನ ಮಲ್ಲೇಶ್ವರ ಶಾಖೆಗೆ ಸೇರಿದ ₹3.11 ಕೋಟಿಯನ್ನು ಹಿರಿಯ ವ್ಯವಸ್ಥಾಪಕ ಎನ್‌.ರಘು ಅವರು ದೋಚಿಕೊಂಡು ಪರಾರಿ ಆಗಿದ್ದಾರೆ. ಅವರ ವಿರುದ್ಧ ಮಲ್ಲೇಶ್ವರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ADVERTISEMENT

ಕೆನರಾ ಬ್ಯಾಂಕ್‌ ಪ್ರಾದೇಶಿಕ ಕಚೇರಿಯ ಸಹಾಯಕ ಪ್ರಧಾನ ವ್ಯವಸ್ಥಾಪಕ ಕಬೀಂದ್ರ ಕುಮಾರ್ ಸಾಹು ಅವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ. ಗ್ರಾಹಕರ ಹೆಸರಿನಲ್ಲಿ ಚಿನ್ನದ ಸಾಲ ತೆಗೆದುಕೊಂಡು ನಾಪತ್ತೆ ಆಗಿರುವ ಆರೋಪಿಯ ಪತ್ತೆಗೆ ಪೊಲೀಸರು ವಿಶೇಷ ತಂಡ ರಚಿಸಿ ಹುಡುಕಾಟ ನಡೆಸುತ್ತಿದ್ದಾರೆ.

‘ರಘು ಅವರು ಮಲ್ಲೇಶ್ವರದ 15ನೇ ಕ್ರಾಸ್‌ನಲ್ಲಿರುವ ಕೆನರಾ ಬ್ಯಾಂಕ್ ಶಾಖೆಯಲ್ಲಿ 2024ರ ಜುಲೈ 8ರಿಂದ ಹಿರಿಯ ವ್ಯವಸ್ಥಾಪಕರಾಗಿ ಕೆಲಸ ಮಾಡುತ್ತಿದ್ದರು. 41ಕ್ಕೂ ಹೆಚ್ಚು ಗ್ರಾಹಕರ ಹೆಸರಿನಲ್ಲಿ ಚಿನ್ನದ ಮೇಲೆ ಸಾಲ ಪಡೆದು, ಆ ಹಣವನ್ನು ತನ್ನ ಖಾತೆಗೆ ವರ್ಗಾವಣೆ ಮಾಡಿಕೊಂಡು ಬ್ಯಾಂಕ್‌–ಗ್ರಾಹಕರಿಗೆ ವಂಚಿಸಿದ್ದಾರೆ’ ಎಂದು ಪೊಲೀಸರು ಹೇಳಿದರು.

‘ಮನೆಯಲ್ಲಿ ಕಷ್ಟವಿದೆ. ನಿಮ್ಮ(ಗ್ರಾಹಕರು) ಹೆಸರಲ್ಲಿ ಸಾಲ ತೆಗೆದುಕೊಳ್ಳುತ್ತೇನೆ. ನನ್ನ ಬಳಿ ಚಿನ್ನವಿದ್ದು ಅದನ್ನು ಬ್ಯಾಂಕ್‌ನಲ್ಲಿಟ್ಟು ಸಾಲ ತೆಗೆದುಕೊಳ್ಳುತ್ತೇನೆ ಎಂಬುದಾಗಿಯೂ ಗ್ರಾಹಕರಿಗೆ ರಘು ನಂಬಿಸುತ್ತಿದ್ದರು. ಕೆಲವು ಗ್ರಾಹಕರಿಂದ ಸಹಿ ಪಡೆದು ಸಾಲ ಪಡೆದುಕೊಂಡಿದ್ದಾರೆ’ ಎಂದು ಪೊಲೀಸರು ಹೇಳಿದರು.

‘ಮ್ಯಾನೇಜರ್ ಮಾತು ನಂಬಿದ್ದ ಗ್ರಾಹಕರು, ಬ್ಯಾಂಕ್‌ ಖಾತೆಯ ವಿವರ, ಆಧಾರ್ ಕಾರ್ಡ್‌, ಒಟಿಪಿಯನ್ನು ನೀಡಿದ್ದರು. ಜತೆಗೆ ರಘು ಅವರು ಚೆಕ್‌ ಸಹ ಪಡೆದುಕೊಂಡು, ಗ್ರಾಹಕರ ಹೆಸರಿನಲ್ಲಿ ಸಾಲ ಮಂಜೂರಾತಿ ಮಾಡಿಕೊಳ್ಳುತ್ತಿದ್ದರು’ ಎಂದು ಪೊಲೀಸರು ಹೇಳಿದರು.

ಲೆಕ್ಕ ಪರಿಶೋಧನೆ ವೇಳೆ ವಂಚನೆ ಬಯಲು:

‘ಶಾಖೆಯ ಇತರೆ ಕೆಲಸಗಳ ಜತೆಗೆ ಚಿನ್ನದ ಮೇಲಿನ ಸಾಲ ಮಂಜೂರಾತಿ ಕೆಲಸದ ಜವಾಬ್ದಾರಿಯೂ ರಘು ಅವರಿಗೆ ವಹಿಸಲಾಗಿತ್ತು. ಬ್ಯಾಂಕಿನ ಮಾರ್ಗಸೂಚಿ ಪ್ರಕಾರ ಚಿನ್ನದ ಸಾಲಗಳ ತ್ರೈಮಾಸಿಕ ಮರುಮೌಲ್ಯಪಾನ ಹಾಗೂ ಲೆಕ್ಕ ಪರಿಶೋಧನೆ ನಡೆಸಲಾಗಿತ್ತು. ಆಗ, 41 ಸಾಲಗಳು ಕಾಲ್ಪನಿಕ ಸ್ವರೂಪದ್ದು ಎಂಬುದು ಪತ್ತೆಯಾಗಿತ್ತು. ಅಲ್ಲದೇ, ಚಿನ್ನದ ಆಭರಣಗಳು ಇರಲಿಲ್ಲ ಎಂಬುದು ಲೆಕ್ಕ ಪರಿಶೋಧನೆ ಅಧಿಕಾರಿಗಳ ಗಮನಕ್ಕೆ ಬಂದಿತ್ತು. ನಂತರ, ಬ್ಯಾಂಕ್‌ ಸಿಬಿಎಸ್‌ ವ್ಯವಸ್ಥೆ ಹಾಗೂ ಭೌತಿಕ ಲಭ್ಯವಿರುವ ಅರ್ಜಿಗಳಲ್ಲಿನ ಸಾಲದ ಖಾತೆಗಳ ವಿವರವನ್ನು ಪರಿಶೀಲಿಸಿದಾಗ ರಘು ಅವರು ಚಿನ್ನದ ಆಭರಣಗಳನ್ನು ಪಡೆಯದೇ ಅಕ್ಟೋಬರ್‌ 4ರಿಂದ ಡಿಸೆಂಬರ್‌ 9ರ ವರೆಗೆ ಚಿನ್ನದ ಸಾಲ ಮಂಜೂರು ಮಾಡಿಕೊಂಡು ಅಕ್ರಮ ಎಸಗಿರುವುದು ಪತ್ತೆ ಆಗಿತ್ತು. ಬ್ಯಾಂಕ್‌ನ ಹಿರಿಯ ಅಧಿಕಾರಿಗಳು, ರಘು ಅವರನ್ನು ವಿಚಾರಣೆಗೆ ಒಳಪಡಿಸಿದಾಗ ಅಕ್ರಮ ಎಸಗಿರುವುದನ್ನು ಒಪ್ಪಿಕೊಂಡಿದ್ದರು. ಅದಾದ ಮೇಲೆ ಯಾವುದೇ ಮಾಹಿತಿ ನೀಡದೇ ಗೈರಾಗಿದ್ದಾರೆ’ ಎಂದು ಎಫ್ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

‘ಲಕ್ಕಿ ಭಾಸ್ಕರ್’ ಸಿನಿಮಾ ಮಾದರಿಯಲ್ಲಿ ವಂಚನೆ:

‘ಲಕ್ಕಿ ಭಾಸ್ಕರ್’ ಸಿನಿಮಾ ಮಾದರಿಯಲ್ಲಿ ಗ್ರಾಹಕರಿಗೆ ಬ್ಯಾಂಕ್‌ ಮ್ಯಾನೇಜರ್ ವಂಚಿಸಿದ್ದಾರೆ. ‘ರಘು ಅವರ ಮೊಬೈಲ್‌ ಲೊಕೇಷನ್‌ ಪತ್ತೆ ಹಚ್ಚಲಾಗುತ್ತಿದೆ. ಗ್ರಾಹಕರ ಹೇಳಿಕೆ ದಾಖಲು ಮಾಡಿಕೊಳ್ಳಲಾಗುತ್ತಿದೆ. ವೃದ್ಧರು, ಪಿಂಚಣಿದಾರರು, ದೇವಾಲಯದ ಅರ್ಚಕರು ಹಾಗೂ ವ್ಯಾಪಾರಿಗಗಳನ್ನೇ ಗುರಿಯಾಗಿಸಿ ರಘು ಅವರು ವಂಚಿಸಿರುವುದು ಇದುವರೆಗೂ ನಡೆದ ತನಿಖೆಯಿಂದ ಗೊತ್ತಾಗಿದೆ’ ಎಂದು ಮೂಲಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.