
ಬೆಂಗಳೂರು: ರಾಜಧಾನಿಯ ಹೊರವಲಯದಲ್ಲಿರುವ ಬನ್ನೇರುಘಟ್ಟ ಜೈವಿಕ ಉದ್ಯಾನವು ವಿದ್ಯುತ್ ಸ್ವಾವಲಂಬಿಯಾಗುವ ನಿಟ್ಟಿನಲ್ಲಿ ಸೌರ ವಿದ್ಯುತ್ ಸ್ಥಾವರ ಸ್ಥಾಪಿಸಲು ಮುಂದಾಗಿದೆ.
ಸೌರ ವಿದ್ಯುತ್ ಒದಗಿಸುವ ವಾಹನ ಮತ್ತು ಉಪಕರಣಗಳನ್ನು ಮೃಗಾಲಯಗಳಲ್ಲಿ ಬಳಸುತ್ತಿದ್ದರೂ ಹೆಚ್ಚಿನ ಪ್ರಮಾಣದಲ್ಲಿ ವಿದ್ಯುತ್ ಉತ್ಪಾದಿಸುವ ಘಟಕ ಇರಲಿಲ್ಲ. ಇದಕ್ಕಾಗಿ ಯೋಜನೆ ರೂಪಿಸಲಾಗಿದ್ದು, ಮುಂದಿನ ವಾರ ಸೌರ ವಿದ್ಯುತ್ ಘಟಕಕ್ಕೆ ಚಾಲನೆ ಸಿಗಲಿದೆ. ಐದಾರು ತಿಂಗಳಲ್ಲಿ ಸುಸಜ್ಜಿತ ವಿದ್ಯುತ್ ಘಟಕ ಸೇವೆಗೆ ಅಣಿಯಾಗಲಿದೆ. ಬಳಕೆ ಪ್ರಮಾಣ ನೋಡಿಕೊಂಡು ಘಟಕದ ಸಾಮರ್ಥ್ಯ ಹೆಚ್ಚಿಸಲು ಬನ್ನೇರುಘಟ್ಟ ಜೈವಿಕ ಉದ್ಯಾನದ ಆಡಳಿತ ಮಂಡಳಿ ನಿರ್ಧರಿಸಿದೆ.
ಸಾಮಾಜಿಕ ಹೊಣೆಗಾರಿಕೆ ನಿಧಿ ( ಸಿಎಸ್ಆರ್) ಬಳಸಿಕೊಂಡು ಈ ಯೋಜನೆಯನ್ನು ಜಾರಿ ಮಾಡಲಾಗುತ್ತಿದೆ. ಇದರ ಅನುಷ್ಠಾನದ ಜವಾಬ್ದಾರಿಯನ್ನು ಐಸಿಐಸಿಐ ಫೌಂಡೇಷನ್ ಹೊತ್ತುಕೊಂಡಿದೆ. ಉದ್ಯಾನದ ಒಳಗೆ ಮೂರು ಎಕರೆ ವಿಶಾಲ ಪ್ರದೇಶದಲ್ಲಿ ವಿದ್ಯುತ್ ಉತ್ಪಾದನೆ ಘಟಕವನ್ನು ಆರಂಭಿಸಲಾಗುತ್ತಿದೆ.
ಬನ್ನೇರುಘಟ್ಟ ಜೈವಿಕ ಉದ್ಯಾನವೇ ವಿದ್ಯುತ್ ವಿತರಣೆಗೆ ಬೇಕಾದ ಗ್ರಿಡ್ ಅನ್ನು ನಿರ್ಮಿಸಿಕೊಳ್ಳಲಿದೆ. ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ವಿದ್ಯುತ್ ಬಳಕೆ, ಹೆಚ್ಚುವರಿ ವಿದ್ಯುತ್ ಸರಬರಾಜಿಗೆ ಬೇಕಾದ ಅನುಮತಿ ಪಡೆಯುವ ಹೊಣೆ ಹೊತ್ತುಕೊಳ್ಳಲಿದೆ.
ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ಅವಿಭಾಜ್ಯ ಅಂಗವಾಗಿರುವ ಜೈವಿಕ ಉದ್ಯಾನವು 2002ರಿಂದ ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತಿದೆ. ಪ್ರಮುಖ ಪ್ರವಾಸಿ ಕೇಂದ್ರವಾಗಿರುವ ಬನ್ನೇರುಘಟ್ಟ ಜೈವಿಕ ಉದ್ಯಾನವು 780 ಹೆಕ್ಟೇರ್ ಪ್ರದೇಶದಲ್ಲಿ ಹರಡಿಕೊಂಡಿದೆ.
ಉದ್ಯಾನಗಳ ನಿರ್ವಹಣೆ ಸಹಿತ ಹಲವು ಉದ್ದೇಶಗಳಿಗೆ ವಿದ್ಯುತ್ ಬಳಸಲಾಗುತ್ತಿದೆ. ಪ್ರತಿವರ್ಷ ವಿದ್ಯುತ್ ನಿರ್ವಹಣೆಗೆ ₹40 ಲಕ್ಷ ವೆಚ್ಚ ಮಾಡಲಾಗುತ್ತಿದೆ. ಬೆಸ್ಕಾಂನಿಂದಲೇ ವಿದ್ಯುತ್ ಅನ್ನು ಪಡೆದುಕೊಳ್ಳಲಾಗುತ್ತಿದೆ. ತುರ್ತು ಬಳಕೆಗೆ ಜನರೇಟರ್ ವ್ಯವಸ್ಥೆಯಿದೆ.
ಸೌರ ವಿದ್ಯುತ್ ಘಟಕ ಸ್ಥಾಪನೆಯಾದರೆ ವಿದ್ಯುತ್ ವೆಚ್ಚ ಉಳಿತಾಯವಾಗಲಿದೆ. ಅಲ್ಲದೇ ಹೆಚ್ಚುವರಿ ವಿದ್ಯುತ್ ಅನ್ನು ಮಾರಾಟ ಮಾಡಿ ಅದರಲ್ಲೂ ಆದಾಯ ಪಡೆಯುವ ಉದ್ಧೇಶ ಇದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
‘ದೇಶದ ಯಾವುದೇ ಜೈವಿಕ ಉದ್ಯಾನ, ಮೃಗಾಲಯದಲ್ಲೂ ಇಷ್ಟು ದೊಡ್ಡ ಪ್ರಮಾಣದಲ್ಲಿ ಸೌರ ವಿದ್ಯುತ್ ಉತ್ಪಾದನೆ ಮಾಡುವ ಘಟಕವಿಲ್ಲ. ಅಗತ್ಯ ನೋಡಿಕೊಂಡು ಯೋಜನೆ ವಿಸ್ತರಿಸಲಾಗುವುದು’ ಎಂದು ಬನ್ನೇರಘಟ್ಟ ಜೈವಿಕ ಉದ್ಯಾನದ ಕಾರ್ಯನಿರ್ವಾಹಕ ನಿರ್ದೇಶಕ ಎ.ವಿ. ಸೂರ್ಯಸೇನ್ ತಿಳಿಸಿದರು.
ಚೆನ್ನೈನ ವ್ಯಾಂಡಲೂರ್ ಮೃಗಾಲಯದಲ್ಲಿ ಸೌರ ವಿದ್ಯುತ್ ಉತ್ಪಾದನೆ ಘಟಕವಿದ್ದರೂ ಅಲ್ಲಿ ಬರೀ 100 ಕಿಲೋ ವಾಟ್ ವಿದ್ಯುತ್ ಮಾತ್ರ ಉತ್ಪಾದಿಸಲಾಗುತ್ತಿದೆ. ಅದನ್ನು ಬಿಟ್ಟರೆ ಭಾರತದಲ್ಲಿರುವ ಪ್ರಮುಖ ಮೃಗಾಲಯ ಹಾಗೂ ಜೈವಿಕ ಉದ್ಯಾನಗಳಲ್ಲಿ 1 ಮೆಗಾವಾಟ್ ಸೌರ ವಿದ್ಯುತ್ ಉತ್ಪಾದಿಸುವ ಮೊದಲ ಕೇಂದ್ರವೆಂಬ ಹೆಗ್ಗಳಿಕೆಗೆ ಬನ್ನೇರುಘಟ್ಟ ಉದ್ಯಾನ ಪಾತ್ರವಾಗಲಿದೆ.
ಬನ್ನೇರುಘಟ್ಟ ಜೈವಿಕ ಉದ್ಯಾನದ ಭವಿಷ್ಯದ ಇಂಧನ ಅಗತ್ಯವನ್ನು ಸೌರ ವಿದ್ಯುತ್‌ನಿಂದಲೇ ಪೂರೈಸುವ ಯೋಜನೆಗೆ ಮುಂದಿನ ವಾರ ಚಾಲನೆ ನೀಡಲಾಗುವುದು.–ಈಶ್ವರ ಬಿ. ಖಂಡ್ರೆ ಅರಣ್ಯ ಸಚಿವ