ADVERTISEMENT

ಸಾರ್ವಜನಿಕ ಸಾರಿಗೆ ಆರಂಭಕ್ಕೆ ಸರ್ಕಾರಕ್ಕೆ ಬಿಬಿಎಂಪಿ ಮನವಿ

ಶಾಪಿಂಗ್ ಮಾಲ್, ಕೈಗಾರಿಕೆ ತೆರೆಯಲು ಅನುಮತಿ ಕೋರಿದ ಬಿಬಿಎಂಪಿ

​ಪ್ರಜಾವಾಣಿ ವಾರ್ತೆ
Published 18 ಜೂನ್ 2021, 20:46 IST
Last Updated 18 ಜೂನ್ 2021, 20:46 IST
ಗೌರವ್ ಗುಪ್ತ
ಗೌರವ್ ಗುಪ್ತ   

ಬೆಂಗಳೂರು: ‘ಅನ್‌ಲಾಕ್‌‘ಗೆ ಎರಡೇ ದಿನ ಬಾಕಿ ಇದ್ದು, ಎಲ್ಲ ಮಾಲ್‌, ಕೈಗಾರಿಕೆಗಳು ಮತ್ತು ಸಾರ್ವಜನಿಕ ಸಾರಿಗೆ ಆರಂಭಕ್ಕೆ ಅನುಮತಿ ಕೋರಿ ಬಿಬಿಎಂಪಿಯು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದು, ಈ ಸಂಬಂಧ ಸರ್ಕಾರದ ಮಹತ್ವದ ಸಭೆ ಶನಿವಾರ ನಡೆಯಲಿದೆ.

ಕೈಗಾರಿಕೆಗಳು, ಮಾಲ್‌ಗಳು ಮತ್ತು ಸಾರ್ವಜನಿಕ ಸಾರಿಗೆಯನ್ನು ಸೋಮವಾರದಿಂದ ಪುನರಾರಂಭಿಸಲು ಬಿಬಿಎಂಪಿ ಚಿಂತನೆ ನಡೆಸಿದ್ದು, ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರದ ತೀರ್ಮಾನವೇ ಅಂತಿಮ ಎಂದೂ ಹೇಳಿದೆ.

‘ಲಾಕ್‌ಡೌನ್‌ ನಿರ್ಬಂಧಗಳನ್ನು ಹಂತ–ಹಂತವಾಗಿ ಸಡಿಲಿಸಬೇಕಾಗಿದೆ. ಹಲವು ವಲಯಗಳಲ್ಲಿ ನಿರ್ಬಂಧ ಸಡಿಲಿಸಬಹುದು ಎಂದು ಸರ್ಕಾರಕ್ಕೆ ತಿಳಿಸಿದ್ದೇವೆ’ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್‌ ಗುಪ್ತ ‘ಪ್ರಜಾವಾಣಿ‘ಗೆ ತಿಳಿಸಿದರು.

ADVERTISEMENT

‘ಕೋವಿಡ್‌ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಆದರೆ, ಮೂರನೇ ಅಲೆಯ ಸಾಧ್ಯತೆಯೂ ಇದೆ. ನಾವು ಎಚ್ಚರದಿಂದಿರಬೇಕಾದುದು ಅವಶ್ಯಕ. ಆದರೂ, ಆರ್ಥಿಕ ಚಟುವಟಿಕೆಗಳು ಮತ್ತೆ ಚುರುಕಾಗಲು ಕೆಲವು ವಲಯಗಳಲ್ಲಿ ನಿರ್ಬಂಧ ಸಡಿಲಿಕೆ ಅನಿವಾರ್ಯವಾಗಿದೆ’ ಎಂದೂ ಹೇಳಿದರು.

ಈಗಾಗಲೇ ನಗರದಲ್ಲಿ ವಾರಾಂತ್ಯ ಕರ್ಫ್ಯೂ ಜಾರಿಯಲ್ಲಿದೆ. ಸೋಮವಾರದಿಂದ ನಿರ್ಬಂಧ ಸಡಿಲಿಕೆಗೆ ಮನವಿ ಮಾಡಲಾಗಿದೆ. ತಜ್ಞರ ಸಲಹಾ ಸಮಿತಿಯು, ಕೆಲವು ಆದ್ಯತಾ ವಲಯಗಳಲ್ಲಿ ಹಂತ–ಹಂತವಾಗಿ ಕೋವಿಡ್ ನಿರ್ಬಂಧ ಸಡಿಲಿಸಬೇಕು ಎಂದೂ ಸಲಹೆ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.