ADVERTISEMENT

ಬಿಬಿಎಂಪಿ ಬಜೆಟ್‌ಗೆ ಸಚಿವ ಸಂಪುಟ ಒಪ್ಪಿಗೆ

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2019, 20:22 IST
Last Updated 26 ಆಗಸ್ಟ್ 2019, 20:22 IST
   

ಬೆಂಗಳೂರು: ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾದ ನಂತರ ತಡೆಹಿಡಿಯಲಾಗಿದ್ದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಪ್ರಸಕ್ತ ಸಾಲಿನ ಬಜೆಟ್‌ಗೆ ಸೋಮವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ.

ಸಾಕಷ್ಟು ಯೋಜನೆಗಳಿಗೆ ನಿಗದಿಪಡಿಸಿದ್ದ ಅನುದಾನದಲ್ಲಿ ವ್ಯತ್ಯಾಸ ಮಾಡಲಾಗಿದ್ದು, ಕೆಲ ಯೋಜನೆಗಳಿಗೆ ಹಣ ಕಡಿತ ಮಾಡಲಾಗಿದೆ. ಕೆಲವಕ್ಕೆ ಹೆಚ್ಚಳ ಮಾಡಲಾಗಿದೆ. ಸುಮಾರು ₹9 ಸಾವಿರ ಕೋಟಿ ಮೊತ್ತದ ಬಜೆಟ್‌ಗೆ ‌ಸಭೆ ಒಪ್ಪಿಗೆ ನೀಡಿದ್ದು, ಉಳಿಕೆ ಮೊತ್ತಕ್ಕೆ ಪೂರಕ ಬಜೆಟ್ ರೂಪಿಸುವಂತೆ ಸಲಹೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಬಿಬಿಎಂ‍ಪಿ ಸಭೆಯು ₹12,957.79 ಕೋಟಿ ಮೊತ್ತದ ಬಜೆಟ್‌ಗೆ ಒಪ್ಪಿಗೆ ನೀಡಿದ್ದು,ನಂತರ ನಗರಾಭಿವೃದ್ಧಿ ಇಲಾಖೆಯುಬಜೆಟ್ ಗಾತ್ರವನ್ನು ₹11648.90 ಕೋಟಿಗೆ ಮಿತಿಗೊಳಿಸಿತ್ತು. ಉಳಿದ ₹1308.89 ಕೋಟಿಗೆ ಪೂರಕ ಅಂದಾಜು ಮಂಡಿಸುವ ಮೂಲಕ ಹೊಂದಿಸಿಕೊಳ್ಳುವಂತೆ ಸಲಹೆ ಮಾಡಿತ್ತು.

ADVERTISEMENT

ಹಿನ್ನೆಲೆ: ವೈಟ್ ಟಾಪಿಂಗ್ ಸೇರಿದಂತೆ ಕೆಲ ಕಾಮಗಾರಿಗಳಲ್ಲಿ ಅಕ್ರಮಗಳು ನಡೆದಿದ್ದು, ಮೈತ್ರಿ ಸರ್ಕಾರ ಅಧಿಕಾರ ಕಳೆದುಕೊಳ್ಳುವ ಮುನ್ನ ತರಾತುರಿಯಲ್ಲಿ ಸಾಕಷ್ಟು ಕಾಮಗಾರಿಗಳಿಗೆ ಒಪ್ಪಿಗೆ ನೀಡಲಾಗಿದೆ ಎಂದು ಬಿಜೆಪಿ ಶಾಸಕರು ಆರೋಪಿಸಿದ್ದರು. ಅಕ್ರಮದ ಆರೋಪ ಕೇಳಿಬಂದ ಕಾಮಗಾರಿಗಳ ತನಿಖೆಗೆ ಆದೇಶಿಸಿದ್ದು, ಬಜೆಟ್ ಜಾರಿಗೂ ತಡೆ ನೀಡಲಾಗಿತ್ತು. ಈಗ ಸಂಪುಟ ಸಭೆಯಲ್ಲಿ ಚರ್ಚಿಸಿದ ನಂತರ ಒಪ್ಪಿಗೆ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.