ADVERTISEMENT

ಬಿಬಿಎಂಪಿ ಬಜೆಟ್‌: ಸಂಗ್ರಹವಾಗದ ಹಣದತ್ತ ಚಿತ್ತ

ಸಂಪನ್ಮೂಲ ಕ್ರೋಡೀಕರಣಕ್ಕೆ ದ್ವಿಗುಣಗೊಂಡ ನಿರೀಕ್ಷೆ

ಆರ್. ಮಂಜುನಾಥ್
Published 2 ಏಪ್ರಿಲ್ 2025, 23:44 IST
Last Updated 2 ಏಪ್ರಿಲ್ 2025, 23:44 IST
ನಾಡಪ್ರಭು ಕೆಂಪೇಗೌಡ
ನಾಡಪ್ರಭು ಕೆಂಪೇಗೌಡ   

ಬೆಂಗಳೂರು: ವರ್ಷಗಳಿಂದ ಸಂಗ್ರಹವಾಗದ ಸಂಪನ್ಮೂಲಗಳಿಂದಲೇ ದುಪ್ಪಟ್ಟಿಗಿಂತ ಹೆಚ್ಚು ಹಣ ಸಂಗ್ರಹಿಸುವತ್ತ ಚಿತ್ತ ಹರಿಸಿರುವ ಬಿಬಿಎಂಪಿ ಬಜೆಟ್‌, ಕಳೆದ ವರ್ಷಕ್ಕಿಂತ ಶೇ 50ರಷ್ಟು ಹೆಚ್ಚು ಸ್ವೀಕೃತಿಯ ನಿರೀಕ್ಷೆ ಹೊಂದಿದೆ.

2025–26ನೇ ಸಾಲಿನಲ್ಲಿ ರಾಜ್ಯ, ಕೇಂದ್ರ ಸರ್ಕಾರದ ಅನುದಾನ ಹಾಗೂ ವಿಶ್ವಬ್ಯಾಂಕ್‌ ಸಾಲವನ್ನು ಹೊರತುಪಡಿಸಿದಂತೆ ಬಿಬಿಎಂಪಿ ₹11,149.17 ಕೋಟಿ ಸಂಪನ್ಮೂಲವನ್ನು ಸಂಗ್ರಹಿಸಬೇಕಿದೆ. 2024–25ನೇ ಸಾಲಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅನುದಾನಗಳನ್ನು ಸೇರಿಸಿಯೂ ಸಂಗ್ರಹಿಸಿರುವ ಸಂಪನ್ಮೂಲ ₹10,318 ಕೋಟಿಯಷ್ಟಿದೆ. ಹೀಗಾಗಿ, ಇರುವ ಸಂಗ್ರಹವನ್ನೇ ಹೆಚ್ಚಿಸಿಕೊಳ್ಳಲು ನಿರ್ಧರಿಸಿದೆ.

ಜಾಹೀರಾತು ಕರ, ಇ–ಖಾತೆ ವರ್ಗಾವಣೆ, ಸ್ವತ್ತುಗಳ ಬಾಡಿಗೆ, ಚಿತಾಗಾರದ ಶುಲ್ಕ, ಒಎಫ್‌ಸಿ ತೆರಿಗೆಗಳನ್ನು ಕಳೆದ ವರ್ಷಕ್ಕಿಂತ ಬಹುತೇಕ ದ್ವಿಗುಣಗೊಳಿಸಿಕೊಳ್ಳಲು ಅಂದಾಜಿಸಲಾಗಿದೆ. ಈ ಸಂಗ್ರಹಗಳು ಹಿಂದಿನ ವರ್ಷಗಳಲ್ಲಿ ನಿರೀಕ್ಷೆಗಿಂತ ಅರ್ಧದಷ್ಟು ಮಾತ್ರ ಸಾಧನೆ ಮಾಡಿವೆ.

ADVERTISEMENT

ರಾಜ್ಯ ಸರ್ಕಾರದ ₹4 ಸಾವಿರ ಕೋಟಿ ಅನುದಾನದ ಜೊತೆಗೆ ₹2 ಸಾವಿರ ಕೋಟಿಯನ್ನು ಬಿಬಿಎಂಪಿ ಪ್ರತಿವರ್ಷ ವಿಶೇಷ ಉದ್ದೇಶಿಕ ಘಟಕಕ್ಕೆ (ಎಸ್‌ಪಿವಿ) ಒದಗಿಸಬೇಕು. ಜಾಹೀರಾತು ನೀತಿ, ಪ್ರೀಮಿಯಂ ಎಫ್‌ಎಆರ್‌ನಿಂದ ಸಂಗ್ರಹವಾಗುವ ಹಣವನ್ನು ನೀಡಲಾಗುತ್ತದೆ ಎಂದು ಹೇಳಲಾಗಿದ್ದು, ಅದು ಸಂಗ್ರಹವಾಗುವ ಲಕ್ಷಣಗಳಿಲ್ಲ.

ಇನ್ನು ‘ಬ್ರ್ಯಾಂಡ್‌ ಬೆಂಗಳೂರು’ ಯೋಜನೆಗಳಿಗಾಗಿಯೇ ಈ ವರ್ಷ ₹1,360 ಕೋಟಿ ಒದಗಿಸಬೇಕು. ಪಾಲಿಕೆ ಸಂಪನ್ಮೂಲದಿಂದಲೇ ಹಣ ಎಸ್ಕ್ರೊಗೆ ವರ್ಗಾವಣೆಯಾಗಬೇಕು. ಅದು ಸಾಧ್ಯವಾಗದಿದ್ದರೆ ಬ್ರ್ಯಾಂಡ್‌ ಬೆಂಗಳೂರು ಯೋಜನೆಗಳು ಸ್ಥಗಿತವಾಗುತ್ತವೆ.

ಆಡಳಿತ, ಸಿಬ್ಬಂದಿ ವೆಚ್ಚ ಹಾಗೂ ಘನತ್ಯಾಜ್ಯ ನಿರ್ವಹಣೆಗೆ ₹3,500 ಕೋಟಿ ವೆಚ್ಚವಾಗಲಿದೆ. ಕಾರ್ಯಾಚರಣೆ ಹಾಗೂ ನಿರ್ವಹಣೆಗೆ ಸುಮಾರು ₹2 ಸಾವಿರ ಕೋಟಿಯಾಗಲಿದೆ. ಬಿಬಿಎಂಪಿ ಆಸ್ತಿ ತೆರಿಗೆಯ ಬಾಬ್ತಿನಲ್ಲಿ ಬರುವ ಹಣವೆಲ್ಲ ಇದಕ್ಕೇ ಸರಿಹೊಂದುತ್ತದೆ. ಇನ್ನುಳಿದ ನಿರೀಕ್ಷಿತ ಆದಾಯಗಳು ಬಂದರೆ ಮಾತ್ರ ವಾರ್ಡ್‌ ಮಟ್ಟದ ಕಾಮಗಾರಿಗಳು ಆರಂಭವಾಗುತ್ತವೆ.

ವಲಯಗಳಲ್ಲಿ ತಾರತಮ್ಯ: ಕೆಲವು ವರ್ಷಗಳಿಂದ ಹೇಳುತ್ತಿದ್ದ ವಲಯವಾರು ಬಜೆಟ್‌ ಮಂಡನೆಯಾಗದಿದ್ದರೂ, ಯಾವ ವಲಯಕ್ಕೆ ಯಾವ ಕಾರ್ಯಕ್ರಮದಲ್ಲಿ ಎಷ್ಟು ಹಣ ನೀಡಲಾಗುತ್ತಿದೆ ಎಂಬ ವಿವರವನ್ನು ‘ಆಯವ್ಯಯದ ಅಂದಾಜುಗಳು’ ಪುಸ್ತಕದಲ್ಲಿ ವಿವರಿಸಲಾಗಿದೆ. ಬಹುತೇಕ ಎಲ್ಲ ಕಾಮಗಾರಿಗಳನ್ನೂ ಕೇಂದ್ರದಲ್ಲೇ ಉಳಿಸಿಕೊಂಡಿದ್ದು, ಅತಿಹೆಚ್ಚು ತೆರಿಗೆ ಪಾವತಿಸುವ ಮಹದೇವಪುರಕ್ಕೆ ಕಡಿಮೆ ಕಾಮಗಾರಿಗಳನ್ನು ನೀಡಲಾಗಿದೆ.

ಕೆಂಪೇಗೌಡ ಜಯಂತಿಗೆ ಅನುದಾನ ಕಡಿತ

ಬಿಬಿಎಂಪಿ ಬಜೆಟ್‌ನಲ್ಲಿ ನಾಡಪ್ರಭು ಕೆಂಪೇಗೌಡ ದಿನಾಚರಣೆಗೆ ₹50 ಲಕ್ಷ ಅನುದಾನವನ್ನು ಕಡಿತ ಮಾಡಲಾಗಿದೆ. ಕಳೆದ ವರ್ಷ ₹3 ಕೋಟಿಯಿದ್ದ ಅನುದಾನ ಈ ವರ್ಷ ₹2.5 ಕೋಟಿಯಾಗಿದೆ. ಕಡಲೆಕಾಯಿ ಪರಿಷೆಗೆ ನೀಡಲಾಗುವ ಅನುದಾನವನ್ನು ₹60 ಲಕ್ಷದಿಂದ ₹50 ಲಕ್ಷಕ್ಕೆ ಇಳಿಸಲಾಗಿದೆ. ನಗರದಲ್ಲಿ ದಸರಾ ಉತ್ಸವಗಳಿಗೂ ₹20 ಲಕ್ಷ ಕಡಿತ ಮಾಡಲಾಗಿದೆ.

‘ಜನರ ಕಾಮಗಾರಿಗೆ ಹಣವೇ ಇಲ್ಲ’

‘ಬೃಹತ್ ಯೋಜನೆಗಳನ್ನು ತೋರಿಸಿ ಆಕಾಶಕ್ಕೆ ಏಣಿ ಹಾಕಲು ಹೊರಟಿದ್ದಾರೆ. ಕಳೆದ ವರ್ಷದ ₹13 ಸಾವಿರ ಕೋಟಿ ಬಜೆಟ್‌ ಅನ್ನೇ ತಲುಪಲು ಸಾಧ್ಯವಾಗಿಲ್ಲ. ಕಳೆದ ವರ್ಷ ಹೇಳಿದ್ದ ಯೋಜನೆಗಳನ್ನೇ ಮತ್ತೆ ಹೇಳಲಾಗಿದೆ. ಸರ್ಕಾರ ಹೆಚ್ಚು ಅನುದಾನ ನೀಡಿದರೂ ಅದು ಎಸ್‌ಪಿವಿಗೇ ಹೋಗುತ್ತದೆ. ನಗರದ ಜನಕ್ಕೆ ಅಗತ್ಯವಾಗಿ ಬೇಕಾದ ಕಾಮಗಾರಿ ನಡೆಸಲು ಬಿಬಿಎಂಪಿಯಲ್ಲಿ ಹಣವೇ ಇಲ್ಲ’ ಎಂದು ಬಿಬಿಎಂಪಿ ಮಾಜಿ ಆಡಳಿತ ಪಕ್ಷದ ನಾಯಕ ಪದ್ಮನಾಭರೆಡ್ಡಿ ದೂರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.