ಬೆಂಗಳೂರು: ಬಿಬಿಎಂಪಿಯ 2025–26ನೇ ಸಾಲಿನ ಬೃಹತ್ ಗಾತ್ರದ ಬಜೆಟ್ ಅನ್ನು ₹509.69 ಕೋಟಿಯಷ್ಟು ಹೆಚ್ಚಿಸಿ, ಸರ್ಕಾರ ಅನುಮೋದನೆ ನೀಡಿದೆ.
ಬೆಂಗಳೂರು ನಗರಾಭಿವೃದ್ಧಿ ಸಚಿವರ ವಿವೇಚನಾ ಕೋಟಾ ಅನುದಾನದ ಮೊತ್ತವನ್ನು ₹224.69 ಕೋಟಿಯಷ್ಟು ಹೆಚ್ಚಿಸಲಾಗಿದೆ.
ಬೆಂಗಳೂರು ಮಹಾನಗರ ಪಾಲಿಕೆ ನಿಯಮ (ಆರ್ಥಿಕ ಹೊಣೆಗಾರಿಕೆ ಮತ್ತು ಆಯವ್ಯಯ ನಿರ್ವಹಣೆ) 2021 4(2)ರ ಮಿತಿಗಿಂತ ₹1,806.66 ಕೋಟಿಯಷ್ಟು ಹೆಚ್ಚುವರಿ ಗಾತ್ರದ ಬಜೆಟ್ ತಯಾರಿಸಲಾಗಿದೆ ಎಂದು ಹೇಳಿ, ನಿಯಮ 4(3)ರನ್ವಯ ಮತ್ತಷ್ಟು ಮಾರ್ಪಾಟು, ಹೆಚ್ಚಳ ಮಾಡಿ 2025–26ನೇ ಸಾಲಿನ ಬಜೆಟ್ ಅಂದಾಜುಗಳಿಗೆ ಸರ್ಕಾರ ಅನುಮೋದನೆ ನೀಡಿದೆ.
2024–25ನೇ ಸಾಲಿನ ಸ್ವೀಕೃತಿಯ ಪ್ರಗತಿಯ ಆಧಾರದಲ್ಲಿ, ಆದಾಯ ಸೋರಿಕೆ ತಡೆಗಟ್ಟುವಿಕೆ, ಕರ ಸಂಗ್ರಹದಲ್ಲಿ ದಕ್ಷತೆ, ತೆರಿಗೆ ವ್ಯಾಪ್ತಿಯ ಹಿಗ್ಗಿಸುವಿಕೆ, ನೂತನ ಜಾಹೀರಾತು ನೀತಿ, ಪ್ರೀಮಿಯಂ ಎಫ್‌ಎಆರ್ ನೀತಿ, ಸರ್ಕಾರದ ಹೆಚ್ಚುವರಿ ಅನುದಾನ ಮತ್ತು ವಿಶ್ವ ಬ್ಯಾಂಕ್ ನೆರವನ್ನು ಗಣನೆಗೆ ತೆಗೆದುಕೊಂಡು, 2025–26ನೇ ಸಾಲಿನ ಬಜೆಟ್ ಅನ್ನು ಪಾಲಿಕೆಯ ಅಗತ್ಯಕ್ಕನುಸಾರವಾಗಿ ತಯಾರಿಸಲಾಗಿದೆ. ಆದರೆ, ಇದು ಬಿಬಿಎಂಪಿ ನಿಯಮದ ಮಿತಿಗಿಂತ ಹೆಚ್ಚಾಗಿದೆ ಎಂದು ಅನುಮೋದನೆ ಪತ್ರದಲ್ಲಿ ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯವರು ತಿಳಿಸಿದ್ದಾರೆ.
‘ಮಿತಿ ಮೀರಲಾಗಿದೆ’ ಎಂದು ಹೇಳಿರುವ ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯವರೇ ಏಳು ವಿಷಯಗಳಿಗೆ ಹೆಚ್ಚು ಅನುದಾನವನ್ನು ನಿಗದಿಪಡಿಸಿ, ಬಜೆಟ್ ಗಾತ್ರವನ್ನು ಹೆಚ್ಚಿಸಿ ಅನುಮೋದನೆ ನೀಡಿದ್ದಾರೆ.
ಬಿಬಿಎಂಪಿಯು ಹೆಚ್ಚುವರಿಯಾಗಿ ಸಂಗ್ರಹಿಸಬಹುದಾದ ಆದಾಯವನ್ನು ಖಾತರಿಪಡಿಸಿಕೊಂಡು, ಹೆಚ್ಚುವರಿ ಅನುದಾನವನ್ನು ಕಾಮಗಾರಿಗಳಲ್ಲಿ ಬಳಸಿಕೊಳ್ಳಲು 2025–26ನೇ ಸಲಿನ ಬಜೆಟ್‌ನಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಲಾಗಿದೆ.
ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಸ್.ಆರ್. ಉಮಾಶಂಕರ್ ಅವರೇ ಬಿಬಿಎಂಪಿಯ ಆಡಳಿತಾಧಿಕಾರಿಯಾಗಿದ್ದು, ಮಾರ್ಚ್ 29ರಂದು ಅವರ ಅನುಮೋದನೆಯೊಂದಿಗೆ ಬಜೆಟ್ ಮಂಡಿಸಲಾಗಿತ್ತು. ನಗರರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿ ಅವರೇ ಬಿಬಿಎಂಪಿ ಬಜೆಟ್ ಅನ್ನು ಪರಿಷ್ಕರಿಸಿ, ಮಾರ್ಚ್ 31ರಂದು ಅನುಮೋದಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.