ಬೆಂಗಳೂರು: ಬಿಬಿಎಂಪಿ ಶಾಲಾ–ಕಾಲೇಜುಗಳಿಗೆ ಶಿಕ್ಷಕರನ್ನು ನೇಮಕ ಮಾಡಿಕೊಳ್ಳುವ ಸಂಬಂಧ ಎರಡು ವರ್ಷಗಳ ಹಿಂದೆ ನೀಡಿದ್ದ ಭರವಸೆಯನ್ನೂ ಈಡೇರಿಸದೆ, 378 ಅತಿಥಿ ಶಿಕ್ಷಕರನ್ನು ಎಸ್‌ಡಿಎಂಸಿ, ಸಿಡಿಸಿ ಮೂಲಕ ನಿಯೋಜಿಸಿಕೊಳ್ಳಲು ಪಾಲಿಕೆ ಮುಂದಾಗಿದೆ.
ಹೊರಗುತ್ತಿಗೆ ವ್ಯವಸ್ಥೆಯನ್ನು ತೆಗೆದುಹಾಕಿ, ಶಿಕ್ಷಣ ಇಲಾಖೆಯಿಂದಲೇ ನೇರವಾಗಿ ಬಿಬಿಎಂಪಿ ಶಾಲಾ– ಕಾಲೇಜುಗಳಿಗೆ ಶಿಕ್ಷಕರು/ ಉಪನ್ಯಾಸಕರನ್ನು ನೇಮಿಸಿಕೊಳ್ಳುವ ಭರವಸೆ ನೀಡಿ ಒಂದೂವರೆ ವರ್ಷವಾದರೂ ಇದುವರೆಗೆ ಪ್ರಕ್ರಿಯೆ ಆರಂಭವಾಗಿಲ್ಲ.
ಖಾಲಿ ಹುದ್ದೆಗಳಿಗೆ ಖಾಸಗಿ ಸಂಸ್ಥೆಗಳ ಮೂಲಕ ಹೊರಗುತ್ತಿಗೆ ಆಧಾರದಲ್ಲಿ ಶಿಕ್ಷಕರನ್ನು ನೇಮಿಸಿಕೊಳ್ಳಲಾಗುತ್ತಿತ್ತು. ಪ್ರತಿ ವರ್ಷವೂ ಗುತ್ತಿಗೆ ನವೀಕರಣವಾಗುತ್ತಿತ್ತು. 2024ರ ಮೇ ತಿಂಗಳಲ್ಲಿ ಡಿಟೆಕ್ಟೀವ್, ಸೆಕ್ಯುರಿಟಿ ಏಜೆನ್ಸಿ ಮೂಲಕ ಹೊರಗುತ್ತಿಗೆಯಲ್ಲಿ ಶಿಕ್ಷಕರನ್ನು ನೇಮಿಸಿಕೊಳ್ಳಲು ಒಪ್ಪಂದವಾಗಿತ್ತು. ಇದಕ್ಕೆ ಪ್ರತಿರೋಧ ಉಂಟಾದಾಗ, ಆ ಒಪ್ಪಂದವನ್ನು ರದ್ದುಪಡಿಸಲಾಗಿತ್ತು. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಬಿಬಿಎಂಪಿ ಶಾಲೆಗಳಿಗೆ ಶಿಕ್ಷಣ ಇಲಾಖೆಯಿಂದಲೇ ಶಿಕ್ಷಕರನ್ನು ನೇಮಿಸಲಾಗುತ್ತದೆ ಎಂದು ಹೇಳಿದ್ದರು.
‘ಬಿಬಿಎಂಪಿ ಶಾಲಾ–ಕಾಲೇಜುಗಳಲ್ಲಿ ಬೋಧಿಸುತ್ತಿರುವ ಶೇ 15ರಿಂದ ಶೇ 20ರಷ್ಟು ಶಿಕ್ಷಕರಿಗೆ ಸೂಕ್ತ ವಿದ್ಯಾರ್ಹತೆ ಇಲ್ಲ. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಬಿಬಿಎಂಪಿ ಶಾಲೆಗಳಿಗೆ ಮುಖ್ಯ ಶಿಕ್ಷಕರು ಹಾಗೂ ಸಹ ಶಿಕ್ಷಕರನ್ನು ಒದಗಿಸುತ್ತದೆ. ನಮ್ಮಲ್ಲಿ ಕಾಯಂ ಶಿಕ್ಷಕರ ಸಂಖ್ಯೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಹೊರಗುತ್ತಿಗೆಯಲ್ಲಿರುವ ಎಲ್ಲ ಶಿಕ್ಷಕರೂ ಮುಂದುವರಿಯುವ ಅರ್ಹತೆ ಹೊಂದಿಲ್ಲ’ ಎಂದು ಬಿಬಿಎಂಪಿಯ ಅಂದಿನ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು 2024ರ ಜನವರಿ 8ರಂದು ಹೇಳಿದ್ದರು.
‘ಬಿಬಿಎಂಪಿ ಶಾಲೆ–ಕಾಲೇಜುಗಳಲ್ಲಿ ಶಿಕ್ಷಕರು ಹಾಗೂ ಉಪನ್ಯಾಸಕರನ್ನು ಹಿಂದಿನಂತೆಯೇ ಏಜೆನ್ಸಿ ಮೂಲಕ ಮುಂದುವರಿಸಬೇಕು. ‘ಹೊರಗುತ್ತಿಗೆ’ ತೆಗೆದುಹಾಕಿ, ಬಿಬಿಎಂಪಿ ವತಿಯಿಂದಲೇ ಗುತ್ತಿಗೆ ಆಧಾರದಲ್ಲಿ ನೇಮಿಸಿಕೊಳ್ಳಬೇಕು. ಸೇವಾ ಭದ್ರತೆ ನೀಡಬೇಕು’ ಎಂದು ಆಗ್ರಹಿಸಿ ಹೊರಗುತ್ತಿಗೆ ಶಿಕ್ಷಕರು ಮುಷ್ಕರ ನಡೆಸಿದ್ದರು.
ಶಾಲಾಭಿವೃದ್ಧಿ ಮತ್ತು ಮೇಲಸ್ತುವಾರಿ ಸಮಿತಿ (ಎಸ್‌ಡಿಎಂಸಿ) ಹಾಗೂ ಕಾಲೇಜು ಅಭಿವೃದ್ಧಿ ಮಂಡಳಿಯಿಂದ (ಸಿಡಿಸಿ) ಶಿಕ್ಷಕರು, ಉಪನ್ಯಾಸಕರನ್ನು ನಿಯೋಜಿಸಿಕೊಳ್ಳಲಾಗುತ್ತದೆ. ಅರ್ಹತೆ ಇರುವವರು ಅಲ್ಲಿ ಅರ್ಜಿ ಸಲ್ಲಿಸಿ ಸೇರಿಕೊಳ್ಳಬಹುದು ಎಂದು ಬಿಬಿಎಂಪಿ ಅಧಿಕಾರಿಗಳು ಹೇಳಿದ್ದರು. 2024–25ನೇ ಸಾಲಿನಲ್ಲಿ ಈ ಪ್ರಕ್ರಿಯೆ ನಡೆದು, ಅತಿಥಿ ಶಿಕ್ಷಕರು ಹಾಗೂ ಉಪನ್ಯಾಸಕರನ್ನು ನೇಮಿಸಿಕೊಳ್ಳಲಾಗಿತ್ತು.
2025–26ನೇ ಸಾಲಿನಲ್ಲಿ ಶಿಕ್ಷಕರ ಕೊರತೆಯನ್ನು ಲೆಕ್ಕಾಚಾರ ಮಾಡಿರುವ ಬಿಬಿಎಂಪಿ, ಎಸ್‌ಡಿಎಂಸಿ ಮತ್ತು ಸಿಡಿಸಿ ಮೂಲಕ ಅತಿಥಿ ಶಿಕ್ಷಕರು ಹಾಗೂ ಉಪನ್ಯಾಸಕರನ್ನು ವಿದ್ಯಾರ್ಥಿಗಳಿಗೆ ಅನುಗುಣವಾಗಿ ನೇಮಿಸಿಕೊಳ್ಳಲು ನಿರ್ಧರಿಸಿದೆ. ಈ ಬಗ್ಗೆ ಮುಖ್ಯ ಆಯುಕ್ತರು ಸುತ್ತೋಲೆ ಹೊರಡಿಸಿದ್ದು, ಜೂನ್ 16ರೊಳಗೆ ಅತಿಥಿ ಶಿಕ್ಷಕರ ನೇಮಕ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ಸೂಚಿಸಿದ್ದಾರೆ.
‘ನಮ್ಮ ಅನುಭವ ಶ್ರಮಕ್ಕೆ ಬೆಲೆ ಇಲ್ಲ’
‘ಹೊರಗುತ್ತಿಗೆಯನ್ನು ತೆಗೆದುಹಾಕಿ ಶಿಕ್ಷಣ ಇಲಾಖೆಯಿಂದಲೇ ಕಾಯಂ ನೇಮಕ ಮಾಡಿಕೊಳ್ಳುವ ಭರವಸೆ ನೀಡಲಾಗಿತ್ತು. ಕಳೆದ ಶೈಕ್ಷಣಿಕ ಸಾಲಿನಲ್ಲೇ ಈ ಪ್ರಕ್ರಿಯೆ ನಡೆಯಬೇಕಾಗಿತ್ತಾದರೂ ಮೊದಲ ವರ್ಷವಾದ್ದರಿಂದ ಅತಿಥಿ ಶಿಕ್ಷಕರನ್ನಾಗಿ ನೇಮಿಸಿಕೊಳ್ಳುತ್ತೇವೆ. ಮುಂದಿನ ವರ್ಷ ಕಾಯಂ ನೇಮಕವಾಗುತ್ತದೆ ಎಂದು ಹೇಳಿದ್ದರು. ಆದರೆ 2025–26ರ ಶೈಕ್ಷಣಿಕ ವರ್ಷಕ್ಕೂ ಅತಿಥಿ ಶಿಕ್ಷಕರನ್ನೇ ನೇಮಿಸಿಕೊಳ್ಳಲಾಗುತ್ತಿದೆ. 10–15 ವರ್ಷ ಬೋಧನೆ ಮಾಡಿದವರು ಪ್ರತಿ ವರ್ಷ ತಮ್ಮ ಸಾಧನೆ ಹೇಳಿಕೊಳ್ಳಬೇಕಾಗಿದೆ. ನಮ್ಮ ಅನುಭವ ಶ್ರಮಕ್ಕೆ ಬಿಬಿಎಂಪಿಯಲ್ಲಿ ಬೆಲೆಯೇ ಇಲ್ಲ’ ಎಂದು ಶಿಕ್ಷಕರೊಬ್ಬರು ಅಳಲು ತೋಡಿಕೊಂಡರು.
‘ಸರ್ಕಾರದಲ್ಲಿದೆ ಪ್ರಸ್ತಾವ’
‘ಶಿಕ್ಷಣ ಇಲಾಖೆಯಿಂದ ಬಿಬಿಎಂಪಿ ಶಾಲಾ–ಕಾಲೇಜುಗಳಿಗೆ ಶಿಕ್ಷಕರನ್ನು ನೇಮಿಸಿಕೊಳ್ಳುವ ಪ್ರಸ್ತಾವ ಸರ್ಕಾರದ ಮುಂದಿದೆ. ಅಲ್ಲಿ ಇದುವರೆಗೆ ಯಾವುದೇ ನಿರ್ಧಾರವಾಗಿಲ್ಲ. ಹೀಗಾಗಿ ಅತಿಥಿ ಶಿಕ್ಷಕರನ್ನು ನಿಯೋಜಿಸಿಕೊಳ್ಳಲಾಗುತ್ತಿದೆ. 2024–25ನೇ ಸಾಲಿನಲ್ಲಿ ಬೋಧಿಸಿದ್ದ ಅತಿಥಿ ಶಿಕ್ಷಕರನ್ನು ಏಪ್ರಿಲ್‌ನಲ್ಲೇ ಸೇವೆಯಿಂದ ಬಿಡುಗಡೆ ಮಾಡಲಾಗಿದೆ. 2025–26ನೇ ಸಾಲಿಗೆ ಅವರೂ ಅತಿಥಿ ಶಿಕ್ಷಕರಾಗಿ ಬರಬಹುದು. 1:3 ಅನುಪಾತದಲ್ಲಿ ಅವರಿಗೆ ಆದ್ಯತೆ ನೀಡಲಾಗುತ್ತದೆ’ ಎಂದು ಶಿಕ್ಷಣ ಇಲಾಖೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.