ADVERTISEMENT

ಕೋವಿಡ್-19: ಹೋಮ್ ಡೆಲಿವರಿ ಸಹಾಯವಾಣಿಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2020, 7:55 IST
Last Updated 12 ಏಪ್ರಿಲ್ 2020, 7:55 IST
ಕಾರ್ಯಕ್ರಮದಲ್ಲಿ ಸಹಾಯವಾಣಿಯ ಸಂಖ್ಯೆಯನ್ನು ಗಣ್ಯರು ಪ್ರದರ್ಶಿಸಿದರು
ಕಾರ್ಯಕ್ರಮದಲ್ಲಿ ಸಹಾಯವಾಣಿಯ ಸಂಖ್ಯೆಯನ್ನು ಗಣ್ಯರು ಪ್ರದರ್ಶಿಸಿದರು   

ಬೆಂಗಳೂರು: ಕೋವಿಡ್-19 ಸೋಂಕು ಹರಡದಂತೆ ತಡೆಯುವ ಸಂಬಂಧ ಅಗತ್ಯ ವಸ್ತುಗಳನ್ನು ಮನೆಗೆ ತಲುಪಿಸುವ (ಹೋಮ್ ಡೆಲಿವರಿ) ಸಹಾಯವಾಣಿಗೆ ಮೇಯರ್ ಎಂ.ಗೌತಮ್ ಕುಮಾರ್ ಭಾನುವಾರ ಚಾಲನೆ ನೀಡಿದರು.

ಕೋವಿಡ್-19 ಸಂಬಂಧ ಅಗತ್ಯ ವಸ್ತುಗಳನ್ನು ಮನೆ ಮೆನೆಗೆ ತಲುಪಿಸುವ ಉದ್ದೇಶದಿಂದ ಈಗಾಗಲೇ ಪ್ರಾಯೋಗಿಕವಾಗಿ ಕತ್ರಿಗುಪ್ಪೆ ವಾರ್ಡ್‌ನಲ್ಲಿ ಸಹಾಯವಾಣಿಯನ್ನು ಆರಂಭಿಸಲಾಗಿತ್ತು. ದೂರವಾಣಿ ಸಂಖ್ಯೆ 080 61914960ಕ್ಕೆ ಕರೆ ಮಾಡಿ ಅಗತ್ಯ ವಸ್ತುಗಳನ್ನು ಪಡೆಯಬಹುದಾಗಿತ್ತು. ಬಸವನಗುಡಿ, ಜಯನಗರ, ಪದ್ಮನಾಭನಗರ ಹಾಗೂ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರಗಳಿಗೂ ಈ ಸೇವೆಯನ್ನು ವಿಸ್ತರಿಸಲಾಗುತ್ತಿದೆ.

ಅಗತ್ಯ ದಿನಬಳಕೆಯ ಸಾಮಗ್ರಿಗಳು, ದಿನಸಿ, ತರಕಾರಿ, ಔಷಧ ಸಾಮಗ್ರಿಗಳನ್ನು ನೇರವಾಗಿ ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ಥೆ ಇದಾಗಿದೆ. ಹೋಮ್ ಡೆಲಿವರಿ ಸೇವೆ ಇದಾಗಿದೆ.

ADVERTISEMENT

ಈ ಭಾಗದಲ್ಲಿ 7.5 ಲಕ್ಷ ಜನಸಂಖ್ಯೆ, 2.5 ಲಕ್ಷ ಮನೆಗಳು ಹಾಗೂ ದಿನಸಿ ಅಂಗಡಿ, ತರಕಾರಿ ಮಳಿಗೆ, ಔಷಧಿ ಮಳಿಗೆ, ಮಾಂಸದಗಡಿಗಳು ಸೇರಿದಂತೆ ಒಟ್ಟು 1926 ಮಳಿಗೆಗಳನ್ನು ಮ್ಯಾಪಿಂಗ್ ಮಾಡಲಾಗಿದ್ದು, ಉಚಿತವಾಗಿ ತಲುಪಿಸುವ ವ್ಯವಸ್ಥೆಯನ್ನು ಮಾಡಲಾಗಿದೆ.

ಪ್ರಸ್ತುತ ಈ ನಾಲ್ಕು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಮಾತ್ರ ಈ ಸೇವೆ ಲಭ್ಯ. ಇದು ಯಶಸ್ವಿಯಾದರೆ ಮುಂದಿನ ದಿನಗಳಲ್ಲಿ ನಗರಾದ್ಯಂತ ಇದನ್ನು ವಿಸ್ತರಿಸಲಾಗುವುದು ಎಂದು ಕಂದಾಯ ಸಚಿವ ಆರ್.ಅಶೋಕ ತಿಳಿಸಿದರು.

ಸಂಸದ ತೇಜಸ್ವಿ ಸೂರ್ಯ, ಉಪಮೇಯರ್ ರಾಮಮೋಹನ ರಾಜು, ದಕ್ಷಿಣ ವಲಯದ ಜಂಟಿ ಆಯುಕ್ತ ವೀರಭದ್ರ ಸ್ವಾಮಿ, ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ರೋಹಿಣಿ ಕಟೋಚ್ ಸೆಪಟ್, ಮುಖ್ಯ ಆರೋಗ್ಯಾಧಿಕಾರಿ ಡಾ. ವಿಜಯೇಂದ್ರ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.