ADVERTISEMENT

ಬಿಬಿಎಂಪಿ ಮೀಸಲಾತಿ ಪಟ್ಟಿಗೆ ವಿರೋಧ: ವಿಕಾಸಸೌಧದಲ್ಲಿ ಕಾಂಗ್ರೆಸ್‌ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2022, 13:11 IST
Last Updated 5 ಆಗಸ್ಟ್ 2022, 13:11 IST
ಬಿಬಿಎಂಪಿ ವಾರ್ಡ್ ಮರುವಿಂಗಡಣೆ, ಮೀಸಲಾತಿ ವರ್ಗೀಕರಣ ಅವೈಜ್ಞಾನಿಕವಾಗಿದೆ ಎಂದು ಆರೋಪಿಸಿದ ಕಾಂಗ್ರೆಸ್ ಮುಖಂಡರು, ನಗರಾಭಿವೃದ್ಧಿ ಇಲಾಖೆ ಕಚೇರಿಗೆ ಮುತ್ತಿಗೆ ಹಾಕಿದರು.
ಬಿಬಿಎಂಪಿ ವಾರ್ಡ್ ಮರುವಿಂಗಡಣೆ, ಮೀಸಲಾತಿ ವರ್ಗೀಕರಣ ಅವೈಜ್ಞಾನಿಕವಾಗಿದೆ ಎಂದು ಆರೋಪಿಸಿದ ಕಾಂಗ್ರೆಸ್ ಮುಖಂಡರು, ನಗರಾಭಿವೃದ್ಧಿ ಇಲಾಖೆ ಕಚೇರಿಗೆ ಮುತ್ತಿಗೆ ಹಾಕಿದರು.   

ಬೆಂಗಳೂರು: ಬಿಬಿಎಂಪಿ ಮೀಸಲಾತಿ ಪಟ್ಟಿಯನ್ನು ವಿರೋಧಿಸಿ ಕಾಂಗ್ರೆಸ್ ನಾಯಕರು ಶುಕ್ರವಾರ ವಿಕಾಸಸೌಧದಲ್ಲಿರುವ ನಗರಾಭಿವೃದ್ಧಿ ಇಲಾಖೆ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಬಿಬಿಎಂಪಿ ಚುನಾವಣೆ ಸಂಬಂಧ ಮೀಸಲಾತಿ ಪಟ್ಟಿ ಹೊರಡಿಸುವಂತೆ ಸುಪ್ರೀಂ ಕೋರ್ಟ್‌ ಗಡುವು ನೀಡಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮೀಸಲಾತಿ ಪಟ್ಟಿಯನ್ನು ಪ್ರಕಟಿಸಿದ್ದು, ಇದನ್ನು ಕಾಂಗ್ರೆಸ್‌ ತೀವ್ರವಾಗಿ ವಿರೋಧಿಸಿದೆ.

‘ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ ಮೀಸಲಾತಿ ಪಟ್ಟಿಯು ಮಾರ್ಗಸೂಚಿಯ ಪ್ರಕಾರ ಇಲ್ಲ. ವಾರ್ಡ್‌ಗಳ ಮರು ವಿಂಗಡಣೆಯನ್ನು ಬಿಜೆಪಿ ಶಾಸಕರು ಮತ್ತು ಸಂಸದರ ಅನುಕೂಲಕ್ಕೆ ತಕ್ಕಂತೆ ರೂಪಿಸಲಾಗಿದೆ. ಕಂದಾಯ ಇಲಾಖೆಯ ಅಧಿಕಾರಿಗಳು ಮಾಡಬೇಕಾದ ಕೆಲಸವನ್ನು ಆಯುಕ್ತರೇ ಆರ್‌ಎಸ್‌ಎಸ್‌ನ ಅಣತಿಯಂತೆ ಕೇಶವಕೃಪಾದಲ್ಲಿ ಮಾಡಿದ್ದಾರೆ’ ಎಂದು ಕಾಂಗ್ರೆಸ್‌ ಶಾಸಕರ ರಾಮಲಿಂಗಾರೆಡ್ಡಿ ದೂರಿದರು.

ADVERTISEMENT

‘ಈ ಮೀಸಲಾತಿ ಪಟ್ಟಿ ಸಂಚಿನಿಂದ ಕೂಡಿದೆ. ಕಾಂಗ್ರೆಸ್‌ನವರು ಗೆಲ್ಲದಂತೆ ನೋಡಿಕೊಳ್ಳುವುದರ ಜತೆಗೆ, ಬಿಜೆಪಿಯ ಸಂಸದರು ಮತ್ತು ಶಾಸಕರಿಗೆ ಪಕ್ಷದಲ್ಲೇ ಪ್ರತಿಸ್ಪರ್ಧಿಗಳು ಸೃಷ್ಟಿಯಾಗದಂತೆ ತಂತ್ರ ರೂಪಿಸಿದ್ದಾರೆ’ ಎಂದು ಅವರು ಹೇಳಿದರು.

‘ಚಾಮರಾಜಪೇಟೆಯ ಆರಕ್ಕೂ ಆರು ವಾರ್ಡ್‌ಗಳಲ್ಲಿ ಮಹಿಳಾ ಮೀಸಲಾತಿ ನಿಗದಿ ಮಾಡಿದ್ದಾರೆ. ಕ್ಷೇತ್ರದಲ್ಲಿ ಪರಿಶಿಷ್ಟ ಪಂಗಡಕ್ಕೆ ಸೇರಿದವರು 350 ರಿಂದ 400 ಜನ ಇರಬಹುದು. ಅವರಿಗೆ ಎಸ್‌ಟಿ ಮೀಸಲಾತಿ ನೀಡಿದ್ದಾರೆ. ಚಾಮರಾಜಪೇಟೆಯನ್ನು ಜಾಲಿ ಮೊಹಲ್ಲಾಗೆ ಸೇರಿಸಿದ್ದಾರೆ. ಕಾಂಗ್ರೆಸ್‌ ಒಂದು ಸ್ಥಾನವೂ ಗೆಲ್ಲಬಾರದು ಎಂಬ ಕಾರಣಕ್ಕೆ ಈ ರೀತಿ ಕುತಂತ್ರ ಮಾಡಿದ್ದಾರೆ’ ಎಂದು ಶಾಸಕ ಜಮೀರ್‌ ಅಹಮದ್‌ ಖಾನ್‌ ಆಕ್ರೋಶ ವ್ಯಕ್ತಪಡಿಸಿದರು.

ಶಿವಾಜಿನಗರ ಶಾಸಕ ರಿಜ್ವಾನ್‌ ಅರ್ಷದ್‌ ಮಾತನಾಡಿ, ‘ಬಿಬಿಎಂಪಿ ಚುನಾವಣಾ ಪ್ರಕ್ರಿಯೆ ನಗರದ ಹಿತದೃಷ್ಟಿಯಿಂದ ಮಾಡಿಲ್ಲ. ಬಿಜೆಪಿ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಬೇಕಾಬಿಟ್ಟಿ ಮೀಸಲಾತಿ ನಿಗದಿ ಮಾಡಿದೆ. ಇದರಿಂದ ಬೆಂಗಳೂರಿಗೆ ಒಳ್ಳೆಯದಾಗುವುದಿಲ್ಲ. ಬಿಜೆಪಿ ಶಾಸಕರ ಕ್ಷೇತ್ರ ಮತ್ತು ಕಾಂಗ್ರೆಸ್‌ ಶಾಸಕರ ಕ್ಷೇತ್ರ ಹೋಲಿಕೆ ಮಾಡಿದರೆ, 19 ಸಾವಿರ ಮತವಿರುವ ಒಂದು ವಾರ್ಡ್‌ ಸೃಷ್ಟಿಸಿದರೆ, ಅದರ ಪಕ್ಕದಲ್ಲಿ 45 ಸಾವಿರ ಮತವಿರುವ ವಾರ್ಡ್‌ ಮಾಡಲಾಗಿದೆ’ ಎಂದರು.

ಪ್ರತಿಭಟನೆಯಲ್ಲಿ ಸಂಸದ ಡಿ.ಕೆ.ಸುರೇಶ್‌, ಶಾಸಕ ದಿನೇಶ್‌ ಗುಂಡೂರಾವ್‌ ಮುಂತಾದವರು ಇದ್ದರು. ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.