ADVERTISEMENT

ಲಸಿಕೆ: 300 ಆಸ್ಪತ್ರೆಗಳು ಸಜ್ಜು

ಬಿಬಿಎಂಪಿ ವ್ಯಾಪ್ತಿಯಲ್ಲಿ 3ನೇ ಹಂತದ ಕೋವಿಡ್ ಲಸಿಕೆ ನೀಡುವ ತರಬೇತಿ ಕಾರ್ಯಾಗಾರ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2021, 21:55 IST
Last Updated 5 ಮಾರ್ಚ್ 2021, 21:55 IST
ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದ ವೈದ್ಯರು ಮತ್ತು ಅಧಿಕಾರಿಗಳು– ಪ್ರಜಾವಾಣಿ ಚಿತ್ರ
ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದ ವೈದ್ಯರು ಮತ್ತು ಅಧಿಕಾರಿಗಳು– ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಕಡಿಮೆ ಸಮಯದಲ್ಲಿ ಹೆಚ್ಚು ಮಂದಿಗೆ ಲಸಿಕೆ ನೀಡುವ ನಿಟ್ಟಿನಲ್ಲಿ ಬಿಬಿಎಂಪಿ ಎಲ್ಲ ಸಿದ್ಧತೆ ಮಾಡಿಕೊಂಡಿದೆ. ಮುಂದಿನ ವಾರದಿಂದ ಲಸಿಕೆ ನೀಡುವ ಕಾರ್ಯ ಇನ್ನೂ ಚುರುಕುಗೊಳ್ಳಲಿದ್ದು, ಇನ್ನೂ 300 ಆಸ್ಪತ್ರೆಗಳು ಇದಕ್ಕಾಗಿ ಸಜ್ಜುಗೊಂಡಿವೆ’ ಎಂದು ಬಿಬಿಎಂಪಿ ಆಯುಕ್ತ ಎನ್‌. ಮಂಜುನಾಥ ಪ್ರಸಾದ್ ಹೇಳಿದರು.

ನಗರದ ಪುರಭವನದಲ್ಲಿ ಈ ಕುರಿತು ಶುಕ್ರವಾರ ನಡೆದ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ‘ಬೆಂಗಳೂರನ್ನು ಸುರಕ್ಷಿತ ಮತ್ತು ಆರೋಗ್ಯಕರ ನಗರವನ್ನಾಗಿಸುವುದು ನಮ್ಮ ಗುರಿ’ ಎಂದು ಹೇಳಿದರು.

ಲಸಿಕೆ ನೀಡಲು ಆಸ್ಪತ್ರೆಗಳಲ್ಲಿ ಯಾವ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು, 3ನೇ ಹಂತದಲ್ಲಿ ಲಸಿಕೆ ಪಡೆ
ಯಲು ಯಾರು ಅರ್ಹರಾಗಿದ್ದಾರೆ, ಕೋವಿನ್ ಪೋರ್ಟಲ್‌ನಲ್ಲಿ ನೋಂದಣಿ ಮಾಡಿಕೊಳ್ಳುವ ವಿಧಾನ, ಆಸ್ಪತ್ರೆಗಳಲ್ಲಿ ಮಾಡಿಕೊಳ್ಳಬೇಕಿರುವ ತಯಾರಿಯ ಬಗ್ಗೆ ಆಯುಕ್ತರು ಮಾಹಿತಿ ನೀಡಿದರು.

ADVERTISEMENT

29ನೇ ದಿನ ಎರಡನೇ ಡೋಸ್‌: ‘ಮೊದಲು ಲಸಿಕೆ ಪಡೆದವರು 29ನೇ ದಿನ ಎರಡನೇ ಡೋಸ್ ಪಡೆಯಬೇಕಿದ್ದು, ಅದೇ ದಿನ ಲಸಿಕೆ ಪಡೆಯದಿದ್ದರೆ ಮತ್ತೊಂದು ದಿನ ಲಸಿಕೆ ಪಡೆಯಲು ಅವಕಾಶವಿದೆ. ಅದಲ್ಲದೆ ಬೆಂಗಳೂರಲ್ಲಿ ಲಸಿಕೆ ಪಡೆದವರು ಬೇರೆ ನಗರಗಳಿಗೆ ತೆರಳಿದ್ದರೆ ಅಲ್ಲಿಯೇ 2ನೇ ಡೋಸ್ ಪಡೆಯಬಹುದಾಗಿದೆ’ ಎಂದು ಮಂಜುನಾಥ ಪ್ರಸಾದ್ ಹೇಳಿದರು.

‘45 ರಿಂದ 59 ವರ್ಷದ ಅನ್ಯ ಕಾಯಿಲೆಗಳಿಂದ ಬಳಲುತ್ತಿರುವವರಿಗೆ 3ನೇ ಹಂತದಲ್ಲಿ ಕೋವಿಡ್ ಲಸಿಕೆ ಪಡೆಯುತ್ತಿದ್ದು, ಈ ಸಂಬಂಧ ಅನ್ಯ ಕಾಯಿಲೆಗಳಿಂದ ಬಳಲುತ್ತಿರುವವರು ದಾಖಲಾತಿಗಳ ಜೊತೆಗೆ ಯಾವ ಕಾಯಿಲೆಯಿದೆ ಎಂಬ ಪ್ರಮಾಣಪತ್ರವನ್ನೂ ವೈದ್ಯರಿಂದ ತರಬೇಕು’ ಎಂದು ಹೇಳಿದರು.

ಆಸ್ಪತ್ರೆಗಳಲ್ಲಿ ಸಿದ್ಧತೆ ಹೇಗಿರಬೇಕು ?

* ಲಸಿಕೆ ನೀಡುವ ಬಗ್ಗೆ ಸಮರ್ಪಕ ಮಾಹಿತಿಯುಳ್ಳ ಸೂಚನಾ ಫಲಕಗಳ ಅಳವಡಿಕೆ

* ಕಾಯುವ, ಲಸಿಕೆ ನೀಡುವ, ವೀಕ್ಷಣಾ ಕೊಠಡಿಗಳ ವ್ಯವಸ್ಥೆ

* ಲಸಿಕೆ ಸಂಗ್ರಹಿಸಲು ಕೋಲ್ಡ್‌ ಚೈನ್ ಪಾಯಿಂಟ್

* ಕೋವಿನ್ ಪೋರ್ಟಲ್‌ ನೋಂದಣಿಗೆ ವ್ಯವಸ್ಥೆ

* ಲಸಿಕೆ ವಿತರಣೆಗೆ ಅವಶ್ಯಕ ಸಿಬ್ಬಂದಿ ನಿಯೋಜನೆ

* ದಾಖಲಾತಿ ಪರಿಶೀಲಿಸಲು ಮೇಲ್ವಿಚಾರಕರ ನೇಮಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.