ADVERTISEMENT

ಕಾಮಗಾರಿ ವೆಚ್ಚ ಭರಿಸಲು ಮೀನಮೇಷ: ನಿವೇಶನದಾರರಿಗೆ ಕಳವಳ

ನಾಡಪ್ರಭು ಕೆಂಪೇಗೌಡ ಬಡಾವಣೆ ಹೆಚ್ಚುವರಿ ಕಾಮಗಾರಿ

ಪ್ರವೀಣ ಕುಮಾರ್ ಪಿ.ವಿ.
Published 10 ಅಕ್ಟೋಬರ್ 2021, 4:41 IST
Last Updated 10 ಅಕ್ಟೋಬರ್ 2021, 4:41 IST
ಕೆಂಪೇಗೌಡ ಬಡಾವಣೆ ನಿವೇಶನ ಕೆಲಸ ನಡೆಯುತ್ತಿರುವ ಜಾಗದ ದೃಶ್ಯ -ಪ್ರಜಾವಾಣಿ ಚಿತ್ರ/ಎಂ.ಎಸ್. ಮಂಜುನಾಥ್
ಕೆಂಪೇಗೌಡ ಬಡಾವಣೆ ನಿವೇಶನ ಕೆಲಸ ನಡೆಯುತ್ತಿರುವ ಜಾಗದ ದೃಶ್ಯ -ಪ್ರಜಾವಾಣಿ ಚಿತ್ರ/ಎಂ.ಎಸ್. ಮಂಜುನಾಥ್   

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಅಭಿವೃದ್ಧಿಪಡಿಸುತ್ತಿರುವ ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಅನುಮೋದಿತ ವಿಸ್ತೃತ ಯೋಜನಾ ವರದಿಯಲ್ಲಿರುವುದಕ್ಕಿಂತ (ಡಿಪಿಆರ್‌) ಹೆಚ್ಚುವರಿಯಾಗಿ ಮೂಲಸೌಕರ್ಯ ಕಾಮಗಾರಿಗಳನ್ನು ಕೈಗೊಳ್ಳಬೇಕಾಗಿದ್ದು, ಇದಕ್ಕೆ ₹ 672 ಕೋಟಿ ವೆಚ್ಚ ತಗಲುತ್ತದೆ ಎಂದು ಅಂದಾಜಿಸಲಾಗಿದೆ. ಈ ಹಣ ಬಿಡುಗಡೆಗೆ ಬಿಡಿಎ ಮೀನಾಮೇಷ ಎಣಿಸುತ್ತಿರುವುದರಿಂದ ಈ ಬಡಾವಣೆಯ ಕಾಮಗಾರಿಯೂ ವಿಳಂಬವಾಗುತ್ತಿದೆ. ಇದು ಈ ಬಡಾವಣೆಯ ನಿವೇಶನದಾರರ ಕಳವಳಕ್ಕೆ ಕಾರಣವಾಗಿದೆ.

ಹೆಚ್ಚುವರಿ ಕಾಮಗಾರಿಗಳ ವೆಚ್ಚ ಭರಿಸುವುದಕ್ಕೆ ಸಂಬಂಧಿಸಿ ಬಿಡಿಎ ಸ್ಪಷ್ಟ ನಿರ್ಧಾರ ತಳೆಯದಿರುವುದರಿಂದ ಗುತ್ತಿಗೆದಾರರು ಹೆಚ್ಚುವರಿ ಕಾಮಗಾರಿಗಳ ಅನುಷ್ಠಾನಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಇದುವರೆಗೆ ಭೌತಿಕ ಕಾಮಗಾರಿ ಶೇ 50ರಷ್ಟು ಮಾತ್ರ ಪೂರ್ಣಗೊಂಡಿದೆ. ಹೆಚ್ಚುವರಿ ಕಾಮಗಾರಿಗೆ ಅನುದಾನ ಒದಗಿಸದಿದ್ದರೆ ಮೂಲಸೌಕರ್ಯ ಕಲ್ಪಿಸುವ ಕಾರ್ಯ ಪೂರ್ಣವಾಗದು ಎಂದು ಅಳಲು ತೋಡಿಕೊಳ್ಳುತ್ತಾರೆ ನಿವೇಶನದಾರರು.

ಸದ್ಯಕ್ಕೆ 10 ಬ್ಲಾಕ್‌ಗಳಿಗೆ ಕುಡಿಯುವ ನೀರು, ಒಳಚರಂಡಿ, ಹಾಗೂ ವಿದ್ಯುತ್‌ ಸಂಪರ್ಕ ಕಲ್ಪಿಸುವ ಕಾಮಗಾರಿಗಳ ಗುತ್ತಿಗೆ ನೀಡಲಾಗಿದೆ. 1, 2, 3, 4 ಹಾಗೂ 5ಎಬ್ಲಾಕ್‌ಗಳ ಮೂಲಸೌಕರ್ಯ ಕಲ್ಪಿಸುವ ₹806 ಕೋಟಿ ವೆಚ್ಚದ ಪ್ಯಾಕೇಜ್‌–1ರ ಗುತ್ತಿಗೆಯನ್ನು ಎಲ್‌ ಆ್ಯಂಡ್ ಟಿ ಕಂಪನಿಗೆ ಹಾಗೂ 5ಬಿ, 6, 7, 8, 9ನೇ ಬ್ಲಾಕ್‌ಗಳ ಮೂಲಸೌಕರ್ಯ ಕಲ್ಪಿಸುವ ಪ್ಯಾಕೇಜ್‌–2ರ ₹813 ಕೋಟಿ ವೆಚ್ಚದ ಗುತ್ತಿಗೆಯನ್ನು ಎಸ್‌ಪಿಎಂಎಲ್‌ ಅಮೃತ್‌ ಕಂಪನಿಗೆ ವಹಿಸಲಾಗಿದೆ. ಈ ಎರಡು ಪ್ಯಾಕೇಜ್‌ಗಳಲ್ಲಿ ನಿತ್ಯ 4.50 ಕೋಟಿ ಲೀ. ತ್ಯಾಜ್ಯ ನೀರನ್ನು ಸಂಸ್ಕರಿಸುವ ಸಾಮರ್ಥ್ಯದ ಒಟ್ಟು 10 ತ್ಯಾಜ್ಯನೀರು ಸಂಸ್ಕರಣಾ ಘಟಕಗಳನ್ನು (ಎಸ್‌ಟಿಪಿ), ತಲಾ 5.45 ಕೋಟಿ ಲೀ ಸಂಗ್ರಹ ಸಾಮರ್ಥ್ಯದ ನೆಲಮಟ್ಟದ 4 ಸಂಗ್ರಹಾಗಾರಗಳನ್ನು, ಕೊಳಚೆ ನೀರು ಶುದ್ಧೀಕರಿಸಿ ಪೂರೈಸಲು 8 ಓವರ್‌ ಹೆಡ್‌ ಟ್ಯಾಂಕ್‌ಗಳನ್ನು, ಕುಡಿಯುವ ನೀರು, ಒಳಚರಂಡಿ ಹಾಗೂ ವಿದ್ಯುತ್‌ ಪೂರೈಕೆ ಕೊಳವೆಮಾರ್ಗಗಳನ್ನು ನಿರ್ಮಿಸಬೇಕಿದೆ.

ADVERTISEMENT

ಬಿಡಿಎ ಈ ಬಡಾವಣೆಗಾಗಿ 4,043 ಎಕರೆ ಭೂಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಿತ್ತು. 2,252 ಎಕರೆಗಳಷ್ಟು ಜಾಗದಲ್ಲಿ ನಿರ್ಮಿಸುವ ನಿವೇಶನಗಳಿಗೆ ಕುಡಿಯುವ ನೀರು, ಒಳಚರಂಡಿ ಹಾಗೂ ವಿದ್ಯುತ್‌ ಪೂರೈಕೆ ಕಾಮಗಾರಿಗಳಿಗೆ ಡಿಪಿಆರ್‌ ಸಿದ್ಧಪಡಿಸಲಾಗಿತ್ತು. ಕೆಲವೆಡೆ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳ್ಳದ ಕಾರಣ ಸದ್ಯ 2,180 ಎಕರೆ ಪ್ರದೇಶದಲ್ಲಿ ಮಾತ್ರ ನಿವೇಶನಗಳನ್ನು ನಿರ್ಮಿಸಲಾಗಿದೆ. ನಿವೇಶನಗಳು ಅಲ್ಲಲ್ಲಿ ಹಂಚಿ ಹೋಗಿದ್ದು, ಅವುಗಳಿಗೆ ಮೂಲಸೌಕರ್ಯ ಕಲ್ಪಿಸುವಾಗ ಡಿಪಿಆರ್‌ನಲ್ಲಿರುವುದಕ್ಕಿಂತ ಹೆಚ್ಚುವರಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬೇಕಾಗಿದೆ. ಹಸಿರು ನ್ಯಾಯಮಂಡಳಿ ಆದೇಶದ ಪ್ರಕಾರ ಕೆರೆ ಕಾಲುವೆಗಳ ಮೀಸಲು ಪ್ರದೇಶದಲ್ಲಿ ವ್ಯತ್ಯಾಸವಾಗಿದ್ದರಿಂದ ಎಸ್‌ಟಿಪಿಗಳ ಸ್ಥಳ ಬದಲಾವಣೆ ಮಾಡಲಾಗಿದೆ. ಇದು ಕಾಮಗಾರಿಗಳ ಪರಿಮಾಣದಲ್ಲಿ ವ್ಯತ್ಯಾಸಕ್ಕೆ ಕಾರಣವಾಗಿದೆ ಎನ್ನುತ್ತವೆ ಬಿಡಿಎ ಮೂಲಗಳು.

‘ಡಿಪಿಆರ್‌ನಲ್ಲೂ ಕಾಮಗಾರಿಗಳ ಪರಿಮಾಣಗಳನ್ನು ಸರಿಯಾಗಿ ಅಂದಾಜಿಸಿಲ್ಲ. ಪ್ಯಾಕೇಜ್‌–1ರಲ್ಲಿ ಮೂಲಸೌಕರ್ಯ ಕೊಳವೆಗಳ ಉದ್ದ 85 ಕಿ.ಮೀ ಎಂದು ಅಂದಾಜಿಸಲಾಗಿದೆ. ಆದರೆ, ಇಲ್ಲಿಗೆ 127 ಕಿ.ಮೀ ಉದ್ದದ ನೀರಿನ ಕೊಳವೆ ಅಳವಡಿಸಬೇಕಾಗಿದೆ. ಪ್ಯಾಕೇಜ್–2ರಲ್ಲಿ 65 ಕಿ.ಮೀ ಉದ್ದದ ಮೂಲಸೌಕರ್ಯ ಕೊಳವೆಮಾರ್ಗ ನಿರ್ಮಿಸಬೇಕಾಗುತ್ತದೆ ಎಂದು ಅಂದಾಜಿಸಲಾಗಿತ್ತು. ಆದರೆ, ಇಲ್ಲಿ 139 ಕಿ.ಮೀ ಉದ್ದದಷ್ಟು ನೀರಿನ ಕೊಳವೆ ಅಳವಡಿಸಬೇಕಿದೆ. ಕುಡಿಯುವ ನೀರು ಹಾಗೂ ಒಳಚರಂಡಿ ಕೊಳವೆಗಳನ್ನು ಅರ್ಧಕ್ಕೆ ನಿಲ್ಲಿಸಲಾಗದು. ಭೂಸ್ವಾಧೀನ ನಡೆಸದ ಪ್ರದೇಶಗಳ ಬಳಿ ಸುತ್ತಿ ಬಳಸಿ ಕೊಳವೆಗಳನ್ನು ಜೋಡಿಸಬೇಕಾಗುತ್ತಿದೆ. ಕತ್ತರಿಸಿದ ರಸ್ತೆಗಳ ದುರಸ್ತಿ ವೆಚ್ಚದ ಬಗ್ಗೆಯೂ ಡಿಪಿಆರ್‌ನಲ್ಲಿ ಉಲ್ಲೇಖವಿರಲಿಲ್ಲ. ಕೆಲವೆಡೆ ಹೆಚ್ಚುವರಿ ಪಂಪಿಂಗ್‌ಕೇಂದ್ರಗಳನ್ನು ನಿರ್ಮಿಸಬೇಕಾಗುತ್ತಿದೆ. ಈ ಎಲ್ಲ ವೆಚ್ಚಗಳು ಡಿಪಿಆರ್‌ನಲ್ಲಿ ಅಡಕವಾಗಿರಲಿಲ್ಲ’ ಎಂದು ವಿವರಿಸುತ್ತಾರೆ ಬಿಡಿಎ ಅಧಿಕಾರಿಗಳು.

‘ಡಿಪಿಆರ್‌ ಸಿದ್ಧಗೊಳ್ಳುವಾಗ ಬಿಡಿಎ 2,252 ಎಕರೆ ಜಾಗದಲ್ಲಿ 2,060 ಎಕರೆಯಲ್ಲಿ ನಿವೇಶನ ರಚಿಸಿ ಇನ್ನುಳಿದ ಜಾಗವನ್ನು ಬಹುಮಹಡಿ ಕಟ್ಟಡಕ್ಕೆ ಬಳಸಲು ನಿರ್ಧರಿಸಿತ್ತು. ಈ ಪ್ರಸ್ತಾವ ಕೈಬಿಟ್ಟು ಅಲ್ಲೂ ನಿವೇಶನಗಳನ್ನು ನಿರ್ಮಿಸಲಾಗುತ್ತಿದೆ. ಹಾಗಾಗಿ ನೀರು ಹಾಗೂ ಒಳಚರಂಡಿ ಸಂಪರ್ಕಗಳ ಸಂಖ್ಯೆ ಜಾಸ್ತಿಯಾಗಲಿದ್ದು, ವೆಚ್ಚವೂ ಹೆಚ್ಚಲಿದೆ. ಈಗ ಒಟ್ಟು 2,635 ಎಕರೆ 37 ಗುಂಟೆ ಜಾಗ ಎಂಜಿನಿಯರಿಂಗ್‌ ವಿಭಾಗಕ್ಕೆ ಹಸ್ತಾಂತರವಾಗಿದ್ದು, ಅಷ್ಟೂ ಜಾಗದಲ್ಲಿ ನಿವೇಶನ ರಚಿಸಲಾಗುತ್ತಿದೆ. ಹಾಗಾಗಿ ಡಿಪಿಆರ್‌ಗಿಂತ ಸುಮಾರು 575 ಎಕರೆಗಳಷ್ಟು ಹೆಚ್ಚು ಪ್ರದೇಶಕ್ಕೆ ಮೂಲಸೌಕರ್ಯ ಕಲ್ಪಿಸಬೇಕಿದೆ’ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ರಿಯಲ್‌ ಎಸ್ಟೇಟ್‌ ನಿಯಂತ್ರಣ ಪ್ರಾಧಿಕಾರಕ್ಕೆ (ರೇರಾ) ನೀಡಿದ ವಾಗ್ದಾನ ಪ್ರಕಾರ ಬಿಡಿಎ ಈ ಬಡಾವಣೆಯಲ್ಲಿ ಹಂಚಿಕೆಯಾಗಿರುವ ನಿವೇಶನಗಳಿಗೆ 2021ರ ಡಿ. 31ರ ಒಳಗಾಗಿ ಸಕಲ ಮೂಲಸೌಕರ್ಯಗಳನ್ನು ಕಲ್ಪಿಸ
ಬೇಕಿದೆ. ಇಲ್ಲದಿದ್ದರೆ ಬಿಡಿಎಗೆ ರೇರಾ ದಂಡ ವಿಧಿಸುವುದಕ್ಕೆ ಅವಕಾಶ ಇದೆ.

‘2 ವರ್ಷ ಕಳೆದರೂ ಸ್ಪಷ್ಟ ನಿರ್ಧಾರವಿಲ್ಲ’
ಹೆಚ್ಚುವರಿ ಕಾಮಗಾರಿಗಳ ಪ್ರಸ್ತಾವ 2019ರ ನವೆಂಬರ್‌ನಲ್ಲೇ ಸಿದ್ಧವಾಗಿತ್ತು. ಈ ಕುರಿತ ಪರಿಷ್ಕೃತ ಪ್ರಸ್ತಾಪಕ್ಕೆ ಬಿಡಿಎ ಆಡಳಿತ ಮಂಡಳಿ 2021ರ ಜ. 30ರಂದು ಅನುಮೋದನೆ ನೀಡಿದ್ದು, ಈಗಿನ ಗುತ್ತಿಗೆದಾರರಿಂದಲೇ ಈ ಕಾಮಗಾರಿ ನಡೆಸಲು ಸೂಚಿಸಿತ್ತು. ಹೆಚ್ಚುವರಿ ಅಂಶಗಳ ವೆಚ್ಚವನ್ನು ಜಲಮಂಡಳಿ, ಬೆಸ್ಕಾಂ ಅಧಿಕಾರಿಗಳು ಹಾಗೂ ಬಿಡಿಎ ಎಂಜಿನಿಯರಿಂಗ್‌ ಸದಸ್ಯರನ್ನು ಒಳಗೊಂಡ ತಾಂತ್ರಿಕ ಸಲಹಾ ಸಮಿತಿಯೂ ಕೂಲಂಕಷವಾಗಿ ಪರಿಶೀಲಿಸಿ, ಈ ಪ್ರಸ್ತಾವಕ್ಕೆ ಸಮ್ಮತಿ ಸೂಚಿಸಿದೆ. ಆದರೆ ಅನುದಾನ ಬಿಡುಗಡೆ ಬಗ್ಗೆ ಬಿಡಿಎ ಇನ್ನೂ ಸ್ಪಷ್ಟ ನಿರ್ಧಾರ ಕೈಗೊಂಡಿಲ್ಲ. ಹೆಚ್ಚುವರಿ ವೆಚ್ಚ ಭರಿಸದಿದ್ದರೆ ಮೂಲಗುತ್ತಿಗೆಯಲ್ಲಿರುವಷ್ಟೇ ಕಾಮಗಾರಿಗಳನ್ನು ನಿರ್ವಹಿಸುತ್ತೇವೆ ಎಂದು ಗುತ್ತಿಗೆದಾರರು ಬಿಡಿಎಗೆ ಪತ್ರ ಬರೆದಿದ್ದಾರೆ ಎಂದು ಪ್ರಾಧಿಕಾರದ ಮೂಲಗಳು ತಿಳಿಸಿವೆ.

*
ಹೆಚ್ಚುವರಿ ಕಾಮಗಾರಿಗಳ ವೆಚ್ಚ ಭರಿಸುವ ಬಗ್ಗೆ ಬಿಡಿಎ ಸ್ಪಷ್ಟ ನಿರ್ಧಾರ ಕೈಗೊಳ್ಳಬೇಕು. ಮೂಲಸೌಕರ್ಯ ಕಲ್ಪಿಸುವುದು ವಿಳಂಬವಾದರೆ ಮತ್ತಷ್ಟು ಸಮಸ್ಯೆ ಎದುರಿಸಬೇಕಾಗುತ್ತದೆ.
–ಎನ್‌.ಶ್ರಿಧರ್‌, ಅಧ್ಯಕ್ಷರು, ನಾಡಪ್ರಭು ಕೆಂಪೇಗೌಡ ಬಡಾವಣೆ ನಿವೇಶನದಾರರ ಮುಕ್ತವೇದಿಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.