ADVERTISEMENT

ಶಿವರಾಮ ಕಾರಂತ ಬಡಾವಣೆ: ಪುನರ್ವಸತಿಗೆ ಆಗ್ರಹಿಸಿ ರೈತರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 10 ಜುಲೈ 2023, 13:28 IST
Last Updated 10 ಜುಲೈ 2023, 13:28 IST
ಅಧಿಕಾರಿಗಳ ದೌರ್ಜನ್ಯ ಖಂಡಿಸಿ ರೈತರು ಬಿಡಿಎ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಅಧಿಕಾರಿಗಳ ದೌರ್ಜನ್ಯ ಖಂಡಿಸಿ ರೈತರು ಬಿಡಿಎ ಕಚೇರಿ ಎದುರು ಪ್ರತಿಭಟನೆ ನಡೆಸಿದರು.   

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು(ಬಿಡಿಎ) ಶಿವರಾಮ ಕಾರಂತ ಬಡಾವಣೆ ನಿರ್ಮಾಣಕ್ಕಾಗಿ ರೈತರ ಜಮೀನು ಸ್ವಾಧೀನ ಪಡಿಸಿಕೊಂಡು ಈಗ ಅಧಿಕಾರಿಗಳು ದೌರ್ಜನ್ಯ ಎಸಗುತ್ತಿದ್ದಾರೆ ಎಂದು ಆರೋಪಿಸಿ ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ರೈತರು ಸೋಮವಾರ ಬಿಡಿಎ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಯೋಜನೆಗಾಗಿ ರೈತರು ಜಮೀನು ಕಳೆದುಕೊಂಡಿದ್ದಾರೆ. ಜೀವನ ನಿರ್ವಹಣೆಯೂ ಕಷ್ಟವಾಗಿದೆ. ಮಕ್ಕಳ ವಿದ್ಯಾಭ್ಯಾಸ, ಮನೆಯಲ್ಲಿರುವ ವೃದ್ಧರ ಆರೋಗ್ಯ ತಪಾಸಣೆಗೆ ಆರ್ಥಿಕ ಸಮಸ್ಯೆ ಎದುರಾಗಿದೆ ಎಂದು ದೂರಿದರು.

ವೃದ್ಧರಿಗೆ ಮಾಸಾಶನ ಮಂಜೂರು ಮಾಡಬೇಕು. ಕುರಿ–ಮೇಕೆಗಳಿಗೆ ಮೇವು ಒದಗಿಸಬೇಕು. 2013ರ ಭೂಸ್ವಾಧೀನ ಕಾಯ್ದೆ ಅಡಿ ಭೂಪರಿಹಾರ ನೀಡಬೇಕು ಅಥವಾ ಅಭಿವೃದ್ಧಿ ಪಡಿಸಿದ ಶೇ 60ರಷ್ಟು ಭೂಮಿ ನೀಡಬೇಕು. ಅಲ್ಲದೇ ರೈತರ ಮೇಲೆ ಹೂಡಿರುವ ಪ್ರಕರಣಗಳನ್ನು ವಾಪಸ್ ಪಡೆಯಬೇಕು ಎಂದು ಸಮಿತಿ ಜಿಲ್ಲಾ ಸಂಯೋಜಕ ಎಂ.ರಮೇಶ್‌ ಆಗ್ರಹಿಸಿದರು.

ADVERTISEMENT

ಜಾನುವಾರುಗಳಿಗೂ ಮೇವಿನ ಪರಿಹಾರ ನೀಡುತ್ತಿಲ್ಲ. ಬಡಾವಣೆ ನಿರ್ಮಾಣ ಕಾರ್ಯವು ಸುಪ್ರೀಂ ಕೋರ್ಟ್‌ ನೇಮಿಸಿರುವ ಸಮಿತಿಯ ಮೇಲು ಉಸ್ತುವಾರಿ ಹಾಗೂ ರೈತರ ಸಹಭಾಗಿತ್ವದಲ್ಲಿ ಅನುಷ್ಠಾನಗೊಳ್ಳಬೇಕಿತ್ತು. ಕಳೆದ ಫೆ.24 ರಂದು ಈಚೆಗೆ ಬಿಡಿಎ ಅಧಿಕಾರಿಗಳು ರೈತರಿಗೆ ನೋಟಿಸ್‌ ನೀಡದೇ ಜೆಸಿಬಿ ಯಂತ್ರದೊಂದಿಗೆ ಬಂದು ಬೆಳೆನಾಶ ಪಡಿಸಿ ಜಮೀನು ಸ್ವಾಧೀನಕ್ಕೆ ಪಡೆದುಕೊಂಡರು. ಕೃಷಿ ಹಾಗೂ ಹೈನುಗಾರಿಕೆಯನ್ನೇ ನಂಬಿದ್ದ ರೈತರು ಈಗ ಬೀದಿಗೆ ಬಿದ್ದಿದ್ದಾರೆ. ಅವರಿಗೆ ಪುನರ್‌ ವಸತಿ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.