
ಬೆಂಗಳೂರು: ನಗರದಲ್ಲಿ 160 ಪ್ರಮುಖ ಜಂಕ್ಷನ್‌ಗಳಲ್ಲಿ ಒಂಬತ್ತು ಸಾವಿರ ಎ.ಐ (ಕೃತಕ ಬುದ್ದಿಮತ್ತೆ) ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಯಾವುದೇ ರೀತಿಯ ಘಟನೆ ನಡೆದರೆ ಕಂಟ್ರೋಲ್ ರೂಮ್‌ಗೆ ಅದರ ನೇರ ದೃಶ್ಯಾವಳಿ ಲಭಿಸುತ್ತದೆ ಎಂದು ಗೃಹ ಸಚಿವ ಜಿ.ಪರಮೇಶ್ವರ ಹೇಳಿದರು.
‘ಎ.ಐ ಅಲ್ಲದೇ ಇತರೆ ಏಳು ಲಕ್ಷ ಕ್ಯಾಮೆರಾಗಳನ್ನೂ ಅಳವಡಿಸಲಾಗಿದೆ. ವಿಧಿ ವಿಜ್ಞಾನ ಪ್ರಯೋಗಾಲಯವನ್ನು ಆಧುನೀಕರಣಗೊಳಿಸಲಾಗಿದ್ದು, ಎರಡು ತಿಂಗಳಲ್ಲಿ ವರದಿ ಲಭ್ಯವಾಗುತ್ತಿದೆ. ಇಡೀ ದೇಶದಲ್ಲಿ ನಮ್ಮಲ್ಲಿ ಉತ್ತಮ ವಿಧಿವಿಜ್ಞಾನ ಪ್ರಯೋಗಾಲಯವಿದೆ’ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
112 ಸಹಾಯವಾಣಿಗೆ ರಾಜ್ಯದಾದ್ಯಂತ ನಿತ್ಯ 24 ಸಾವಿರ ಕರೆಗಳು ಬರುತ್ತಿವೆ. 1,400 ದೂರುಗಳಿಗೆ ಸಿಬ್ಬಂದಿ ಸ್ಪಂದಿಸಿ ಕ್ರಮ ಕೈಗೊಳ್ಳುತ್ತಿದ್ದಾರೆ. 112 ಸಹಾಯವಾಣಿ ದೂರುಗಳಿಗೆ ನಗರದಲ್ಲಿ 6.59 ನಿಮಿಷದಲ್ಲಿ ಸ್ಪಂದಿಸುತ್ತಿದ್ದು, ಗ್ರಾಮೀಣ ಭಾಗದಲ್ಲಿ 13.58 ನಿಮಿಷದಲ್ಲಿ ಘಟನಾ ಸ್ಥಳಗಳಿಗೆ ಭೇಟಿ ನೀಡುತ್ತಿದ್ದಾರೆ ಎಂದರು.
ರಾಜ್ಯದಲ್ಲಿ ಸೈಬರ್ ಅಪರಾಧಗಳನ್ನು ನಿಯಂತ್ರಿಸಲು ಜಿಲ್ಲೆಗೊಂದು ಸೈಬರ್ ಕ್ರೈಮ್ ಪೊಲೀಸ್ ಠಾಣೆಗಳನ್ನು ಸ್ಥಾಪಿಸಿದ ಬಳಿಕ, ಹೆಚ್ಚು ಪ್ರಕರಣಗಳು ದಾಖಲಾಗುತ್ತಿವೆ. ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ವಂಚನೆ ಮಾಡುತ್ತಿದ್ದ ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ. 1930 ಸಹಾಯವಾಣಿಯಲ್ಲಿ 66 ಮಂದಿ ದಿನದ 24 ಗಂಟೆ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.
ಮಾದಕ ವಸ್ತುಗಳ ವಿರುದ್ಧ ಕಾರ್ಯಾಚರಣೆ ನಡೆಸುತ್ತಿರುವ ಪೊಲೀಸರು ಪ್ರಸಕ್ತ ವರ್ಷದಲ್ಲಿ (2025) 1,078 ಎನ್‌ಡಿಪಿಎಸ್ ಪ್ರಕರಣಗಳನ್ನು ದಾಖಲಿಸಿ, 1,491 ಭಾರತೀಯ ಪ್ರಜೆಗಳು ಹಾಗೂ 52 ವಿದೇಶಿ ಪ್ರಜೆಗಳನ್ನು ಬಂಧಿಸಲಾಗಿದೆ. ನಗರ ಪೊಲೀಸ್ ಹಾಗೂ ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ಜಂಟಿ ಕಾರ್ಯಾಚರಣೆ ನಡೆಸಿ ₹160 ಕೋಟಿ ಮೌಲ್ಯದ 1,446 ಕಿಲೋ ಗ್ರಾಂ ಮಾದಕ ವಸ್ತು ಜಪ್ತಿ ಮಾಡಿವೆ. ಈ ಪೈಕಿ ಸಿಸಿಬಿ 61 ಪ್ರಕರಣಗಳನ್ನು ದಾಖಲಿಸಿ, ಸುಮಾರು ₹120.14 ಕೋಟಿ ಮೌಲ್ಯದ 147 ಕೆ.ಜಿ. ಡ್ರಗ್ಸ್ ವಶಪಡಿಸಿಕೊಂಡಿದೆ. 2024ರಲ್ಲಿ ₹98 ಕೋಟಿ , 2023ರಲ್ಲಿ ₹103 ಕೋಟಿ ಮೌಲ್ಯದ ಡ್ರಗ್ಸ್ ಪತ್ತೆ ಹಚ್ಚಲಾಗಿದೆ ಎಂದು ಮಾಹಿತಿ ನೀಡಿದರು.
ವೀಸಾ ಅವಧಿ ಮುಕ್ತಾಯಗೊಂಡಿದ್ದರೂ ನಗರದಲ್ಲಿ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿದ್ದ 302 ವಿದೇಶಿ ಪ್ರಜೆಗಳನ್ನು ಪತ್ತೆ ಹಚ್ಚಿ, ವಿದೇಶಿ ಪ್ರಾದೇಶಿಕ ನೋಂದಣಿ ಅಧಿಕಾರಿಯ (ಎಫ್‌ಆರ್‌ಆರ್‌ಒ) ನೆರವಿನೊಂದಿಗೆ, ದಾಖಲೆಗಳನ್ನು ಪರಿಶೀಲಿಸಿ, ಆಯಾ ದೇಶಗಳಿಗೆ ಗಡಿಪಾರು ಮಾಡಲಾಯಿತು ಎಂದರು.
ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಡಾ.ಎಂ.ಎ.ಸಲೀಂ, ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ಡಿಜಿಪಿ ಪ್ರಶಾಂತ್ ಕುಮಾರ್ ಠಾಕೂರ್, ಆಂತರಿಕ ಭದ್ರತಾ ವಿಭಾಗದ ಡಿಜಿಪಿ ಪ್ರಣಬ್ ಮೊಹಾಂತಿ, ನಗರ ಪೊಲೀಸ್ ಕಮಿಷನರ್ ಸೀಮಾಂತ್ ಕುಮಾರ್ ಸಿಂಗ್, ಎಡಿಜಿಪಿಗಳಾದ ಆರ್.ಹಿತೇಂದ್ರ, ಬಿ.ದಯಾನಂದ, ಪಿ.ಹರಿಶೇಖರನ್, ಸೌಮೇಂದು ಮುಖರ್ಜಿ, ಆರ್‌ಎನ್‍ಟಿಬಿಸಿಐ ವ್ಯವಸ್ಥಾಪಕ ನಿರ್ದೇಶಕ ದೇಬಶಿಶ್ ನಿಯೋಗಿ, ಹ್ಯಾಂಡ್ ಇನ್ ಹ್ಯಾಂಡ್ ಇಂಡಿಯಾ ಸಂಸ್ಥೆಯ ಕಾರ್ಯ ನಿರ್ವಾಹಕ ಅಧ್ಯಕ್ಷೆ ಡಾ.ಕಲ್ಪನಾ ಶಂಕರ್ ಹಾಜರಿದ್ದರು.
Highlights - ಸೈಬರ್ ವಂಚನೆ ಪ್ರಕರಣಗಳ ವಿವರ ವರ್ಷ; ಪ್ರಕರಣಗಳು2022;12,5502023;21,9032024;21,9952025;13,000
ಸಂಚಾರ ಪೊಲೀಸರ ಅನುಕೂಲಕ್ಕಾಗಿ ರೆನಾಲ್ಟ್ ನಿಸಾನ್ ಟೆಕ್ನಾಲಜಿ ಆ್ಯಂಡ್ ಬಿಸಿನೆಸ್ ಸೆಂಟರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ (ಆರ್‌ಎನ್‍ಟಿಬಿಸಿಐ) ತನ್ನ ಸಿಎಸ್‍ಆರ್ ನೆರವಿನಡಿ ನೀಡಿರುವ ‘ಹೈಜೀನ್ ಆನ್ ಗೋ’ ಸಂಚಾರಿ ಶೌಚಾಲಯ ವಾಹನಗಳ ಸೇವೆಗೆ ಜಿ.ಪರಮೇಶ್ವರ ಶುಕ್ರವಾರ ಹಸಿರು ನಿಶಾನೆ ತೋರಿದರು.
ಹ್ಯಾಂಡ್ ಇನ್ ಹ್ಯಾಂಡ್ ಇಂಡಿಯಾ ಸಂಸ್ಥೆಯು ‘ಹೈಜೀನ್ ಆನ್ ಗೋ’ ಸಂಚಾರ ಶೌಚಾಲಯ ವಾಹನಗಳನ್ನು ರೂಪಿಸಿದೆ. ನಗರದ ತೀವ್ರ ವಾಹನ ದಟ್ಟಣೆಯ ವಿವಿಧ ರಸ್ತೆಗಳಲ್ಲಿ ಕರ್ತವ್ಯ ನಿರ್ವಹಿಸುವ ಸಂಚಾರ ಪೊಲೀಸರಿಗೆ ಈ ವಾಹನಗಳ ಸೇವೆ ಲಭ್ಯವಿರಲಿದೆ. ಸಂಚಾರ ನಿರ್ವಹಣೆ ವೇಳೆ ಪೊಲೀಸರಿಗೆ ಶೌಚಾಲಯಕ್ಕೆ ಹೋಗುವುದಕ್ಕೂ ಬಿಡುವು ಸಿಗುವುದಿಲ್ಲ. ಶೌಚಬಾಧೆ ತೀರಿಸಿಕೊಳ್ಳಲು ಸಾಧ್ಯವಾಗದೆ ಸಂಚಾರ ಪೊಲೀಸರು ನಿರ್ಜಲೀಕರಣ ಮೂತ್ರನಾಳದ ಸೋಂಕು ಸೇರಿದಂತೆ ಅನೇಕ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗುತ್ತಾರೆ. ಮಹಿಳಾ ಸಿಬ್ಬಂದಿಯ ಜನನಿಬಿಡ ರಸ್ತೆಗಳಲ್ಲಿ ಕಾರ್ಯ ನಿರ್ವಹಿಸುವಾಗ ಇನ್ನೂ ಹೆಚ್ಚು ಕಷ್ಟ ಅನುಭವಿಸುತ್ತಾರೆ.
ಈ ಸಮಸ್ಯೆಯ ಪರಿಹಾರಕ್ಕಾಗಿ ‘ಹೈಜೀನ್ ಆನ್ ಗೋ’ ವಾಹನಗಳನ್ನು ಸಿದ್ಧಪಡಿಸಲಾಗಿದೆ. ಮೂರು ವಾಹನಗಳ ಮರುವಿನ್ಯಾಸಕ್ಕೆ ಸುಮಾರು ₹80 ಲಕ್ಷ ವ್ಯಯಿಸಲಾಗಿದೆ. ಒಟ್ಟಾರೆ ₹2.06 ಕೋಟಿ ವೆಚ್ಚದಲ್ಲಿ ಯೋಜನೆ ರೂಪಿಸಲಾಗಿದೆ. 2028ರ ಮಾರ್ಚ್‌ವರೆಗೆ ಈ ವಾಹನಗಳು ಕಾರ್ಯಾಚರಣೆ ಮಾಡಲಿವೆ.
ವಾಹನ ದಟ್ಟಣೆಯ ಮಾರ್ಗಗಳಾದ ಥಣಿಸಂದ್ರ ಆಡುಗೋಡಿ ಮತ್ತು ಮೈಸೂರು ರಸ್ತೆಯ 91 ಪೂರ್ವ ನಿಗದಿತ ಸ್ಥಳಗಳಲ್ಲಿ ಇವು ಕಾಲಕಾಲಕ್ಕೆ ಬಂದು ನಿಲ್ಲುತ್ತವೆ. ಈ ವಾಹನಗಳು ನಿತ್ಯ ಬೆಳಗ್ಗೆ 8.30ರಿಂದ ಸಂಜೆ 7ರವರೆಗೆ ಕಾರ್ಯ ನಿರ್ವಹಿಸುತ್ತವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.