ADVERTISEMENT

ಬೆಂಗಳೂರು ಏರ್‌ಪೋರ್ಟ್‌ನಲ್ಲಿ ವಾಹನಗಳಿಗೆ ದುಬಾರಿ ಪ್ರವೇಶ ಶುಲ್ಕ: ಡಿ.8ರಿಂದ ಜಾರಿ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2025, 10:49 IST
Last Updated 2 ಡಿಸೆಂಬರ್ 2025, 10:49 IST
<div class="paragraphs"><p>ಬೆಂಗಳೂರು ಏರ್‌ಪೋರ್ಟ್‌</p></div>

ಬೆಂಗಳೂರು ಏರ್‌ಪೋರ್ಟ್‌

   

ಬೆಂಗಳೂರು: ಅನುಮತಿಸಿದ ಉಚಿತ ಸಮಯಕ್ಕಿಂತ ಹೆಚ್ಚು ಅವಧಿ ತಂಗುವ ವಾಹನಗಳಿಗೆ ಡಿ. 8ರಿಂದ ಪ್ರವೇಶ ಶುಲ್ಕ ವಿಧಿಸಲಾಗುವುದು ಎಂದು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ನಿಯಮಿತ ಹೇಳಿದೆ.

ಎರಡೂ ಟರ್ಮಿನಲ್‌ಗಳ ಪಿಕಪ್ ವಲಯದಲ್ಲಿ ಎಲ್ಲಾ ಖಾಸಗಿ ವಾಹನಗಳು (ಬಿಳಿ ಬೋರ್ಡ್) 8 ನಿಮಿಷ ಉಚಿತವಾಗಿ ಬಳಕೆ ಮಾಡಬಹುದು. ಇದಾದ ಬಳಿಕ ಕಾರುಗಳಿಗೆ 8–13ನಿಮಿಷದ ವರೆಗೆ ₹ 150 ಹಾಗೂ 13–18ನಿಮಿಷದವರೆಗೆ ₹300 ಶುಲ್ಕ ವಿಧಿಸಲಾಗುತ್ತದೆ. ಅದಕ್ಕಿಂತ ಹೆಚ್ಚು ಸಮಯ ನಿಲ್ಲಿಸಿದರೆ ಸಮೀಪದ ಪೊಲೀಸ್ ಠಾಣೆಗೆ ‘ಟೋ’ ಮಾಡಲಾಗುತ್ತದೆ. ದಂಡದ ಜೊತೆಗೆ ಟೋಯಿಂಗ್ ಶುಲ್ಕವನ್ನೂ ವಸೂಲಿ ಮಾಡಲಾಗುತ್ತದೆ ಎಂದು ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತ (ಬಿಐಎಎಲ್) ಹೇಳಿದೆ.

ADVERTISEMENT

ಹಳದಿ ಬೋರ್ಡ್ ಟ್ಯಾಕ್ಸಿ ಮತ್ತು ಎಲೆಕ್ಟ್ರಿಕ್ ಕ್ಯಾಬ್‌ಗಳು ಸೇರಿ ಎಲ್ಲಾ ವಾಣಿಜ್ಯ ವಾಹನಗಳು ನಿಗದಿಪಡಿಸಿದ ಸ್ಥಳದಲ್ಲಿಯೇ ಪ್ರಯಾಣಿಕರಿಗೆ ಕಾಯಬೇಕು. ಮೊದಲ 10 ನಿಮಿಷ ಉಚಿತವಾಗಿ ಪಾರ್ಕ್ ಮಾಡಬಹುದು. ಟರ್ಮಿನಲ್ ಒಂದಕ್ಕೆ ಬರುವ ವಾಣಿಜ್ಯ ವಾಹನಗಳು P4 ಹಾಗೂ P3 ಪಾರ್ಕಿಂಗ್ ವಲಯಕ್ಕೆ ತೆರಳಬೇಕು. ಟರ್ಮಿನಲ್–2ಕ್ಕೆ ಬರುವ ವಾಹನಗಳು P2 ಪಾರ್ಕಿಂಗ್ ವಲಯಕ್ಕೆ ತೆರಳಬೇಕು.

ಬಿಳಿ ಬೋರ್ಡ್‌ನ ಎಲ್ಲಾ ವಾಹನಗಳನ್ನು ಖಾಸಗಿ ವಾಹನಗಳಾಗಿಯೂ, ಹಳದಿ ಬೋರ್ಡ್, ಇವಿ ವಾಣಿಜ್ಯ ವಾಹನಗಳನ್ನು ವಾಣಿಜ್ಯ ವಾಹನಗಳಾಗಿ ವಿಂಗಡಿಸಲಾಗಿದೆ.

ನಿರ್ಗಮನ ಗೇಟ್‌ನಲ್ಲಿ ಖಾಸಗಿ ಹಾಗೂ ವಾಣಿಜ್ಯ ವಾಹನಗಳಿಗೆ ಈ ಶುಲ್ಕ ಅನ್ವಯಿಸುವುದಿಲ್ಲ.

ಪ್ರಯಾಣಿಕರ ಸಂಚಾರವನ್ನು ವ್ಯವಸ್ಥಿತಗೊಳಿಸುವುದು, ಜನದಟ್ಟಣೆ ನಿಯಂತ್ರಣ ಹಾಗೂ ಆಗಮನ ಪ್ರದೇಶದಲ್ಲಿ ಸುರಕ್ಷತೆ, ಶಿಸ್ತು ಖಚಿತಪಡಿಸಿಕೊಳ್ಳಲು ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಬಿಐಎಲ್ ಹೇಳಿದೆ.

ದೇಶದ ಮೂರನೇ ಅತಿ ದೊಡ್ಡ ಏರ್‌ಪೋರ್ಟ್ ಆಗಿರುವ ಬೆಂಗಳೂರು, ನಿತ್ಯ 1.3 ಲಕ್ಷ ಪ್ರಯಾಣಿಕರನ್ನು ನಿರ್ವಹಿಸುತ್ತದೆ.

ಬಿಐಎಎಲ್ ಪ್ರಕಾರ ಸುಮಾರು 1 ಲಕ್ಷ ವಾಹನಗಳು ಏರ್‌ಪೋರ್ಟ್ ರಸ್ತೆಗೆ ಪ್ರವೇಶಿಸುತ್ತಿದೆ. ಇದು ಸ್ಥಳಾವಕಾಶದ ಕೊರತೆ ಕಾರಣವಾಗಿದೆ. ಪ್ರಮುಖವಾಗಿ ಟರ್ಮಿನಲ್‌ಗಳ ಮುಂಭಾಗದಲ್ಲಿರುವ ಪಿಕ್‌ಅಪ್ ಹಾಗೂ ಡ್ರಾಪ್ ಪ್ರದೇಶಗಳಲ್ಲಿ ಹೆಚ್ಚಿನ ಒತ್ತಡ ಉಂಟು ಮಾಡುತ್ತಿದೆ.

‘ಖಾಸಗಿ ಕಾರುಗಳು ಹಾಗೂ ಕ್ಯಾಬ್‌ಗಳು ಹೆಚ್ಚು ಸಮಯ ವ್ಯಯಿಸುತ್ತಿರುವುದರಿಂದ ಕೃತಕ ದಟ್ಟಣೆ ಉಂಟಾಗುತ್ತಿದೆ. ಇದು ಸುಗಮ ಸಂಚಾರಕ್ಕೆ ತೊಂದರೆಯುಂಟು ಮಾಡುವುದಲ್ಲದೆ, ಪ್ರಯಾಣಿಕರಿಗೆ ಹಾಗೂ ಚಾಲಕರಿಗೆ ಸಮಸ್ಯೆಯಾಗುತ್ತಿದೆ. ಇದನ್ನು ಪರಿಹರಿಸಲು ಹಾಗೂ ಪ್ರಯಾಣಿಕರ ಅನುಭವ ಸುಧಾರಿಸಲು, ಶಿಸ್ತು ಜಾರಿ ಹಾಗೂ ಅನಧಿಕೃತ ಪಾರ್ಕಿಂಗ್ ತಡೆಯಲು ಹಾಗೂ ಸಮಯ ಪೋಲು ತಡೆಯಲು ಲೇನ್ ಪ್ರತ್ಯೇಕತಾ ವ್ಯವಸ್ಥೆ ಜಾರಿಗೆ ತರಲಾಗಿದೆ. ಇದು ಡ್ರಾಪ್ ಹಾಗೂ ಪಿಕ್‌ಅಪ್ ವಲಯಗಳಲ್ಲಿ ಸಂಚಾರ ದಟ್ಟಣೆ ನಿವಾರಣೆ ಹಾಗೂ ಪಿಕಪ್‌ ವಲಯದ ದುರ್ಬಳಕೆಯನ್ನೂ ತಡೆಯುತ್ತದೆ’ ಎಂದು ಬಿಐಎಎಲ್ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.