ADVERTISEMENT

ಬೆಂಗಳೂರು: ನಗರದೊಳಗೆ ಬಾರದ ಬೆಂಗಳೂರು–ಬಂಗಾರಪೇಟೆ ಮೆಮು ರೈಲು

ಬಾಲಕೃಷ್ಣ ಪಿ.ಎಚ್‌
Published 9 ಫೆಬ್ರುವರಿ 2026, 0:30 IST
Last Updated 9 ಫೆಬ್ರುವರಿ 2026, 0:30 IST
<div class="paragraphs"><p>ಮೆಮು ರೈಲು</p></div>

ಮೆಮು ರೈಲು

   

(ಸಂಗ್ರಹ ಚಿತ್ರ)

ಬೆಂಗಳೂರು: ಕ್ರಾಂತಿವೀರ ಸಂಗೊಳ್ಳಿರಾಯಣ್ಣ (ಕೆಎಸ್‌ಆರ್‌) ನಿಲ್ದಾಣಕ್ಕೆ ಬರುತ್ತಿದ್ದ ಬೆಂಗಳೂರು–ಬಂಗಾರಪೇಟೆ ಮೆಮು ರೈಲು ಇತ್ತೀಚೆಗೆ ವೈಟ್‌ಫೀಲ್ಡ್‌ನಿಂದಲೇ ಹಿಂತಿರುಗುತ್ತಿರುವುದರಿಂದ ಬೆಂಗಳೂರಿನ ಪ್ರಯಾಣಿಕರಿಗೆ ಪ್ರಯೋಜನವಿಲ್ಲದಂತಾಗಿದೆ.

ADVERTISEMENT

2017ರ ಜನವರಿಯಲ್ಲಿ ಬೆಂಗಳೂರು–ವೈಟ್‌ಫೀಲ್ಡ್‌ ನಡುವೆ ಮೆಮು ರೈಲು ಸಂಚಾರ ಆರಂಭಿಸಲಾಗಿತ್ತು. ಅದೇ ರೈಲನ್ನು 2019ರ ನವೆಂಬರ್‌ ನಂತರ  ಬಂಗಾರಪೇಟೆಗೆ ವಿಸ್ತರಿಸಲಾಗಿತ್ತು. ಕೋವಿಡ್‌ ಕಾರಣದಿಂದ 2020ರಲ್ಲಿ ಸ್ಥ‌ಗಿತಗೊಂಡಿತ್ತು. ಸುಮಾರು ಎಂಟು ತಿಂಗಳ ಬಳಿಕ 2021 ಫೆ.1ಕ್ಕೆ ಮತ್ತೆ ಆರಂಭಿಸಲಾಗಿತ್ತು.

ಈ ರೈಲು ಬೆಂಗಳೂರು ಕಂಟೋನ್ಮೆಂಟ್, ಬೈಯಪ್ಪನಹಳ್ಳಿ, ಕೃಷ್ಣರಾಜಪುರ, ವೈಟ್‌ಫೀಲ್ಡ್, ದೇವನಗೊಂದಿ, ಮಾಲೂರು ಮತ್ತು ಟೇಕಲ್ ನಿಲ್ದಾಣಗಳಲ್ಲಿ ನಿಲ್ಲುತ್ತಿತ್ತು. ಕಂಟೋನ್ಮೆಂಟ್‌ ರೈಲು ನಿಲ್ದಾಣದ ನವೀಕರಣ ಮತ್ತು ಉನ್ನತೀಕರಣ ಕಾಮಗಾರಿ ಹಾಗೂ ಈ ಮಾರ್ಗದಲ್ಲಿ ನಾಲ್ಕು ಪಥದ ಹಳಿ ನಿರ್ಮಿಸುವ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಬೆಂಗಳೂರು–ಬಂಗಾರಪೇಟೆ ರೈಲು ವೈಟ್‌ಫೀಲ್ಡ್‌–ಬಂಗಾರಪೇಟೆ ನಡುವೆ ಮಾತ್ರ ಸಂಚರಿಸಲು ರೈಲ್ವೆ ಇಲಾಖೆ ಅಧಿಸೂಚನೆ ಹೊರಡಿಸಿತ್ತು. ಒಂದೂವರೆ ವರ್ಷದಿಂದ ಈ ರೈಲು ಬೆಂಗಳೂರಿಗೆ ಪ್ರವೇಶಿಸುತ್ತಿಲ್ಲ.

‘ರೈಲ್ವೆಯವರು ಯಾವ ಕಾರಣಕ್ಕೆ ಈ ರೈಲನ್ನು ವೈಟ್‌ಫೀಲ್ಡ್‌ಗೆ ಸೀಮಿತಗೊಳಿಸಿದರು ಎಂಬುದು ಗೊತ್ತಾಗುತ್ತಿಲ್ಲ. ಕಾಮಗಾರಿ ಕಾರಣಕ್ಕೆ ರೈಲನ್ನು ನಗರಕ್ಕೆ ಬಾರದಂತೆ ತಡೆದಿರುವುದು ನಿಜವಾಗಿದ್ದರೆ ಉಳಿದ ಎಲ್ಲ ರೈಲುಗಳು ಸಂಚರಿಸುತ್ತಿವೆ. ಕಾಮಗಾರಿ ಇದೊಂದೇ ರೈಲಿಗೆ ಅಡ್ಡಿಯಾಗುತ್ತಿದೆಯೇ’ ಎಂದು ಪ್ರಯಾಣಿಕರ ಕರಿಬಸಪ್ಪ ಪ್ರಶ್ನಿಸಿದರು.

ಇದೇ ಮಾರ್ಗದಲ್ಲಿ ಬೆಂಗಳೂರಿನಿಂದ ಚೆನ್ನೈಗೆ ಬೃಂದಾವನ ಎಕ್ಸ್‌ಪ್ರೆಸ್‌ ರೈಲು ಸಂಚರಿಸುತ್ತಿದೆ. ಮಧ್ಯಾಹ್ನ 3.15ಕ್ಕೆ ಕೆಎಸ್‌ಆರ್‌ನಿಂದ ಹೊರಡುವ ಈ ರೈಲು ಕೆ.ಆರ್‌. ಪುರದಲ್ಲಿ ನಿಲುಗಡೆ ನೀಡಿ ಆನಂತರ ಬಂಗಾರಪೇಟೆಯಲ್ಲೇ ನಿಲ್ಲುತ್ತಿದೆ. ಮಧ್ಯೆ ಎಲ್ಲಿಯೂ ನಿಲುಗಡೆ ಇಲ್ಲದ ಕಾರಣ ಬೈಯಪ್ಪನಹಳ್ಳಿ, ವೈಟ್‌ಫೀಲ್ಡ್, ದೇವನಗೊಂದಿ, ಮಾಲೂರಿನಲ್ಲಿ ಇಳಿಯುವ, ಹತ್ತುವ ಪ್ರಯಾಣಿಕರಿಗೆ ಪ್ರಯೋಜನವಿಲ್ಲದಂತಾಗಿದೆ. ಈ ರೈಲನ್ನು ಬೆಂಗಳೂರು ಕೆಎಸ್‌ಆರ್‌ನಿಂದಲೇ ಓಡಿಸಬೇಕು ಎಂದು ರೈಲ್ವೆ ಹೋರಾಟಗಾರ ಕೆ.ಎನ್‌. ಕೃಷ್ಣಪ್ರಸಾದ್‌ ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.