ADVERTISEMENT

Bengaluru | ಬಿಬಿಎಂಪಿ ಬಜೆಟ್‌ ಅಭಿಪ್ರಾಯಗಳು

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2025, 0:30 IST
Last Updated 30 ಮಾರ್ಚ್ 2025, 0:30 IST
<div class="paragraphs"><p>ಬಿಬಿಎಂಪಿ</p></div>

ಬಿಬಿಎಂಪಿ

   

ಸತತ ಐದನೇ ವರ್ಷ ಅಧಿಕಾರಿಗಳಿಂದ ಬಜೆಟ್‌: ದುರಂತ

ಬಿಬಿಎಂಪಿಗೆ ಚುನಾಯಿತ ಸದಸ್ಯರಿಲ್ಲದೇ, ಮೇಯರ್‌ ಬದಲಿಗೆ ಅಧಿಕಾರಿಗಳು ಸತತ ಐದನೇ ವರ್ಷ ಬಜೆಟ್ ಮಂಡಿಸುತ್ತಿರುವುದು ದುರಂತ. ಇದು ಬೆಂಗಳೂರಿನ ನಾಗರಿಕರ ಸಾಂವಿಧಾನಿಕ ಹಕ್ಕಿನ ಸ್ಪಷ್ಟ ಉಲ್ಲಂಘನೆಯಾಗಿದೆ. ಕಾನೂನಿನ ಸರಿಯಾದ ಪ್ರಕ್ರಿಯೆಯನ್ನು ಅನುಸರಿಸದೆ ‘ಬ್ರ್ಯಾಂಡ್‌ ಬೆಂಗಳೂರು’ ಹೆಸರಲ್ಲಿ ಸುರಂಗ ರಸ್ತೆಗಳು, ಎಕ್ಸ್‌ಪ್ರೆಸ್‌ ರಸ್ತೆಗಳು, ಡಬಲ್ ಡೆಕರ್ ಮೇಲ್ಸೇತುವೆ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಮೆಟ್ರೊಪಾಲಿಟನ್ ಯೋಜನಾ ಸಮಿತಿಯ (ಎಂಪಿಸಿ) ಅನುಮೋದನೆ ಇಲ್ಲ. ನಗರಕ್ಕೆ ಮಾಸ್ಟರ್ ಪ್ಲಾನ್ ಇಲ್ಲ. ಬಿಎಂಎಲ್‌ಟಿಎ ಅನುಮೋದಿಸಿದ ಸಮಗ್ರ ಚಲನಶೀಲ ಯೋಜನೆ (ಸಿಎಂಪಿ) ಇಲ್ಲ.

ADVERTISEMENT

ನಗರಪಾಲಿಕೆ ಕಾಯ್ದೆಯಲ್ಲಿ ಕಡ್ಡಾಯಗೊಳಿಸಲಾದ ಎಂಪಿಸಿ ‘ಆರ್ಥಿಕ ಅಭಿವೃದ್ಧಿ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಯೋಜನೆ’ ಆಗಿದ್ದರೆ, ಖಾಸಗಿ ವಾಹನಗಳಿಗೆ ಮಾತ್ರ ಅನುಕೂಲಕರವಾದ ಇಂತಹ ತಿರುಚಿದ ಯೋಜನೆ ಸಾಧ್ಯವಾಗುತ್ತಿರಲಿಲ್ಲ. ಬಜೆಟ್‌ನ ಶೇ 65ರಷ್ಟನ್ನು ಮೂಲ ಸೌಕರ್ಯ ಕಾಮಗಾರಿಗಳಿಗೆ ಮೀಸಲಿಡಲಾಗಿದೆ. ಆರೋಗ್ಯ, ಶಿಕ್ಷಣ ಮತ್ತು ಕಲ್ಯಾಣಕ್ಕೆ ಶೇ 4 ಮಾತ್ರ ಅನುದಾನ ಒದಗಿಸಲಾಗಿದೆ. ಇದು ಒಳಗೊಳ್ಳುವ ಅಭಿವೃದ್ಧಿಯಲ್ಲ.

ಅನುಮತಿ ನೀಡಿದ್ದಕ್ಕಿಂತ ಹೆಚ್ಚಿನ ಮಹಡಿ ನಿರ್ಮಿಸಲು ಅವಕಾಶ ನೀಡುವ ‘ಪ್ರೀಮಿಯಂ ಫೇರ್‌’ ಬಡವರಿಗೆ ವಸತಿ ಒದಗಿಸುವುದಿಲ್ಲ.

ಕಾತ್ಯಾಯಿನಿ ಚಾಮರಾಜ್, ಸಿವಿಕ್‌– ಬೆಂಗಳೂರು ಸಂಸ್ಥೆಯ ಕಾರ್ಯಕಾರಿ ಟ್ರಸ್ಟಿ

ಕಾತ್ಯಾಯಿನಿ ಚಾಮರಾಜ್

**** 

ಪ್ರಜಾಪ್ರಭುತ್ವದ ಕೊಲೆ ಮಾಡಿದ ಬಜೆಟ್‌

ಬಿಬಿಎಂಪಿ ಬಜೆಟ್ ಬಗ್ಗೆ ನಾವು ಕೇಳ ಬಯಸುವ ಮೂಲಭೂತ ಪ್ರಶ್ನೆಯೆಂದರೆ ಅದರ ನ್ಯಾಯಸಮ್ಮತತೆ. ಮೂಲಭೂತ ಅಂಶಗಳು ಮುರಿದುಹೋಗಿವೆ. ಸತತ 5ನೇ ವರ್ಷವೂ ಚುನಾಯಿತ ಪ್ರತಿನಿಧಿಗಳಿಲ್ಲ. ಬಜೆಟ್‌ಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ಸಲಹೆ ಪಡೆದಿಲ್ಲ. ಇದು ಪ್ರಜಾಪ್ರಭುತ್ವದ ಕೊಲೆ. ನಮ್ಮ ಸಂವಿಧಾನದ ಅಣಕ.

ಸ್ವಾರ್ಥಿಗಳು ಮತ್ತು ಗುತ್ತಿಗೆದಾರರ ಲಾಬಿಗಳಿಗೆ ಅನುಕೂಲ ಮಾಡಿಕೊಡುವ ಬಜೆಟ್‌ ಇದು. ಬಿಳಿ ಆನೆ ಯೋಜನೆಗಳಿಗೆ ದೊಡ್ಡ ಮೊತ್ತದ ಅನುದಾನ ಹಂಚಿಕೆ ಮಾಡಲಾಗಿದೆ. ಜನರಿಗೆ ಅಗತ್ಯ ಇರುವ ಮೂಲ ಸೌಕರ್ಯ ಒದಗಿಸುವುದನ್ನು ನಿರ್ಲಕ್ಷಿಸಲಾಗಿದೆ. ನಿಯಮಿತವಾಗಿ ಗುಂಡಿಗಳ ದುರಸ್ತಿಗೆ, ರಸ್ತೆ ದುರಸ್ತಿಗೆ ನಿಧಿ ಇಲ್ಲ. ಅಕ್ರಮ ಕಟ್ಟಡ ಕೆಡವಲು ಅನುದಾನವಿಲ್ಲ. ಜಾರಿ ಪೊಲೀಸ್ ಪಡೆ ಸ್ಥಾಪಿಸಲು ನಿಧಿ ವಿನಿಯೋಗವಿಲ್ಲ. ನಗರದ ಯಾವುದೇ ಸಮಸ್ಯೆಗಳನ್ನು ಪರಿಹರಿಸುವ ಬಗ್ಗೆ ಯೋಚಿಸಿಲ್ಲ. ಎಲ್ಲ ಯೋಜನೆಗಳನ್ನು ರದ್ದುಗೊಳಿಸಬೇಕು. ಶ್ರದ್ಧೆಯಿಂದ ಸರಿಯಾಗಿ ಯೋಜನೆಗಳನ್ನು ರೂಪಿಸಬೇಕು. ಬಿಬಿಎಂಪಿಯ ಬಜೆಟ್‌ ವ್ಯರ್ಥ ಆಗುವುದನ್ನು ತಡೆಯಬೇಕು.

ಸಂದೀಪ್ ಅನಿರುದ್ಧನ್, ಸಂಚಾಲಕ, ಬೆಂಗಳೂರು ನಾಗರಿಕರ ಕಾರ್ಯಸೂಚಿ

ಸಂದೀಪ್ ಅನಿರುದ್ಧನ್

**** 

ವಿಕೋಪ ನಿರ್ವಹಣೆಗೆ ಯೋಜನೆ ಸಾಲದು

ಸುಮಾರು 98 ಲಕ್ಷ ಟನ್ ತ್ಯಾಜ್ಯವನ್ನು ನಿರ್ವಹಿಸಲು ಬಿಬಿಎಂಪಿ ಮಾಡಿದ ಪ್ರಯತ್ನಗಳು ಶ್ಲಾಘನೀಯ. ಆದರೆ, ಹೊಸ ತ್ಯಾಜ್ಯ ಉತ್ಪಾದನೆಯನ್ನು ಕಡಿಮೆ ಮಾಡಲು ಮತ್ತು ನಿರ್ವಹಿಸಲು ಬೇಕಾದ ಕಾರ್ಯಕ್ರಮಗಳು ಕಾಣುತ್ತಿಲ್ಲ. ಮಳೆಗಾಲದಲ್ಲಿ ನಗರದಲ್ಲಿ ಉಂಟಾಗುವ ಪ್ರವಾಹಕ್ಕೆ ಪರಿಹಾರವೇನು? ಬೇಸಿಗೆಯಲ್ಲಿ ಉಂಟಾಗುವ ನೀರಿನ ಕೊರತೆ ನೀಗಿಸುವುದು ಹೇಗೆ? ನಗರದ ಬಿಸಿ ಅಲೆಯನ್ನು ತಡೆಯುವುದು ಹೇಗೆ? ಎಂಬುದಕ್ಕೆ ದೀರ್ಘಾವಧಿಯ ಯೋಜನೆಗಳು ಕಾಣುತ್ತಿಲ್ಲ. ವಿಶ್ವಬ್ಯಾಂಕ್ ನಿಧಿಯ ಅಡಿಯಲ್ಲಿ ಪ್ರಸ್ತಾಪಿಸಲಾದ ಕಾಲುವೆ ತಡೆಗಳಂತಹ ಕೆಲವು ಯೋಜನೆಗಳು ತಾತ್ಕಾಲಿಕ ‘ನೋವು ನಿವಾರಕ’ ಪರಿಹಾರಗಳಾಗಬಹುದು.

ಅಪುಲಾ ಸಿಂಗ್, ಜನಾಗ್ರಹ, ಸಾರ್ವಜನಿಕ ಹಣಕಾಸು ನಿರ್ವಹಣೆಯ ವ್ಯವಸ್ಥಾಪಕಿ

ಅಪುಲಾ ಸಿಂಗ್

****

ಸಮಸ್ಯೆ ಪರಿಹರಿಸಲು ವಿಫಲ

ಬೆಂಗಳೂರಿನ ಪ್ರಮುಖ ಮೂಲಸೌಕರ್ಯ ಸಮಸ್ಯೆಗಳನ್ನು ಪರಿಹರಿಸಲು ಬಿಬಿಎಂಪಿಯ ಬಜೆಟ್ ಹಂಚಿಕೆ ವಿಫಲವಾಗಿದೆ. ರಸ್ತೆಗಳು, ಪಾದಚಾರಿ ಮಾರ್ಗಗಳು, ನೀರು, ವಿದ್ಯುತ್ ಮತ್ತು ಬೀದಿ ದೀಪಗಳನ್ನು ನಿರ್ಲಕ್ಷಿಸಲಾಗಿದೆ. ವಾಸಯೋಗ್ಯ ನಗರಕ್ಕೆ ಧಕ್ಕೆ ಉಂಟಾಗಿದೆ.

ಆಕಾಶ ಗೋಪುರ, ಸುರಂಗ ರಸ್ತೆಗಳಂತಹ ಯೋಜನೆಗಳಿಗೆ ಒತ್ತು ನೀಡುವುದರಿಂದ ಮೂಲ ಅವಶ್ಯಕತೆಗಳು ದುರ್ಬಲಗೊಳ್ಳುತ್ತವೆ. ಕೆರೆ, ಉದ್ಯಾನ ಮತ್ತು ಆಟದ ಮೈದಾನಗಳಂತಹ ಹಸಿರು ಸ್ಥಳಗಳ ಮೇಲೆ ಗಮನಹರಿಸದಿರುವುದು ಪರಿಸರ ಸುಸ್ಥಿರತೆಗೆ ಅಡ್ಡಿಯಾಗಲಿದೆ.

ಮೂಲಸೌಕರ್ಯಗಳ ಕಳಪೆ ನಿರ್ವಹಣೆ, ಅಸಮರ್ಪಕ ತ್ಯಾಜ್ಯ ನಿರ್ವಹಣೆ ಮತ್ತು ಕೊಳಕು ನಗರವು ಬೆಂಗಳೂರಿನ ಪ್ರತಿಷ್ಠೆಯನ್ನು ಹಾಳು ಮಾಡುತ್ತಿದೆ. ಅಭಿವೃದ್ಧಿಗೆ ಸಮಗ್ರ ಮಾಸ್ಟರ್ ಪ್ಲಾನ್ ಇಲ್ಲದಿರುವುದು ಮತ್ತು ಬಿಬಿಎಂಪಿ ಚುನಾವಣೆ ವಿಳಂಬವಾಗುತ್ತಿರುವುದು ನಗರ ಸವಾಲುಗಳನ್ನು ಇನ್ನಷ್ಟು ಹೆಚ್ಚಿಸುತ್ತಿದೆ.

ವಿನೋದ್ ಜಾಕೋಬ್, ಬೆಂಗಳೂರು ಪ್ರತಿಷ್ಠಾನದ ಮುಖ್ಯಸ್ಥ

ವಿನೋದ್‌ ಜಾಕೋಬ್‌

****

ಮೂಲಸೌಕರ್ಯಗಳಿಗೆ ಬೇಕಿತ್ತು ಇನ್ನಷ್ಟು ಒತ್ತು

ಕಳೆದ ವರ್ಷಕ್ಕೆ ಹೋಲಿಸಿದರೆ ಆಸ್ತಿ ತೆರಿಗೆ ಸಂಗ್ರಹದಲ್ಲಿ ಹೆಚ್ಚಳ ಮತ್ತು ರಾಜ್ಯ ಸರ್ಕಾರದಿಂದ ಬಂದ ಅನುದಾನಗಳು ದುಪ್ಪಟ್ಟಾಗಿರುವುದರಿಂದ ಬಿಬಿಎಂಪಿಯ ಆರ್ಥಿಕ ಸ್ಥಿತಿ ಗಮನಾರ್ಹವಾಗಿ ಸುಧಾರಿಸಿದೆ. ಆದರೂ ಈ ಹಣವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಬೇಕಾದ ಬದ್ಧತೆ ಮತ್ತು ಸಿಬ್ಬಂದಿ ಬಿಬಿಎಂಪಿಗೆ ಇದ್ದಂತೆ ಕಾಣುತ್ತಿಲ್ಲ. ರಸ್ತೆ, ಪಾದಚಾರಿ ಮಾರ್ಗ ಮತ್ತು ಬಸ್ ನಿಲ್ದಾಣಗಳಂತಹ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಬೇಕು.

ಹವಾಮಾನ ಕ್ರಮಕ್ಕಾಗಿ 28 ವಾರ್ಡ್‌ಗಳಿಗೆ ತಲಾ ₹1 ಕೋಟಿ ಹಂಚಿಕೆಯಾಗಿರುವುದು ಮಹತ್ವದ ಬೆಳವಣಿಗೆ. ಇದು ವಾರ್ಡ್ ಮಟ್ಟದಲ್ಲಿ ಬೆಂಗಳೂರಿನ ಹವಾಮಾನ ಕ್ರಿಯಾ ಯೋಜನೆಯನ್ನು ವಿಕೇಂದ್ರೀಕರಿಸುವತ್ತ ಇಟ್ಟ ಹೆಜ್ಜೆಯಾಗಿದೆ. ಶಾಲೆಗಳು ಮತ್ತು ಸರ್ಕಾರಿ ಕಟ್ಟಡಗಳ ಚಾಣಿಯಲ್ಲಿ ಸೌರವಿದ್ಯುತ್‌ ಯೋಜನೆ ಸ್ಥಾಪಿಸಲು ಮುಂದಾಗಿರುವುದು ಉತ್ತಮ ಚಿಂತನೆಯಾಗಿದೆ.

ರಸ್ತೆ ವಿಸ್ತರಿಸಲು ಆದ್ಯತೆ ನೀಡಲಾಗಿದೆ. ಆದರೆ, ಬಸ್‌ಗೆ ಪ್ರತ್ಯೇಕ ಪಥ, ಸೈಕ್ಲಿಂಗ್‌ಗೆ ಆದ್ಯತೆ ನೀಡಿಲ್ಲ. ಸಂಚಾರದಟ್ಟಣೆಯ ದೀರ್ಘ ಪರಿಹಾರಕ್ಕೆ ಸುಸ್ಥಿರ ಯೋಜನೆಗಳು ಇಲ್ಲದಿರುವುದು ಕಳವಳ ಉಂಟು ಮಾಡಿದೆ.

ಶ್ರೀನಿವಾಸ ಅಲವಿಳ್ಳಿ, ನಾಗರಿಕ ಕಾರ್ಯಕರ್ತ

ಶ್ರೀನಿವಾಸ ಅಲವಿಳ್ಳಿ

****

ಉತ್ತಮ ಬಜೆಟ್‌

ಉತ್ತಮ ಆಶಯ ಇಟ್ಟುಕೊಂಡು ತಯಾರಿಸಲಾದ ಬಜೆಟ್‌ ಇದಾಗಿದೆ. ಆದರೂ ಕೆಲವೊಂದು ಕಾರ್ಯಗಳಿಗೆ ಆದ್ಯತೆ ನೀಡಬೇಕಿತ್ತು. ತ್ಯಾಜ್ಯ ವಿಂಗಡಣೆ ಮತ್ತು ವಾಹನ ಚಾಲಕ ಆಧಾರಿತ ಉಪಕ್ರಮಗಳ ಮೇಲೆ ಗಮನಹರಿಸಿಲ್ಲ. ಎಸ್‌ಪಿವಿ ಸೇರಿದಂತೆ ವ್ಯವಸ್ಥೆಯಲ್ಲಿ ಗುಣಮಟ್ಟದೊಂದಿಗೆ ಸಕಾಲಿಕ, ದೊಡ್ಡ ಪ್ರಮಾಣದ ಯೋಜನೆಗಳನ್ನು ಕೈಗೊಳ್ಳುವ ಸಾಮರ್ಥ್ಯದ ಕೊರತೆ ಕಾಣುತ್ತಿದೆ.

ವಿ. ರವಿಚಂದರ್‌, ನಗರ ತಜ್ಞ

ವಿ. ರವಿಚಂದರ್‌

****

ಕೇಂದ್ರದ ನಿಯಮದಂತೆ ಕಸ ಶುಲ್ಕ

ಸ್ವಚ್ಛ ಭಾರತ ಯೋಜನೆಯಡಿ ಕೇಂದ್ರ ಸರ್ಕಾರ ನಿಯಮ ರೂಪಿಸಿದ್ದು, ಅದರಂತೆ ಕಸ ನಿರ್ವಹಣೆಗೆ ಬಳಕೆದಾರರ ಶುಲ್ಕವನ್ನು ಸಂಗ್ರಹಿಸಲು ಬಿಬಿಎಂಪಿ ಮುಂದಾಗಿದೆ. ಏ.1ರಿಂದಲೇ ಈ ಯೋಜನೆ ಜಾರಿಗೊಳ್ಳಲಿದೆ. ಬೆಂಗಳೂರಿನಲ್ಲಿ ಯಾವುದೂ ಸುಲಭವಾಗಿ ದೊರೆಯುವುದಿಲ್ಲ. ಪ್ರತಿ ಮನೆಗೆ ತೆರಳಿ ಕಸ ಸಂಗ್ರಹದ ಶುಲ್ಕ ಸಂಗ್ರಹಿಸಲು ಸಾಧ್ಯವಿಲ್ಲ. ಅದಕ್ಕಾಗಿ ತೆರಿಗೆ ರೂಪದಲ್ಲಿ ಸಂಗ್ರಹಿಸಲಾಗುವುದು. ಬ್ರ್ಯಾಂಡ್‌ ಬೆಂಗಳೂರು ಎಂಬ ಉತ್ತಮ ಕಲ್ಪನೆ ಈಗ ಸಾಕಾರಗೊಳ್ಳುವ ಹಂತಕ್ಕೆ ಬಂದಿದೆ. ಎರಡು ವರ್ಷದಲ್ಲಿ ಪೂರ್ಣಗೊಳ್ಳಲಿದೆ.

ಎಸ್‌.ಆರ್‌. ಉಮಾಶಂಕರ್‌, ಬಿಬಿಎಂಪಿ ಆಡಳಿತಾಧಿಕಾರಿ

ಎಸ್‌.ಆರ್‌. ಉಮಾಶಂಕರ್‌

****

ಬ್ರ್ಯಾಂಡ್‌ ಬೆಂಗಳೂರು ಪ್ರತ್ಯೇಕವಲ್ಲ

ಬ್ರ್ಯಾಂಡ್‌ ಬೆಂಗಳೂರು ಎಂಬುದು ಪ್ರತ್ಯೇಕ ಯೋಜನೆಯಲ್ಲ. ಆರೋಗ್ಯ, ಶಿಕ್ಷಣ, ಮೂಲಸೌಕರ್ಯಕ್ಕೆ ಮಾಡುವ ವೆಚ್ಚಗಳೆಲ್ಲ ಬ್ರ್ಯಾಂಡ್ ಬೆಂಗಳೂರಿಗಾಗಿಯೇ ಮಾಡುವುದಾಗಿದೆ. ಬ್ರ್ಯಾಂಡ್ ಬೆಂಗಳೂರು ಅನ್ನು ವಿಶೇಷ ಕಾರ್ಯಕ್ರಮಗಳಾಗಿ ಎಂಟು ವಿಭಾಗಗಳಾಗಿ ಮಾಡಲಾಗಿದೆ. ಕಾಮಗಾರಿ ಕೈಗೊಳ್ಳುವಾಗ ಬಿಬಿಎಂಪಿಯಲ್ಲಿ ದುಡ್ಡಿಲ್ಲ ಎಂಬ ಆರೋಪ ಬರಬಾರದು ಎಂಬ ಕಾರಣಕ್ಕೆ ಸ್ಕ್ರೊ ಖಾತೆಯಲ್ಲಿ ಇಡಲಾಗಿದೆ. ₹1,828 ಕೋಟಿ ವೆಚ್ಚದಲ್ಲಿ ಹೊಸ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು.

-ತುಷಾರ್ ಗಿರಿನಾಥ್, ಬಿಬಿಎಂಪಿಯ ಮುಖ್ಯ ಆಯುಕ್ತ

ತುಷಾರ್ ಗಿರಿನಾಥ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.