ADVERTISEMENT

ಬೆಂಗಳೂರು ಬ್ಯುಸಿನೆಸ್ ಕಾರಿಡಾರ್: ಮೂರು ಪ್ಯಾಕೇಜ್‌ಗಳಲ್ಲಿ ಟೆಂಡರ್‌ಗೆ ಸಿದ್ಧತೆ

ಮಾರ್ಚ್‌ ತಿಂಗಳಲ್ಲಿ ಪ್ರಕ್ರಿಯೆ ಆರಂಭ

ಕೆ.ಎಸ್.ಸುನಿಲ್
Published 16 ಫೆಬ್ರುವರಿ 2026, 23:30 IST
Last Updated 16 ಫೆಬ್ರುವರಿ 2026, 23:30 IST
ಬಿಡಿಎ
ಬಿಡಿಎ   

ಬೆಂಗಳೂರು: ಬೆಂಗಳೂರು ಬ್ಯುಸಿನೆಸ್ ಕಾರಿಡಾರ್ (ಬಿಬಿಸಿ–ಪಿಆರ್‌ಆರ್‌–1) ಯೋಜನೆಗೆ ಸಂಬಂಧಿಸಿದ ಸಿವಿಲ್ ಕಾಮಗಾರಿಗಳಿಗೆ ಮೂರು ಪ್ಯಾಕೇಜ್‌ಗಳಲ್ಲಿ ಟೆಂಡರ್ ಕರೆಯಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಸಿದ್ಧತೆ ನಡೆಸಿದೆ.

ಭೂಸ್ವಾಧೀನ ಪ್ರಕ್ರಿಯೆ ಸುಗಮಗೊಳಿಸಲು ಹಾಗೂ ಕಾಮಗಾರಿ ವೇಗಗೊಳಿಸಲು ಈ ಯೋಜನೆಯನ್ನು ಮೂರು ಪ್ಯಾಕೇಜ್‌ಗಳಾಗಿ ವಿಂಗಡಿಸಲಾಗಿದೆ. ಈ ಪೈಕಿ ತುಮಕೂರು ರಸ್ತೆ– ಬಳ್ಳಾರಿ ರಸ್ತೆವರೆಗಿನ ಸಿವಿಲ್ ಕಾಮಗಾರಿಗಳ ಟೆಂಡರ್‌ ಅನ್ನು ಮಾರ್ಚ್ ಅಂತ್ಯದೊಳಗೆ ಆಹ್ವಾನಿಸಲಾಗುತ್ತದೆ.

ಮೊದಲ ಪ್ಯಾಕೇಜ್ ಮಾದಾವರ (ನೆಲಮಂಗಲ) –ವಿಮಾನ ನಿಲ್ದಾಣ ರಸ್ತೆ (23 ಕಿ.ಮೀ), ಅಂದಾಜು ವೆಚ್ಚ ₹2,850 ಕೋಟಿ. ಎರಡನೇ ಪ್ಯಾಕೇಜ್ ವಿಮಾನ ನಿಲ್ದಾಣ–ಹಳೇ ಮದ್ರಾಸ್ ರಸ್ತೆ, ಅಂದಾಜು ವೆಚ್ಚ ₹1,569 ಕೋಟಿ. ಏಪ್ರಿಲ್‌ ತಿಂಗಳಲ್ಲಿ ಟೆಂಡರ್ ಕರೆಯಲಾಗುತ್ತದೆ. ಮೂರನೇ ಪ್ಯಾಕೇಜ್ ಹಳೆ ಮದ್ರಾಸ್ ರಸ್ತೆ– ಹೊಸೂರು ರಸ್ತೆ (ಎಲೆಕ್ಟ್ರಾನಿಕ್ ಸಿಟಿ ಸಮೀಪ) (27.75 ಕಿ.ಮೀ); ಅಂದಾಜು ವೆಚ್ಚ ₹3,413 ಕೋಟಿ.

ADVERTISEMENT

ಸರ್ಕಾರದ ಖಾತರಿಯೊಂದಿಗೆ ಬಿಬಿಸಿ ನಿರ್ಮಾಣಕ್ಕೆ ಹುಡ್ಕೊ ಮೂಲಕ ₹27 ಸಾವಿರ ಕೋಟಿ ಸಾಲ ಪಡೆಯಲಾಗಿದೆ. ಇದರಲ್ಲಿ ಸಿವಿಲ್ ಕಾಮಗಾರಿಗಳಿಗೆ ಸುಮಾರು ₹7,500 ಕೋಟಿ ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿದೆ. ಯೋಜನೆ ಮುಗಿದ ಮೇಲೆ ಹಣ ಉಳಿಯುವ ಸಾಧ್ಯತೆ ಇದೆ ಎಂದು ಬಿಡಿಎ ಅಧಿಕಾರಿಗಳು ತಿಳಿಸಿದರು.

ತುಮಕೂರು ರಸ್ತೆಯ ಮಾದಾವರದಿಂದ ಆರಂಭವಾಗಿ ಉತ್ತರ ಮತ್ತು ಪೂರ್ವದ ರಸ್ತೆಗಳ ಮೂಲಕ ಸಾಗಿ ದಕ್ಷಿಣ ದಿಕ್ಕಿನ ಕೋನಪ್ಪನ ಅಗ್ರಹಾರದ ಬಳಿಯ ಹೊಸೂರು ರಸ್ತೆಯಲ್ಲಿ ಅಂತ್ಯಗೊಳ್ಳುವ 73 ಕಿ.ಮೀ. ಉದ್ದದ ಯೋಜನೆಗೆ 67 ಗ್ರಾಮಗಳಲ್ಲಿ 2,557 ಎಕರೆ ಸ್ವಾಧೀನಪಡಿಸಿಕೊಳ್ಳಲಾಗುತ್ತಿದೆ. ಈಗಾಗಲೇ 2,810 ಎಕರೆ ಸ್ವಾಧೀನಕ್ಕೆ ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ. 3,586 ಭೂಮಾಲೀಕರ ಪೈಕಿ ಈವರೆಗೂ 500ಕ್ಕೂ ಅಧಿಕ ರೈತರು ಜಮೀನು ಸ್ವಾಧೀನ ಪಡಿಸಿಕೊಳ್ಳಲು ಸಮ್ಮತಿ ಪತ್ರ ಸಲ್ಲಿಸಿ, ಪರಿಹಾರ ಪಡೆದುಕೊಂಡಿದ್ದಾರೆ.

ತುಮಕೂರು ರಸ್ತೆಯಿಂದ ಯಲಹಂಕ, ಎಲೆಕ್ಟ್ರಾನಿಕ್ ಸಿಟಿ– ಮೈಸೂರು ರಸ್ತೆ ಮೂಲಕ ಬೆಂಗಳೂರು ಎಕ್ಸಿಬಿಷನ್ ಸೆಂಟರ್‌ವರೆಗೂ ಕಾರಿಡಾರ್‌ ಸಾಗಲಿದೆ. ಈ ರಸ್ತೆಯು ಬೆಂಗಳೂರಿನ ಉತ್ತರ ಭಾಗದಲ್ಲಿ 73 ಕಿ.ಮೀ ಸಾಗಲಿದ್ದು, ಉಳಿದದ್ದು ಬೆಂಗಳೂರಿನ ದಕ್ಷಿಣ ಭಾಗದಲ್ಲಿ ಸಾಗಲಿದೆ. ಶೇ 40ರಷ್ಟು ದಟ್ಟಣೆ ಕಡಿಮೆಯಾಗಲಿದ್ದು, ಎಲೆಕ್ಟ್ರಾನಿಕ್ ಸಿಟಿ, ತುಮಕೂರು ರಸ್ತೆ, ನೆಲಮಂಗಲ, ಮೈಸೂರು ರಸ್ತೆ ಕಡೆ ಹೋಗುವ ವಾಹನಗಳು ಈ ರಸ್ತೆಯಲ್ಲಿ ಸಾಗಲಿವೆ.

ರಸ್ತೆಯ ಎರಡೂ ಭಾಗದಲ್ಲಿ ಸರ್ವೀಸ್ ರಸ್ತೆ ಇರಲಿದ್ದು, ಪ್ರಮುಖ ರಸ್ತೆ ಟೋಲ್ ರಸ್ತೆಯಾಗಲಿದೆ. ರಸ್ತೆಯ ಮಧ್ಯೆ ನಮ್ಮ ಮೆಟ್ರೊ ಯೋಜನೆಗೆ 5 ಮೀಟರ್‌ ಕಲ್ಪಿಸಲಾಗುವುದು. ಉಳಿದ 35 ಮೀಟರ್‌ ಜಾಗವನ್ನು ರೈತರಿಗೆ ಪರಿಹಾರ ರೂಪದಲ್ಲಿ ಮರಳಿ ನೀಡಲಾಗುತ್ತದೆ.

₹2,850 ಕೋಟಿಮೊದಲ ಹಂತದ ಪ್ಯಾಕೇಜ್ ಮೊತ್ತ ‘₹1,569 ಕೋಟಿಎರಡನೇ ಹಂತದ ಪ್ಯಾಕೇಜ್ ಮೊತ್ತ ₹3,413 ಕೋಟಿಮೂರನೇ ಹಂತದ ಪ್ಯಾಕೇಜ್ ಮೊತ್ತ

ಎಲ್‌.ಕೆ.ಅತೀಕ್

‘ನಗರಕ್ಕೆ ದೊಡ್ಡ ಮಟ್ಟದಲ್ಲಿ ಅನುಕೂಲ’

‘ಭೂಸ್ವಾಧೀನ ಪ್ರಕ್ರಿಯೆ ಸುಗಮಗೊಳಿಸಲು ಈ ಯೋಜನೆಯನ್ನು ಮೂರು ಪ್ಯಾಕೇಜ್‌ಗಳಾಗಿ ವಿಂಗಡಿಸಲಾಗಿದ್ದು ಮಾರ್ಚ್‌ನಲ್ಲಿ ಟೆಂಡರ್ ಪ್ರಕ್ರಿಯೆ ಆರಂಭಗೊಳ್ಳಲಿದೆ. ಸಂಚಾರ ದಟ್ಟಣೆ ನಿವಾರಣೆಗೆ ಈ ಯೋಜನೆ ಅಗತ್ಯವಾಗಿದೆ. ಈ ಯೋಜನೆಯಿಂದ ಬೆಂಗಳೂರು ನಗರಕ್ಕೆ ದೊಡ್ಡ ಮಟ್ಟದಲ್ಲಿ ಅನುಕೂಲ ಆಗಲಿದೆ ’ ಎಂದು ಬಿಬಿಸಿ ವಿಶೇಷ ಉದ್ದೇಶದ ಘಟಕ (ಎಸ್‌ಪಿವಿ) ಅಧ್ಯಕ್ಷ ಎಲ್.ಕೆ.ಅತೀಕ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.