ADVERTISEMENT

ಸಿಸಿಬಿ ದಾಳಿ | ಆರು ಮಂದಿ ಸೆರೆ: ಗಾಂಜಾ, ಎಂಡಿಎಂಎ ಕ್ರಿಸ್ಟಲ್, ಇ–ಸಿಗರೇಟು ಜಪ್ತಿ

ಬಂಧಿತರಿಂದ

​ಪ್ರಜಾವಾಣಿ ವಾರ್ತೆ
Published 3 ಜೂನ್ 2025, 23:35 IST
Last Updated 3 ಜೂನ್ 2025, 23:35 IST
ಆರೋಪಿಗಳಿಂದ ಜಪ್ತಿ  ಮಾಡಿಕೊಳ್ಳಲಾದ ಡ್ರಗ್ಸ್‌ ಅನ್ನು ನಗರ ಪೊಲೀಸ್‌ ಕಮಿಷನರ್‌ ಬಿ.ದಯಾನಂದ ಅವರು ಪರಿಶೀಲಿಸಿದರು  
ಆರೋಪಿಗಳಿಂದ ಜಪ್ತಿ  ಮಾಡಿಕೊಳ್ಳಲಾದ ಡ್ರಗ್ಸ್‌ ಅನ್ನು ನಗರ ಪೊಲೀಸ್‌ ಕಮಿಷನರ್‌ ಬಿ.ದಯಾನಂದ ಅವರು ಪರಿಶೀಲಿಸಿದರು     

ಬೆಂಗಳೂರು: ನಾಲ್ಕು ಪ್ರತ್ಯೇಕ ಪ್ರಕರಣಗಳಲ್ಲಿ ಸಿಸಿಬಿಯ ಮಾದಕ ದ್ರವ್ಯ ನಿಗ್ರಹ ದಳದ ಸಿಬ್ಬಂದಿ ನಗರದ ವಿವಿಧೆಡೆ ಕಾರ್ಯಾಚರಣೆ ನಡೆಸಿ, ಆರು ಮಂದಿಯನ್ನು ಬಂಧಿಸಿದ್ದು ₹ 84 ಲಕ್ಷ ಮೌಲ್ಯದ ಡ್ರಗ್ಸ್‌ ವಶಪಡಿಸಿಕೊಳ್ಳಲಾಗಿದೆ.

ರಾಜಗೋಪಾಲನಗರದ ದರ್ಶನ್, ಪ್ರಜ್ವಲ್ ಹಾಗೂ ಕೇರಳದ ಅಲೆಕ್ಸ್ ವರ್ಗಿಸ್, ಹಾದಿಲ್, ಅನಸ್ಮೊಯ್ದು, ಜೋಬಿನ್ ಬಂಧಿತರು.

ಬ್ಯಾಡರಹಳ್ಳಿ ವ್ಯಾಪ್ತಿಯಲ್ಲಿ ನಡೆದ ಕಾರ್ಯಾಚರಣೆಯಲ್ಲಿ 1 ಕೆ.ಜಿ 200 ಗ್ರಾಂ ಗಾಂಜಾ , 220 ಗ್ರಾಂ ಹೈಡ್ರೊ ಗಾಂಜಾ, ಎರಡು ಐ–ಫೋನ್‌ ವಶಕ್ಕೆ ಪಡೆದುಕೊಳ್ಳಲಾಗಿದೆ. ಇದರ ಮೌಲ್ಯ ₹13 ಲಕ್ಷ ಎಂದು ಅಂದಾಜಿಸಲಾಗಿದೆ ಎಂದು ಪೊಲೀಸರು ತಿಳಿಸಿದರು.

ADVERTISEMENT

‘ಹಾದಿಲ್ ಹಾಗೂ ಜೋಬಿನ್‌ ಅವರು ಮೋಜಿನ ಜೀವನ ನಡೆಸಲು ಕೇರಳದಿಂದ ಡ್ರಗ್ಸ್ ತಂದು ಬೆಂಗಳೂರಿನಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದರು’ ಎಂದು ಹೇಳಿದರು.

ಬ್ಯಾಡರಹಳ್ಳಿ ವ್ಯಾಪ್ತಿಯಲ್ಲಿ ನಡೆದ ಕಾರ್ಯಾಚರಣೆಯಲ್ಲಿ ರಾಜಗೋಪಾಲನಗರದ ದರ್ಶನ್ ಹಾಗೂ ಪ್ರಜ್ವಲ್‌ ಅವರನ್ನು ಬಂಧಿಸಲಾಗಿದೆ. ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೂಕಿನ ಬೆಳ್ಳೂರು ಕ್ರಾಸ್ ಬಳಿ ಅಪರಿಚಿತ ವ್ಯಕ್ತಿಯಿಂದ ಗಾಂಜಾ ಹಾಗೂ ಎಂಡಿಎಂಎ ಡ್ರಗ್ಸ್ ಅನ್ನು ಕಡಿಮೆ ಬೆಲೆಗೆ ಖರೀದಿಸಿ ನಗರಕ್ಕೆ ತಂದು ಮಾರಾಟ ಮಾಡುತ್ತಿದ್ದರು. ಆರೋಪಿಗಳಿಂದ ಗಾಂಜಾ, ಎಂಡಿಎಂಎ ಕ್ರಿಸ್ಟಲ್ ಹಾಗೂ ತೂಕದ ಯಂತ್ರವನ್ನು ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದರು.

ನಿಷೇಧಿತ ತಂಬಾಕು ಉತ್ಪನ್ನ ಜಪ್ತಿ: ನಿಷೇಧಿತ ತಂಬಾಕು ಉತ್ಪನ್ನಗಳನ್ನು ಅಕ್ರಮವಾಗಿ ದಾಸ್ತಾನು ಮಾಡಿದ್ದ ಗೋದಾಮಿನ ಮೇಲೆ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.

ತಲಘಟ್ಟಪುರ ಪೊಲೀಸ್ ಠಾಣಾ ವ್ಯಾಪ್ತಿಯ ಕನಕಪುರ ಮುಖ್ಯರಸ್ತೆಯಲ್ಲಿರುವ ಗೋದಾಮಿನ ಮೇಲೆ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿ, ತಂಬಾಕು ಹಾಗೂ ನಿಕೋಟಿನ್ ಒಳಗೊಂಡ ಅಂದಾಜು ₹61.82 ಲಕ್ಷ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ.

ಪರವಾನಗಿ ಪಡೆಯದೆ ತಂಬಾಕು ಉತ್ಪನ್ನಗಳನ್ನು ಹಲವು ದಿನಗಳಿಂದ ಸಂಗ್ರಹಿಸಿ ಆರೋಪಿಗಳು ಹಂಚಿಕೆ ಮಾಡುತ್ತಿದ್ದರು. ಈ ಬಗ್ಗೆ ಬಂದ ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಲಾಯಿತು. ಈ ವೇಳೆ ಗೋದಾಮಿನಲ್ಲಿ ಸಂಗ್ರಹಿಸಿಟ್ಟಿದ್ದ ಗಣೇಶ್ 701 ಟೊಬ್ಯಾಕೊ ಪೊಟ್ಟಣಗಳಿದ್ದ 155 ಚೀಲಗಳು, ಕೂಲ್ ಲಿಪ್ ಟೊಬ್ಯಾಕೊ ಇರುವ 160 ಚೀಲಗಳು, ಎಸ್‌ಜಿಟಿ 60 ಬಾಕ್ಸ್‌ಗಳು, ಸ್ವಾಗಟ ಪಾನ್ ಮಸಾಲಾ 60 ಬಾಕ್ಸ್‌ಗಳು ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇ–ಸಿಗರೇಟುಗಳು ಜಪ್ತಿ: ಎಚ್‌ಬಿಆರ್ ಲೇಔಟ್ ಎರಡನೇ ಹಂತದ ಅಂಗಡಿಯೊಂದರ ಮೇಲೆ ದಾಳಿ ನಡೆಸಿ ನಿಷೇಧಿತ ಸಿಗರೇಟ್‌, ಹುಕ್ಕಾ, ಫಾರಿನ್‌ ಸಿಗರೇಟ್‌ಗಳನ್ನು ವಶಕ್ಕೆ ಪಡೆದುಕೊಂಡಿದ್ದು, ಆರೋಪಿಯನ್ನು ಬಂಧಿಸಲಾಗಿದೆ. 

ಅಲೆಕ್ಸ್ ವರ್ಗಿಸ್
ಅನಸ್ಮೊಯ್ದು
ಜೋಬಿನ್
ಹಾದಿಲ್‌ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.