ADVERTISEMENT

ಬೆಂಗಳೂರು ಸಿಟಿ ಪೊಲೀಸರ ಹೊಸ ಯೋಜನೆ: ಸಿನಿಮಾ ಪೋಸ್ಟರ್‌ನಲ್ಲಿ ಕೊರೊನಾ ಜಾಗೃತಿ

​ಪ್ರಜಾವಾಣಿ ವಾರ್ತೆ
Published 20 ಮೇ 2020, 15:04 IST
Last Updated 20 ಮೇ 2020, 15:04 IST
ಕವಚ
ಕವಚ   

‘ನೋಡಿ ಸ್ವಾಮಿ ನಾವು ಮಾಸ್ಕ್‌ ಹಾಕೋದು ಕಡ್ಡಾಯ.. .‘ – ‘ನಾಳೆ ಎಂಬುವ ಚಿಂತೆ ಮನದಲಿ ಇರಲಿ. ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಿ, ಸುರಕ್ಷಿತವಾಗಿರಿ...

ಇದೇನಿದು ಕೊರೊನಾ ವಿರುದ್ಧ ಜಾಗೃತಿ ಮೂಡಿಸುವ ಸಾಲುಗಳಲ್ಲಿ, ನಟ ಶಂಕರ್‌ನಾಗ್ ಸಿನಿಮಾದ ‘ನೋಡಿ ಸ್ವಾಮಿ ನಾವಿರೋದು ಹೀಗೆ‘ ಸಿನಿಮಾ ಟೈಟಲ್ ಮತ್ತು ಡೈಲಾಗ್‌ ಸೊಗಡು ಕಾಣಿಸುತ್ತಿದೆಯಲ್ಲಾ ಎನ್ನಿಸುತ್ತಿದೆಯಾ ?

ಹೌದು, ಬೆಂಗಳೂರು ಸಿಟಿ ಪೊಲೀಸರು ಕೊರೊನಾ ವಿರುದ್ಧ ಜಾಗೃತಿ ಮೂಡಿಸಲು ಈಗ ಇಂಥ ಜನಪ್ರಿಯ ಸಿನಿಮಾ ಪೋಸ್ಟರ್‌ಗಳ ಮೊರೆ ಹೋಗಿದ್ದಾರೆ. ಸಿನಿಮಾದ ಜನಪ್ರಿಯ ಡೈಲಾಗ್ ಪರಿಕಲ್ಪನೆಯನ್ನೇ ಕೊರೊನಾ ಜಾಗೃತಿಯ ಮಾಹಿತಿಗಳನ್ನಾಗಿ ಪರಿವರ್ತಿಸಿ ಆಕರ್ಷಕ ಪೋಸ್ಟರ್‌ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ##ಮಾಸ್ಕಪ್‌ ಬೆಂಗಳೂರು, ಕೊರೊನಾವ್ನು ಬಂಧಿಸಿ## ಹ್ಯಾಷ್‌ಟ್ಯಾಗ್ ನೊಂದಿಗೆ ಹಂಚುತ್ತಿದ್ದಾರೆ.

ADVERTISEMENT

ಕೊರೊನಾ ಸೋಂಕು ಜಾಗೃತಿ ಅಲ್ಲದೇ, ಈ ಸೋಂಕಿನ ವಿರುದ್ಧ ಸುಳ್ಳು ಸುದ್ಧಿ ಹರಡುವುದರ ಬಗ್ಗೆ ನಟ ಉಪೇಂದ್ರ ಅವರ ‘ಬುದ್ಧಿವಂತ‘ ಸಿನಿಮಾದ ಪೋಸ್ಟರ್‌ – ಟೈಟಲ್‌ನೊಂದಿಗೆ ಎಚ್ಚರಿಕೆ ನೀಡುವ ಪೋಸ್ಟರ್ ಮಾಡಿಸಿದ್ದಾರೆ. ‘ಒಬ್ಬ ಬುದ್ದಿವಂತ‘ ಶೀರ್ಷಿಕೆಯ ಕೆಳಗೆ ‘ಪರಿಶೀಲಿಸದ ಮಾಹಿತಿಯನ್ನು ಫಾರ್ವರ್ಡ್‌ ಮಾಡುವುದಿಲ್ಲ‘ ಎಂಬ ಅಡಿಬರಹವನ್ನು ಉಲ್ಲೇಖಿಸಿದ್ದಾರೆ.
‘ಪೊಗರು‘ ಸಿನಿಮಾದ ಪೋಸ್ಟರ್ ಬಳಸಿಕೊಂಡು ‘ ಲಾಕ್ಡೌನ್ ರಿಲ್ಯಾಕ್ಸಾಗಿದೆ ಅಂತ ಸುಮ್ಮೆ ಹೊರಗಡೆ ಹೋಗ್ಬೇಡ, ಹೋದ್ರೂ ಮಾಸ್ಕ್ ಇಲ್ಲೇ ಹೋಗ್ಬೇಡ..ಶೇಕ್ ಆಗಿ ಹೋಗ್ತಿಯಾ' ಎಂಬ ಪೋಸ್ಟರ್ ಅನ್ನು ಬೆಂಗಳೂರು ಸಿಟಿ ಪೊಲೀಸರು ತಮ್ಮ ಇಲಾಖೆಯ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಹ್ಯಾಟ್ರಿಕ್ ಹೀರೊ ಶಿವರಾಜ್‌ ಕುಮಾರ್ ನಟನೆಯ ‘ಕವಚ‘ ಪೋಸ್ಟರ್‌ನಲ್ಲಿ ‘ಈ ಕವಚ ಲೋಹದಿಂದ ಮಾಡಲ್ಪಟ್ಟಿಲ್ಲ, ಆದರೆ ಇದರಿಂದ ನಿಮ್ಮ ಜೀವವನ್ನು ಉಳಿಸಬಹುದು‘ ಎಂಬ ಅಡಿ ಬರಹ ಉಲ್ಲೇಖಿಸಿದ್ದಾರೆ. ಕಿಚ್ಚ ಸುದೀಪ್ ನಟನೆ ‘ಪೈಲ್ವಾನ್‘, ರಕ್ಷಿತ್ ಶೆಟ್ಟಿ ಅಭಿನಯದ ‘ಅವನೇ ಶ್ರೀಮನ್ನಾರಾಯಣ‘ ಚಿತ್ರದ ಪೋಸ್ಟರ್‌ಗಳ ಮೂಲಕ ಜಾಗೃತಿ ಮೂಡಿಸುತ್ತಿದ್ದಾರೆ.

ಕೊರೊನಾ ಲಾಕ್‌ಡೌನ್‌ಶುರುವಾಗಿನಿಂದ ವಿವಿಧ ವಿಧಾನದಲ್ಲಿ ಕೊರೊನಾ ಜಾಗೃತಿ ಮೂಡಿಸುತ್ತಿರುವ ಬೆಂಗಳೂರು ಪೊಲೀಸರು, ಈ ಬಾರಿ ಜನಪ್ರಿಯಾ ಸಿನಿಮಾ ಪೋಸ್ಟರ್‌ಗಳನ್ನು ಸಮರ್ಪಕವಾಗಿ ಬಳಸಿಕೊಂಡಿದ್ದಾರೆ. ಎಲ್ಲ ಪೋಸ್ಟರ್‌ಗಳಿಗೂ ಸಾಮಾಜಿಕ ಜಾಲತಾಣಗಳಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.