
ಸಾಂದರ್ಭಿಕ ಚಿತ್ರ
ಬೆಂಗಳೂರು: ಪ್ರಮುಖ ಶಿಕ್ಷಣ ಸಂಸ್ಥೆಗಳಾಗಿರುವ ರಾಮನಾರಾಯಣ ಚೆಲ್ಲಾರಾಂ (ಆರ್.ಸಿ) ಕಾಲೇಜು ಮತ್ತು ಸರ್ಕಾರಿ ಕಲಾ ಕಾಲೇಜುಗಳನ್ನು ಬೆಂಗಳೂರು ನಗರ ವಿಶ್ವವಿದ್ಯಾಲಯದ ಘಟಕಕ್ಕೆ ಸೇರಿಸುವ ಯತ್ನ ಮತ್ತೆ ನಡೆದಿದೆ. ಇದರಿಂದ ತಮ್ಮ ಭವಿಷ್ಯಕ್ಕೆ ಮಾರಕವಾಗಲಿದೆ ಎಂದು ಸಾವಿರಾರು ವಿದ್ಯಾರ್ಥಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ಆರ್.ಸಿ ಕಾಲೇಜಿನಲ್ಲಿ ಸುಮಾರು ಐದು ಸಾವಿರ ಹಾಗೂ ಕಲಾ ಕಾಲೇಜಿನಲ್ಲಿ 2,100ಕ್ಕೂ ಅಧಿಕ ವಿದ್ಯಾರ್ಥಿಗಳು ಈಗ ಕಡಿಮೆ ಶುಲ್ಕದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಈ ಎರಡೂ ಕಾಲೇಜುಗಳನ್ನು ವಿಶ್ವವಿದ್ಯಾಲಯದ ಘಟಕ ಕಾಲೇಜುಗಳನ್ನಾಗಿ ಮಾಡಿದರೆ ಶುಲ್ಕ ದುಬಾರಿಯಾಗಲಿದೆ ಎಂಬ ಆತಂಕವನ್ನು ವಿದ್ಯಾರ್ಥಿಗಳು, ಪೋಷಕರು ವ್ಯಕ್ತಪಡಿಸಿದ್ದಾರೆ.
ಪ್ರಸ್ತುತ ಕಲಾ ಕಾಲೇಜಿನಲ್ಲಿ ಬಿಎ, ಬಿಕಾಂ ಮತ್ತು ಬಿಬಿಎಗೆ ಹೆಣ್ಣು ಮಕ್ಕಳಿಗೆ ₹4,987 ಮತ್ತು ಗಂಡು ಮಕ್ಕಳಿಗೆ ₹5,974 ಶುಲ್ಕವಿದೆ. ಆರ್.ಸಿ ಕಾಲೇಜಿನಲ್ಲಿ ಬಿ.ಕಾಂ ಮತ್ತು ಬಿಬಿಎಗೆ ಹೆಣ್ಣು ಮಕ್ಕಳಿಗೆ ₹5,502 ಮತ್ತು ಗಂಡು ಮಕ್ಕಳಿಗೆ ₹6,489 ಶುಲ್ಕವಿದೆ. ಒಂದು ವೇಳೆ ಇವೆರಡೂ ವಿ.ವಿಯ ಘಟಕ ಕಾಲೇಜುಗಳಾದರೆ, ಶುಲ್ಕ ಹೆಚ್ಚಾಗಲಿದ್ದು, ಬಡವರು, ಮಧ್ಯಮ ವರ್ಗದವರಿಗೆ ಪದವಿ ಶಿಕ್ಷಣ ದುಬಾರಿಯಾಗಲಿದೆ ಎನ್ನುತ್ತಾರೆ ವಿದ್ಯಾರ್ಥಿಗಳು.
‘ಮಲ್ಲೇಶ್ವರದ ಮಹಿಳಾ ಕಾಲೇಜು ಪ್ರಸ್ತುತ ನಗರ ವಿಶ್ವವಿದ್ಯಾಲಯದ ಘಟಕ ಕಾಲೇಜು ಆಗಿದ್ದು, ಅಲ್ಲಿ ಬಿಎಗೆ ₹13,502, ಬಿ.ಕಾಂಗೆ ₹20,489, ಬಿಸಿಎಗೆ ₹31,721 ಹಾಗೂ ಬಿಬಿಎಗೆ ₹25,369 ಶುಲ್ಕ ನಿಗದಿಪಡಿಸಲಾಗಿದೆ. ಈಗ ಆರ್.ಸಿ ಮತ್ತು ಕಲಾ ಕಾಲೇಜುಗಳನ್ನು ವಿ.ವಿಯ ಘಟಕಗಳನ್ನಾಗಿ ಮಾಡಿದರೆ ನಾವು ಕೂಡ ಇದೇ ರೀತಿ ದುಬಾರಿ ಶುಲ್ಕ ಪಾವತಿಸಬೇಕಾಗುತ್ತದೆ’ ಎಂಬುದು ಈ ಕಾಲೇಜುಗಳಲ್ಲಿನ ವಿದ್ಯಾರ್ಥಿಗಳ ಆತಂಕ.
ಮಲ್ಲೇಶ್ವರದ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿಎ, ಬಿ.ಕಾಂ ಮತ್ತು ಬಿಬಿಎ ಕೋರ್ಸ್‌ಗಳಿಗೆ ಗಂಡು ಮಕ್ಕಳಿಗೆ ₹6,021 ಹಾಗೂ ಹೆಣ್ಣು ಮಕ್ಕಳಿಗೆ ₹5,034 ಶುಲ್ಕವಿದೆ. ಒಂದು ವೇಳೆ ಮಲ್ಲೇಶ್ವರದ ಮಹಿಳಾ ಕಾಲೇಜು ನಗರ ವಿ.ವಿಯ ಘಟಕ ಕಾಲೇಜು ಆಗದೆ ಇದ್ದಿದ್ದರೆ, ಅಲ್ಲಿ ವ್ಯಾಸಂಗ ಮಾಡುತ್ತಿರುವವರು ಕೂಡ ಇಷ್ಟೇ ಪ್ರಮಾಣದಲ್ಲಿ ಶುಲ್ಕ ನೀಡುತ್ತಿದ್ದರು. ಆದರೆ, ಘಟಕ ಕಾಲೇಜು ಆಗಿರುವ ಕಾರಣ ಅಧಿಕ ಶುಲ್ಕ ಪಾವತಿಸುತ್ತಿದ್ದಾರೆ.
‘ಈಗ ಇನ್ನೂ ಎರಡು ಕಾಲೇಜುಗಳನ್ನು ಘಟಕ ಕಾಲೇಜುಗಳಾಗಿ ಪರಿವರ್ತಿಸುವ ಮೂಲಕ ಇಲ್ಲಿರುವ ಸಾವಿರಾರು ಬಡ ವಿದ್ಯಾರ್ಥಿಗಳನ್ನು ದುಬಾರಿ ಶುಲ್ಕದ ಕೂಪಕ್ಕೆ ತಳ್ಳುವುದು ಬೇಡ. ಈಗಿರುವ ವ್ಯವಸ್ಥೆಯನ್ನೇ ಮುಂದುವರಿಸಬೇಕು’ ಎಂದು ‘ಪ್ರಜಾವಾಣಿ’ ಯೊಂದಿಗೆ ಮಾತನಾಡಿದ ವಿದ್ಯಾರ್ಥಿಗಳಾದ ನಾಗರಾಜ್, ಮುನಿರಾಜು ಅವರು ಸರ್ಕಾರವನ್ನು ಒತ್ತಾಯಿಸಿದರು.
ಈಗಿರುವ ಶುಲ್ಕವೇ ಇದ್ದರೆ ಅನುಕೂಲವಾಗಲಿದೆ. ಇದರ ಸಾಧಕ–ಬಾಧಕಗಳ ಬಗ್ಗೆ ಅಧ್ಯಯನ ಮಾಡಬೇಕು. ಅಂತಿಮವಾಗಿ ಸರ್ಕಾರದ ನಿರ್ಧಾರಕ್ಕೆ ನಾವು ಬದ್ಧ.– ಪ್ರೊ.ನಾಗೇಂದ್ರ ಕುಮಾರ್, ಪ್ರಾಂಶುಪಾಲ, ಸರ್ಕಾರಿ ಕಲಾ ಕಾಲೇಜು
‘ಅನುದಾನ ಸ್ಥಗಿತವಾದರೆ, ಶುಲ್ಕ ಹೆಚ್ಚಳ ಅನಿವಾರ್ಯ’
ಎರಡೂ ಕಾಲೇಜುಗಳಿಗೆ ಈಗ ಸರ್ಕಾರದಿಂದ ಅನುದಾನ ಬರುತ್ತಿದೆ. ಘಟಕ ಕಾಲೇಜುಗಳಾಗಿ ಪರಿವರ್ತನೆ ಆದ ನಂತರ ಸರ್ಕಾರ ಅನುದಾನ ನೀಡುವುದಿಲ್ಲ. ಆಗ ಪೂರ್ಣ ಜವಾಬ್ದಾರಿ ನಗರ ವಿಶ್ವವಿದ್ಯಾಲಯದ ಮೇಲೆ ಬೀಳಲಿದೆ.
‘ಈಗಿರುವ ಶುಲ್ಕದಲ್ಲಿ ಮೂಲಸೌಕರ್ಯ ಕಲ್ಪಿಸಲು ಆಗುವುದಿಲ್ಲ. ಉತ್ತಮ ಸೌಲಭ್ಯಗಳು ಬೇಕು ಎನ್ನುವುದಾದರೆ ಶುಲ್ಕ ಹೆಚ್ಚಳ ಮಾಡುವುದು ಅನಿವಾರ್ಯವಾಗಲಿದೆ. ಈಗ ಬರುತ್ತಿರುವ ಅನುದಾನ ಸ್ಥಗಿತವಾದರೆ ಶುಲ್ಕ ಹೆಚ್ಚಳ ಅನಿವಾರ್ಯವಾಗಲಿದೆ. ಇದಕ್ಕೆ ಸಂಬಂಧಿಸಿದ ಹಾಗೆ ವಸ್ತುಸ್ಥಿತಿಯ ವರದಿಯನ್ನು ಸರ್ಕಾರಕ್ಕೆ ನೀಡಲಾಗಿದೆ’ ಎಂದು ವಿಶ್ವವಿದ್ಯಾಲಯದ ಮೂಲಗಳು ತಿಳಿಸಿವೆ.
ಆ ಎರಡೂ ಕಾಲೇಜುಗಳಲ್ಲಿ ಈಗಿರುವ ಹುದ್ದೆಗಳ ಸಮೇತ ಹಸ್ತಾಂತರ ಮಾಡಿದರೆ, ಸರ್ಕಾರವೇ ಸಂಬಳ ನೀಡಬೇಕಾಗುತ್ತದೆ. ಇತರೆ ವೆಚ್ಚಗಳು, ಮೂಲಸೌಕರ್ಯಗಳಿಗೆ ಸರ್ಕಾರ ಅನುದಾನ ನೀಡಿದರೆ ಪರವಾಗಿಲ್ಲ. ನೀಡದೆ ಇದ್ದರೆ ಅದರ ಹೊರೆಯನ್ನು ವಿಶ್ವವಿದ್ಯಾಲಯ ಹೊರಲು ಸಾಧ್ಯವಿಲ್ಲ. ಈಗ ಇರುವ ₹ 6 ಸಾವಿರ ಶುಲ್ಕದಲ್ಲಿ ಏನು ಮಾಡಲು ಸಾಧ್ಯ? ಈ ಎಲ್ಲ ಅಂಶಗಳನ್ನು ಸರ್ಕಾರದ ಗಮನಕ್ಕೆ ತರಲಾಗಿದೆ ಎಂದು ಅಧಿಕಾರಿಯೊಬ್ಬರು ವಿವರಿಸಿದರು.
ಯಾರಿಗೆ ಲಾಭ?
‘ಘಟಕ ಕಾಲೇಜುಗಳನ್ನಾಗಿ ಮಾಡುವುದರಿಂದ ವಿದ್ಯಾರ್ಥಿಗಳಿಗೆ ಯಾವುದೇ ಉಪಯೋಗ ಆಗುವುದಿಲ್ಲ. ಇಲ್ಲಿರುವ ಸಿಬ್ಬಂದಿ ಮತ್ತು ವಿಶ್ವವಿದ್ಯಾಲಯಕ್ಕೆ ಲಾಭ ಆಗುತ್ತದೆ ಅಷ್ಟೇ. ಸರ್ಕಾರ ನಮ್ಮ ಹಿತವನ್ನು ಪರಿಗಣಿಸಬೇಕೇ ಹೊರತು ಸಿಬ್ಬಂದಿಯ ಹಿತವನ್ನು ಅಲ್ಲ’ ಎಂಬುದು ವಿದ್ಯಾರ್ಥಿಗಳ ಆಗ್ರಹವಾಗಿದೆ.
‘ಘಟಕ ಕಾಲೇಜು ಆದರೆ ಸಿಬ್ಬಂದಿಯ ನಿವೃತ್ತಿ ವಯೋಮಿತಿ 60ರಿಂದ 62 ವರ್ಷಕ್ಕೆ ಏರಲಿದೆ. ವರ್ಗಾವಣೆ ಇರುವುದಿಲ್ಲ. ವಿಶ್ವವಿದ್ಯಾಲಯಕ್ಕೆ ಶುಲ್ಕದ ರೂಪದಲ್ಲಿ ಅಧಿಕ ಆದಾಯ ಬರಲಿದೆ. ಆದರೆ, ನಮಗೆ ದುಬಾರಿ ಶುಲ್ಕ ಭರಿಸಲು ಸಾಧ್ಯವಾಗುವುದಿಲ್ಲ. ಇದರ ಪರಿಣಾಮವಾಗಿ ಪದವಿ ಪಡೆಯುವ ಅವಕಾಶದಿಂದ ವಂಚಿತರಾಗಲಿದ್ದೇವೆ’ ಎಂದರು.
‘ನಿವೃತ್ತಿಯ ಅಂಚಿನಲ್ಲಿ ಇರುವವರು ಹಾಗೂ ಈ ಬಾರಿ ವರ್ಗಾವಣೆಯಾಗುವಆತಂಕದಲ್ಲಿ ಇರುವ ಬೆರಳೆಣಿಕೆಯಷ್ಟು ಬೋಧಕ ಸಿಬ್ಬಂದಿ ಪಿತೂರಿ ನಡೆಸಿ, ಘಟಕ ಕಾಲೇಜುಗಳನ್ನಾಗಿ ಮಾಡುವಂತೆ ಸರ್ಕಾರದ ಮೇಲೆ ಒತ್ತಡ ತರುತ್ತಿದ್ದಾರೆ. ಯಾವುದೇ ಕಾರಣಕ್ಕೂ ಇದನ್ನು ಒಪ್ಪಬಾರದು. ಈ ಪ್ರಸ್ತಾವವನ್ನು ಕೂಡಲೇ ತಿರಸ್ಕರಿಸಬೇಕು’ ಎಂದು ವಿದ್ಯಾರ್ಥಿಗಳು, ಪೋಷಕರು ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.