ಬೆಂಗಳೂರು: ಐದೂ ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಸ್ವಚ್ಛತಾ ಅಭಿಯಾನ ಹಾಗೂ ಪಾದಚಾರಿ ಮಾರ್ಗ ಒತ್ತುವರಿ ತೆರವು ಕಾರ್ಯಾಚರಣೆ ಶುಕ್ರವಾರ ನಡೆಯಿತು.
ಬೆಂಗಳೂರು ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯ ಚಿಕ್ಕಪೇಟೆ, ದೊಮ್ಮಲೂರು ಮೇಲ್ಸೇತುವೆ, ಚಾಮರಾಜಪೇಟೆ, ದೊಮ್ಮಲೂರು ಮೊದಲನೇ ಹಂತ, ಗಾಂಧಿನಗರ, ಮೆಜೆಸ್ಟಿಕ್ ಸುತ್ತಲಿನ ಪ್ರದೇಶ, ಇಂದಿರಾನಗರದ 80 ಅಡಿ ರಸ್ತೆ (ವಿವೇಕಾನಂದ ಮೆಟ್ರೊ ನಿಲ್ದಾಣದ ಕಡೆ) ಹಾಗೂ ವಸಂತನಗರ ಉಪ ವಿಭಾಗ ವ್ಯಾಪ್ತಿಯಲ್ಲಿ ಸ್ವಚ್ಛತಾ ಅಭಿಯಾನ ಕಾರ್ಯಾಚರಣೆ ನಡೆಯಿತು.
ಬೆಂಗಳೂರು ಪಶ್ಚಿಮ ನಗರ ಪಾಲಿಕೆ ವ್ಯಾಪ್ತಿಯ ಮೂಡಲ ಪಾಳ್ಯ, ಕಿತ್ತೂರು ರಾಣಿ ಚನ್ನಮ್ಮ ಉದ್ಯಾನ ಹತ್ತಿರ, ಹೇರೋಹಳ್ಳಿ ಉಪ ವಿಭಾಗದ ವ್ಯಾಪ್ತಿ, ಕಾವೇರಿಪುರ, ಕೊಮ್ಮಘಟ್ಟ ರಸ್ತೆ ಕಡೆ ಹಾಗೂ ಮಾರುತಿ ಮಂದಿರ ವಾರ್ಡ್ ವ್ಯಾಪ್ತಿಯಲ್ಲಿ ಸ್ವಚ್ಛತಾ ಅಭಿಯಾನ ಕಾರ್ಯಾಚರಣೆ ನಡೆಸಲಾಯಿತು. ನಿಷೇಧಿತ ಏಕಬಳಕೆ ಪ್ಲಾಸ್ಟಿಕ್ ತಪಾಸಣೆ ನಡೆಸಿ, ಎರಡು ಪ್ರಕರಣಗಳಲ್ಲಿ ₹80 ಸಾವಿರ ದಂಡ ವಸೂಲಿ ಮಾಡಿ, 650 ಕೆ.ಜಿ ಏಕಬಳಕೆ ಪ್ಲಾಸ್ಟಿಕ್ ವಶಕ್ಕೆ ಪಡೆಯಲಾಯಿತು.
ಬೆಂಗಳೂರು ಉತ್ತರ ನಗರ ಪಾಲಿಕೆ ವ್ಯಾಪ್ತಿಯ ಎಚ್‌ಬಿಆರ್ ಲೇಔಟ್ ಉಪ ವಿಭಾಗದಲ್ಲಿ ಅನಧಿಕೃತ ಜಾಹೀರಾತು ಫಲಕಗಳನ್ನು ತೆರವುಗೊಳಿಸಲಾಯಿತು. ವಾಣಿಜ್ಯ ಮಳಿಗೆಗಳಲ್ಲಿ ಅಧಿಕಾರಿಗಳು ಏಕಬಳಕೆ ಪ್ಲಾಸ್ಟಿಕ್ ತಪಾಸಣೆ ನಡೆಸಿ, ₹1 ಲಕ್ಷ ದಂಡ ವಸೂಲಿ ಮಾಡಿ 414 ಕೆ.ಜಿ ಏಕಬಳಕೆ ಪ್ಲಾಸ್ಟಿಕ್ ವಶಕ್ಕೆ ಪಡೆದು, ಇನ್ನು ಮುಂದೆ ಬಳಸದಂತೆ ಎಚ್ಚರಿಕೆ ನೀಡಿದರು.
ಬೆಂಗಳೂರು ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯ ಅವಲಹಳ್ಳಿ 80 ಅಡಿ ರಸ್ತೆಯ ಟಿಪ್ಪು ವೃತ್ತದಿಂದ ಅಂಜನಾಪುರದ 80 ಅಡಿ ರಸ್ತೆಯವರೆಗೆ, ಜಯನಗರದ 32ನೇ ಇ-ಅಡ್ಡರಸ್ತೆಯ 18ನೇ ಮುಖ್ಯರಸ್ತೆಯಿಂದ ಈಸ್ಟ್ ಎಂಡ್ ಮುಖ್ಯರಸ್ತೆಯವರೆಗೆ, ಪದ್ಮನಾಭನಗರದ ಪುಟ್ಟಲಿಂಗಯ್ಯ ರಸ್ತೆಯ ದೇವೇಗೌಡ ಪೆಟ್ರೋಲ್ ಬಂಕ್‌ನಿಂದ ಗೌಡನಪಾಳ್ಯದ ಶ್ರೀನಿವಾಸ ಟಾಕೀಸ್‌ವರೆಗೆ ಸಾಮೂಹಿಕ ಸ್ವಚ್ಛತಾ ಕಾರ್ಯಕ್ರಮ ನಡೆಸಲಾಯಿತು. ಅಧಿಕಾರಿಗಳ ತಂಡ ವಾಣಿಜ್ಯ ಮಳಿಗೆಗಳಿಗೆ ಭೇಟಿ ನೀಡಿ ನಿಷೇಧಿತ ಏಕಬಳಕೆ ಪ್ಲಾಸ್ಟಿಕ್ ತಪಾಸಣೆ ನಡೆಸಿ, 19 ಪ್ರಕರಣಗಳಲ್ಲಿ ₹1.40 ದಂಡ ವಸೂಲಿ ಮಾಡಿ, 120 ಕೆ.ಜಿ ಏಕಬಳಕೆ ಪ್ಲಾಸ್ಟಿಕ್ ವಶಕ್ಕೆ ಪಡೆದರು.
ರಸ್ತೆ ಗುಂಡಿ ಮುಚ್ಚಿ: ವೆಟ್ ಮಿಕ್ಸ್ ಮ್ಯಾಕಡಮ್ ಬಳಸಿ ರಸ್ತೆ ಗುಂಡಿ ಮುಚ್ಚುವಂತೆ ಬೆಂಗಳೂರು ಉತ್ತರ ನಗರ ಪಾಲಿಕೆ ಆಯುಕ್ತ ಪೊಮ್ಮಲ ಸುನಿಲ್ ಕುಮಾರ್ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಇಂದಿರಾ ಕ್ಯಾಂಟೀನ್‌ಗೆ ಭೇಟಿ ನೀಡಿ ಕಾಮಗಾರಿಗಳ ಸ್ಥಿತಿಯನ್ನು ಪರಿಶೀಲಿಸಿದ ಆಯುಕ್ತರು, ಪಾಲಿಕೆಯ ವ್ಯಾಪ್ತಿಯಲ್ಲಿರುವ ಎಲ್ಲಾ ಇಂದಿರಾ ಕ್ಯಾಂಟೀನ್‌ಗಳ ಸಂಪೂರ್ಣ ವರದಿ ನೀಡಲು ತಿಳಿಸಿದರು. ಕ್ಯಾಂಟೀನ್‌ನಲ್ಲಿ ಹಾಗೂ ಕ್ಯಾಂಟೀನ್ ಸುತ್ತ ಸ್ವಚ್ಛತೆ ಕಾಪಾಡಲು ಸಿಬ್ಬಂದಿಗೆ ನಿರ್ದೇಶನ ನೀಡಿದರು.
ಜಿಬಿಎ ವ್ಯಾಪ್ತಿಯಲ್ಲಿ ವೈಟ್ ಟಾಪಿಂಗ್ ಬ್ಲ್ಯಾಕ್ ಟಾಪಿಂಗ್ ಪ್ರಗತಿಯಲ್ಲಿರುವ ರಸ್ತೆಗಳಲ್ಲಿ ಗುತ್ತಿಗೆ ಪಡೆದಿರುವವರಿಂದಲೇ ದುರಸ್ತಿ ಕಾರ್ಯ ಕೈಗೊಳ್ಳಬೇಕೆಂದು ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. 400 ಕಿ.ಮೀ ಉದ್ದದ ರಸ್ತೆಯಲ್ಲಿ ಬ್ಲ್ಯಾಕ್ ಟಾಪಿಂಗ್ ಹಾಗೂ 150 ಕಿ.ಮೀ ಉದ್ದದ ರಸ್ತೆಯಲ್ಲಿ ವೈಟ್‌ಟಾಪಿಂಗ್ ಕಾಮಗಾರಿ ಕೈಗೆತ್ತಿಕೊಂಡಿದ್ದು ಆ ಎಲ್ಲಾ ರಸ್ತೆಗಳನ್ನು ಗುಂಡಿಗಳಿಲ್ಲದಂತೆ ನಿರ್ವಹಣೆ ಮಾಡಲು ಗುತ್ತಿಗೆದಾರರಿಗೆ ಜವಾಬ್ದಾರಿ ನೀಡಬೇಕು ಎಂದರು. ಸಂಚಾರ ಪೊಲೀಸ್ ವಿಭಾಗದಿಂದ ಹೊಸದಾಗಿ 4822 ರಸ್ತೆ ಗುಂಡಿಗಳನ್ನು ಗುರುತಿಸಲಾಗಿದ್ದು ಈ ಪೈಕಿ 1861 ರಸ್ತೆ ಗುಂಡಿಗಳನ್ನು ಮುಚ್ಚಲಾಗಿದೆ. ಬಾಕಿಯಿರುವ 2961 ರಸ್ತೆ ಗುಂಡಿಗಳನ್ನು ಮುಚ್ಚಬೇಕಿದ್ದು ಯಾವ ಯಾವ ಇಲಾಖೆಗಳಿಗೆ ಬರಲಿದೆ ಎಂಬುದನ್ನು ಪರಿಶೀಲಿಸಿ ಆ ಇಲಾಖೆಗಳ ಜೊತೆ ಸಮನ್ವಯ ಮಾಡಿಕೊಂಡು ಆಯಾ ನಗರ ಪಾಲಿಕೆಗಳಲ್ಲಿ ಕ್ರಮ ಕೈಗೊಳ್ಳಬೇಕು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.