ADVERTISEMENT

ಪ್ರಿಯಕರನ ವಿರುದ್ಧ ಸೇಡಿಗಾಗಿ ಬಾಂಬ್ ಬೆದರಿಕೆ; 7 ಶಾಲೆಗಳಿಗೆ ಸಂದೇಶ,ಯುವತಿಯ ಬಂಧನ

ನಗರದ ಏಳು ಶಾಲೆಗಳಿಗೆ ಸಂದೇಶ ಕಳುಹಿಸಿದ್ದ ಯುವತಿಯ ಬಂಧನ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2025, 0:30 IST
Last Updated 7 ನವೆಂಬರ್ 2025, 0:30 IST
ರೆನೆ ಜೋಶಿಲ್ದಾ
ರೆನೆ ಜೋಶಿಲ್ದಾ   

ಬೆಂಗಳೂರು: ಪ್ರಿಯಕರನ ವಿರುದ್ಧ ಸೇಡು ತೀರಿಸಿಕೊಳ್ಳಲು ನಗರದ ಏಳು ಶಾಲೆಗಳಿಗೆ ಇ–ಮೇಲ್‌ ಮೂಲಕ ಬಾಂಬ್‌ ಬೆದರಿಕೆ ಸಂದೇಶ ಕಳುಹಿಸಿದ್ದ ಯುವತಿಯನ್ನು ಉತ್ತರ ವಿಭಾಗದ ಸೈಬರ್ ಅಪರಾಧ ಠಾಣೆಯ ಪೊಲೀಸರು ಗುರುವಾರ ಬಂಧಿಸಿದ್ದಾರೆ.

ತಮಿಳುನಾಡಿನ ರೆನೆ ಜೋಶಿಲ್ದಾ(30) ಬಂಧಿತೆ.

ಆರೋಪಿಯ ವಿರುದ್ಧ ನಗರದ ವಿವಿಧ ಠಾಣೆಗಳಲ್ಲಿ 7 ಪ್ರಕರಣಗಳು ಹಾಗೂ ಗುಜರಾತ್, ತಮಿಳುನಾಡು, ಹರಿಯಾಣ, ಪಂಜಾಬ್ ಸೇರಿದಂತೆ ವಿವಿಧ ರಾಜ್ಯಗಳಲ್ಲಿ 40ಕ್ಕಿಂತ ಹೆಚ್ಚು ಪ್ರಕರಣಗಳು ದಾಖಲಾಗಿವೆ ಎಂಬುದು ತನಿಖೆಯಿಂದ ಗೊತ್ತಾಗಿದೆ.

ADVERTISEMENT

‘ಹುಸಿ ಬಾಂಬ್ ಸಂದೇಶ ಕಳುಹಿಸಿದ್ದ ಪ್ರಕರಣದಲ್ಲಿ ಕೆಲವು ತಿಂಗಳ ಹಿಂದೆ ಅಹಮದಾಬಾದ್ ಪೊಲೀಸರು ರೆಬೆ ಅವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ಗುಜರಾತ್​ನ ಅಹಮದಾಬಾದ್​​ನ ಕೇಂದ್ರ ಕಾರಾಗೃಹದಿಂದ ಬಾಡಿ ವಾರಂಟ್‌ ಮೇಲೆ ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಲಾಯಿತು. ವಿಚಾರಣೆ ವೇಳೆ ಪ್ರಿಯಕರನ ವಿರುದ್ಧ ಸೇಡು ತೀರಿಸಿಕೊಳ್ಳಲು ಕೃತ್ಯ ಎಸಗಿರುವುದಾಗಿ ಒಪ್ಪಿಕೊಂಡಿದ್ದಾರೆ’ ಎಂದು ಪೊಲೀಸರು ಹೇಳಿದರು.

ತಮಿಳುನಾಡು ಮೂಲದ ರೆನೆ ಅವರು ಎಲೆಕ್ಟ್ರಿಕಲ್‌ ವಿಷಯದಲ್ಲಿ ಬಿ.ಇ ಪದವಿ ಪಡೆದಿದ್ದು, ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಜೂನ್ 14ರಂದು ಕಲಾಸಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಖಾಸಗಿ ಶಾಲೆಯೊಂದಕ್ಕೆ ಬಾಂಬ್ ಬೆದರಿಕೆಯ ಇ–ಮೇಲ್ ಸಂದೇಶ ಬಂದಿತ್ತು. ಅದಾದ ಮೇಲೂ ಉತ್ತರ ವಿಭಾಗದ ವಿವಿಧ ಆರು ಶಾಲೆಗಳಿಗೆ ಹುಸಿ ಬಾಂಬ್ ಸಂದೇಶಗಳು ಬಂದಿದ್ದವು. ಇದರಿಂದ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ಮಾಹಿತಿ ತಿಳಿದು ಸ್ಥಳಕ್ಕೆ ತೆರಳಿದ್ದ ಬಾಂಬ್ ನಿಷ್ಕ್ರಿಯ ದಳ ಹಾಗೂ ಬಾಂಬ್‌ ಪತ್ತೆದಳ ಸಿಬ್ಬಂದಿ ಪರಿಶೀಲನೆ ನಡೆಸಿದ್ದರು. ಶಾಲಾ ಆವರಣದಲ್ಲಿ ಪರಿಶೀಲನೆ ನಡೆಸಿದ್ದರು. ಯಾವುದೇ ಸ್ಫೋಟಕ ವಸ್ತುಗಳು ಪತ್ತೆ ಆಗಿರಲಿಲ್ಲ. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ಆರಂಭಿಸಿದ್ದರು. ಕೆಲವು ತಾಂತ್ರಿಕ ಸಾಕ್ಷ್ಯಾಧಾರ ಆಧರಿಸಿ ತನಿಖೆ ನಡೆಸಿದಾಗ ಆರೋಪಿಯ ಸುಳಿವು ಲಭಿಸಿತ್ತು ಎಂದು ಮೂಲಗಳು ಹೇಳಿವೆ.

ಪ್ರಿಯಕರನನ್ನು ಸಿಲುಕಿಸಲು ಪ್ರಯತ್ನ:

‘ರೆನೆ ಅವರು ಬೆಂಗಳೂರು ಮೂಲದ ಯುವಕನನ್ನು ಪ್ರೀತಿಸಿದ್ದರು. ರೆನೆ ಪ್ರೀತಿಯನ್ನು ಯುವಕ ನಿರಾಕರಿಸಿದ್ದರು. ಕಳೆದ ಫೆಬ್ರುವರಿಯಲ್ಲಿ ಬೇರೆ ಯುವತಿಯ ಜತೆಗೆ ಮದುವೆ ಮಾಡಿಕೊಂಡಿದ್ದರು. ಈ ಬೆಳವಣಿಗೆಯಿಂದ ಅಸಮಾಧಾನಗೊಂಡಿದ್ದ ಆರೋಪಿ, ಪ್ರಿಯಕರನ ವ್ಯಕ್ತಿತ್ವಕ್ಕೆ ಮಸಿ ಬಳಿಯಲು ಯೋಜಿಸಿದ್ದರು. ಯಾವುದಾದರೂ ಪ್ರಕರಣದಲ್ಲಿ ಸಿಲುಕಿಸಲು ಸಂಚು ರೂಪಿಸಿದ್ದರು’ ಎಂದು ಮೂಲಗಳು ಹೇಳಿವೆ.

ಜ್ಯೋತಿಷಿ ಹೇಳಿದಂತೆ ಆರೋಪಿ ಕೃತ್ಯ: ‘ಪತ್ನಿಯಿಂದ ಪ್ರಿಯಕರನನ್ನು ದೂರ ಮಾಡಿದರೆ ಮತ್ತೆ ನಿಮ್ಮನ್ನು ಪ್ರೀತಿಸುತ್ತಾನೆ ಎಂದು ಜ್ಯೋತಿಷಿಯೊಬ್ಬರು ಹೇಳಿದ್ದರು. ಬಳಿಕ ಪ್ರಿಯತಮನ ಹೆಸರಿನಲ್ಲಿ ಇ–ಮೇಲ್ ಖಾತೆ ಸೃಷ್ಟಿಸಿ, ದೇಶದೆಲ್ಲೆಡೆ ಹುಸಿ ಬಾಂಬ್ ಸಂದೇಶ ಕಳುಹಿಸುತ್ತಿದ್ದರು. ಶಾಲೆಯನ್ನು ಉಡಾಯಿಸುವುದಾಗಿ ಸಂದೇಶದಲ್ಲಿ ಉಲ್ಲೇಖಿಸುತ್ತಿದ್ದರು‘ ಎಂದು ಪೊಲೀಸರು ಹೇಳಿದರು.

ಆರೋಪಿ ವೈಯಕ್ತಿಕ ಕಾರಣಕ್ಕೆ ಈ ರೀತಿಯ ಕೃತ್ಯ ಎಸಗಿರುವುದು ತನಿಖೆಯಿಂದ ಗೊತ್ತಾಗಿದೆ. ನಗರದಲ್ಲಿ ದಾಖಲಾದ ಪ್ರಕರಣಗಳಲ್ಲಿ ರೆನೆ ಜೋಶಿಲ್ದಾ ಅವರು ಏಳು ಪ್ರಕರಣದಲ್ಲಿ ಭಾಗಿ ಆಗಿರುವುದು ಪತ್ತೆಯಾಗಿದೆ.
ಸೀಮಾಂತ್‌ಕುಮಾರ್ ಸಿಂಗ್‌ ನಗರ ಪೊಲೀಸ್ ಕಮಿಷನರ್‌

ವಿಶೇಷ ತಂಡದಿಂದ ತನಿಖೆ

ನಗರ ಪೊಲೀಸ್ ಕಮಿಷನರ್‌ ಸೀಮಾಂತ್‌ಕುಮಾರ್ ಸಿಂಗ್ ಅವರು ಉತ್ತರ ವಿಭಾಗದ ಸೈಬರ್ ಠಾಣೆಗೆ ವರ್ಗಾಯಿಸಿದ್ದರು. ಉತ್ತರ ವಿಭಾಗದ ಡಿಸಿಪಿ ನೇಮಗೌಡ ಅವರ ಮಾರ್ಗದರ್ಶನದಲ್ಲಿ ತನಿಖಾಧಿಕಾರಿಯಾಗಿ ಎಸಿಪಿ ಪವನ್ ಅವರನ್ನು ನೇಮಿಸಲಾಗಿತ್ತು. ಇನ್‌ಸ್ಪೆಕ್ಟರ್‌ ಮಂಜು ನೇತೃತ್ವದ ತಂಡವು ತಾಂತ್ರಿಕ ಆಯಾಮದಲ್ಲಿ ತನಿಖೆ ನಡೆಸಿ ಆರೋಪಿಯನ್ನು ಪತ್ತೆಹಚ್ಚಿದೆ.

11 ರಾಜ್ಯಗಳ ಶಾಲಾ ಕಾಲೇಜುಗಳಿಗೆ ಸಂದೇಶ

ಯುವತಿ ಬಿ.ಇ ಪದವಿ ಪಡೆದಿದ್ದರಿಂದ ತಾಂತ್ರಿಕ ಪರಿಣತಿ ಇತ್ತು. ವಿಪಿಎನ್ ಮೂಲಕ ಲಾಗಿನ್ ಆಗಿ ಗೇಟ್ ಕೋಡ್ ಅಪ್ಲಿಕೇಶನ್ ಮೂಲಕ ವರ್ಚುವಲ್ ಮೊಬೈಲ್ ನಂಬರ್ ಪಡೆದುಕೊಳ್ಳುತ್ತಿದ್ದರು. 6ರಿಂದ 7 ವಾಟ್ಸ್​​​ಆ್ಯಪ್ ಖಾತೆಗಳನ್ನು ನಿರ್ವಹಣೆ ಮಾಡುತ್ತಿದ್ದ ಯುವತಿ ಕರ್ನಾಟಕ ಸೇರಿದಂತೆ ದೇಶದ 11 ರಾಜ್ಯಗಳ ಶಾಲಾ–ಕಾಲೇಜುಗಳಿಗೆ ಪ್ರಿಯಕರನ ಹೆಸರಿನಲ್ಲಿ ಹುಸಿ ಬಾಂಬ್ ಸಂದೇಶ ಕಳುಹಿಸುತ್ತಿದ್ದರು ಎಂಬುದು ತನಿಖೆಯಿಂದ ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.