ಹೊಯ್ಸಳ
– ಪ್ರಜಾವಾಣಿ ಚಿತ್ರ
ಬೆಂಗಳೂರು: ನಗರದ ರಸ್ತೆಗಳಲ್ಲಿ ನಡೆಯುತ್ತಿದ್ದ ಅಪರಾಧ ಪ್ರಕರಣಗಳು ಹಿಂದಿನ ಎರಡು ವರ್ಷಕ್ಕೆ ಹೋಲಿಸಿದರೆ, 2025ರಲ್ಲಿ ಕಡಿಮೆ ಆಗಿರುವುದು ಕಂಡುಬಂದಿದೆ.
2023 ಹಾಗೂ 2024ಕ್ಕೆ ಹೋಲಿಸಿದರೆ, ಕಳೆದ ವರ್ಷ (2025) ದರೋಡೆ ಪ್ರಕರಣಗಳಲ್ಲಿ ಶೇ 47, ಚಿನ್ನದ ಸರ ಕಳ್ಳತನ ಶೇ 53, ಸುಲಿಗೆ ಶೇ 21 ಹಾಗೂ ವಾಹನ ಕಳ್ಳತನ ಪ್ರಕರಣಗಳು ಶೇ 19ರಷ್ಟು ಇಳಿಕೆಯಾಗಿವೆ. ರಸ್ತೆಯಲ್ಲಿ ನಡೆಯುವ ಅಪರಾಧ ಪ್ರಕರಣಗಳು ಇಳಿಕೆ ಆಗಿರುವುದು ಪೊಲೀಸ್ ಇಲಾಖೆಯ ಅಂಕಿಅಂಶದಿಂದ ಗೊತ್ತಾಗಿದೆ.
‘ರಸ್ತೆಯಲ್ಲಿ ನಡೆಯುವ ಅಪರಾಧ ಪ್ರಕರಣಗಳನ್ನು ಕಡಿಮೆಗೊಳಿಸಿ, ಸುರಕ್ಷಿತ ನಗರವಾಗಿ ರೂಪಿಸಲು ಪ್ರಯತ್ನಿಸಲಾಗುತ್ತಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು. ನಗರದಲ್ಲಿ 2023ರಲ್ಲಿ 217, 2024ರಲ್ಲಿ 185 ಹಾಗೂ 2025ರಲ್ಲಿ 191 ಕೊಲೆಗಳು ನಡೆದಿವೆ.
‘ಕಳೆದ ಮೂರು ವರ್ಷಗಳಲ್ಲಿ ನಗರದ ರಸ್ತೆಗಳಲ್ಲಿ ನಡೆದಿದ್ದ ಅಪರಾಧ ಪ್ರಕರಣಗಳನ್ನು ವಿಶ್ಲೇಷಿಸಲಾಗಿದೆ. ಇದರಿಂದ ದರೋಡೆ, ಸುಲಿಗೆ, ವಾಹನ ಕಳ್ಳತನ ಪ್ರಕರಣಗಳು ಇಳಿಕೆ ಆಗಿರುವುದು ಕಂಡುಬಂದಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ, ಹೊಯ್ಸಳ ಗಸ್ತು ವ್ಯವಸ್ಥೆ ಹೆಚ್ಚಿಸಲಾಗಿದೆ. ಹೆಚ್ಚಿನ ಅಪರಾಧ ಕೃತ್ಯಗಳು ನಡೆಯುವ ಸ್ಥಳ ಹಾಗೂ ರಸ್ತೆಗಳಲ್ಲಿ ಹೊಯ್ಸಳ ಗಸ್ತು ಸಿಬ್ಬಂದಿ ನಿಯೋಜನೆ ಮಾಡಲಾಗುತ್ತಿದೆ. ಇದರಿಂದ ರಸ್ತೆಯಲ್ಲಿ ನಡೆಯುತ್ತಿದ್ದ ಅಪರಾಧ ಪ್ರಕರಣಗಳು ಇಳಿಕೆಯಾಗಿವೆ’ ಎಂದು ಪೊಲೀಸರು ಹೇಳುತ್ತಾರೆ.
ನಗರದಲ್ಲಿ ಸಿ.ಸಿ.ಟಿ.ವಿ ಕ್ಯಾಮೆರಾಗಳ ಸಂಖ್ಯೆ ಹೆಚ್ಚಿಸಿರುವುದು ಹಾಗೂ ಕ್ಯಾಮೆರಾಗಳಿಗೆ ಜಿಯೊಟ್ಯಾಗ್ ಅಳವಡಿಕೆಯು ಅಪರಾಧಗಳನ್ನು ತಡೆಯುವಲ್ಲಿ ಪರಿಣಾಮಕಾರಿ ಪಾತ್ರವಹಿಸಿದೆ ಎಂದು ತಿಳಿಸಿದ್ದಾರೆ.
‘ನಗರದಲ್ಲಿ 2,32,711 ಸಿ.ಸಿ.ಟಿ.ವಿ ಕ್ಯಾಮೆರಾಗಳು ಇದ್ದವು. 2024ರ ಜೂನ್ 20ರ ವೇಳೆಗೆ ಒಟ್ಟು 5.35 ಲಕ್ಷ ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಸಲಾಗಿತ್ತು. ಎಲ್ಲಾ ಕ್ಯಾಮೆರಾಗಳಿಗೂ ಜಿಯೊ ಟ್ಯಾಗ್ ವ್ಯವಸ್ಥೆ ಮಾಡಲಾಗಿದೆ’ ಎಂದು ಮೂಲಗಳು ಹೇಳಿವೆ.
‘ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನು ನಿರಂತರವಾಗಿ ಅಳವಡಿಸುವ ಮೂಲಕ ಅಪರಾಧ ಪ್ರಕರಣ ತಡೆಗಟ್ಟಲು ಕ್ರಮ ವಹಿಸಲಾಗುತ್ತಿದೆ. ಈ ಕ್ಯಾಮೆರಾಗಳಲ್ಲಿ ಸೆರೆಯಾದ ದೃಶ್ಯಾವಳಿಗಳ ಆಧಾರದಲ್ಲಿ ಆರೋಪಿಗಳನ್ನು ಪತ್ತೆ ಹಚ್ಚಲಾಗುತ್ತಿದೆ’ ಎಂದು ಪೊಲೀಸರು ಹೇಳಿದರು.
‘ಸಿವಿಲ್ ವ್ಯಾಜ್ಯ, ವೈಯಕ್ತಿಕ ಕಾರಣ, ಕೌಟುಂಬಿಕ ಕಲಹದಂತಹ ಸಂದರ್ಭದಲ್ಲಿ ಆಗಾಗ್ಗೆ ಕೊಲೆಗಳು ನಡೆದಿವೆ. ಕಳೆದ ನಾಲ್ಕು ವರ್ಷದಲ್ಲಿ ನಡೆದಿರುವ ಕೊಲೆಗಳ ಸಂಖ್ಯೆ 200ರ ಆಸುಪಾಸಿನಲ್ಲೇ ಇದೆ. ಈ ಅವಧಿಯಲ್ಲಿ ನಗರದ ಜನಸಂಖ್ಯೆ ಹೆಚ್ಚಿದ್ದರೂ ಕೊಲೆಯಂತಹ ಕೃತ್ಯಗಳು ಹೆಚ್ಚು ನಡೆದಿಲ್ಲ’ ಎಂದು ಅಧಿಕಾರಿ ಹೇಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.