ಬೆಂಗಳೂರು: ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಕಾರ್ಯಾಚರಣೆ ನಡೆಸಿದ ಕೋರಮಂಗಲ ಹಾಗೂ ಯಲಹಂಕ ಉಪನಗರ ಠಾಣೆಯ ಪೊಲೀಸರು, ಇಬ್ಬರು ವಿದೇಶಿಯರೂ ಸೇರಿ ಮೂವರು ಡ್ರಗ್ಸ್ ಪೆಡ್ಲರ್‌ಗಳನ್ನು ಬಂಧಿಸಿದ್ದಾರೆ.
ಬಂಧಿತರಿಂದ ₹1.70 ಕೋಟಿ ಮೌಲ್ಯದ ವಿವಿಧ ಮಾದರಿಯ ಮಾದಕ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.
ಯಲಹಂಕ ಉಪನಗರ ಠಾಣೆಯ ಪೊಲೀಸರು ಕಾರ್ಯಾಚರಣೆ ನಡೆಸಿ ಘಾನಾ ದೇಶದ ಬ್ರೈಟ್ (45) ಹಾಗೂ ಕೋಫಿ (44) ಎಂಬುವವರನ್ನು ಬಂಧಿಸಿದ್ದಾರೆ.
ಬಂಧಿತರಿಂದ ₹70 ಲಕ್ಷ ಮೌಲ್ಯದ ಎಂಡಿಎಂಎ ವಶಕ್ಕೆ ಪಡೆದಿದ್ದಾರೆ. ವಿದೇಶದಿಂದ ಬಂದಿದ್ದ ಇಬ್ಬರು ದೊಡ್ಡಬೆಟ್ಟದಹಳ್ಳಿಯ ಮೂರನೇ ಕ್ರಾಸ್‌ನ ಮನೆಯೊಂದರಲ್ಲಿ ಮಾದಕ ವಸ್ತುಗಳನ್ನು ಸಂಗ್ರಹಿಸಿಕೊಂಡು ಮಾರಾಟ ಮಾಡುತ್ತಿರುವ ಕುರಿತು ದೂರು ಬಂದಿತ್ತು. ಇದನ್ನು ಆಧರಿಸಿ ಮನೆಯ ಮೇಲೆ ದಾಳಿ ನಡೆಸಿದಾಗ ಎಂಡಿಎಂಎ ಸಂಗ್ರಹ ಮಾಡಿಕೊಂಡಿದ್ದು ಪತ್ತೆಯಾಗಿತ್ತು ಎಂದು ಪೊಲೀಸರು ಹೇಳಿದರು.
‘ಅನಾರೋಗ್ಯದಿಂದ ಬಳಲುತ್ತಿದ್ದ ಇಬ್ಬರು, 2023ರಲ್ಲಿ ಚಿಕಿತ್ಸೆಗೆಂದು ಬೆಂಗಳೂರಿಗೆ ಬಂದಿದ್ದರು. ಬಂದವರು ದೊಡ್ಡಬೆಟ್ಟಹಳ್ಳಿಯಲ್ಲಿ ಬಾಡಿಗೆ ಮನೆ ಪಡೆದು ನೆಲಸಿದ್ದರು. ಹೆಚ್ಚಿನ ಹಣ ಗಳಿಸುವ, ಮೋಜಿನ ಜೀವನ ನಡೆಸುವ ಉದ್ದೇಶದಿಂದ ಮತ್ತಿಕೆರೆ ಜೆ.ಪಿ. ಪಾರ್ಕ್ ಬಳಿ ಅಪರಿಚಿತರಿಂದ ಕಡಿಮೆ ಬೆಲೆಗೆ ಮಾದಕ ವಸ್ತುಗಳನ್ನು ಖರೀದಿಸಿ ಹೆಚ್ಚಿನ ಬೆಲೆಗೆ ಸಾರ್ವಜನಿಕರು, ವಿದ್ಯಾರ್ಥಿಗಳು ಹಾಗೂ ಪಿ.ಜಿಯಲ್ಲಿ ನೆಲಸಿದ್ದವರಿಗೆ ಮಾರಾಟ ಮಾಡುತ್ತಿದ್ದರು’ ಎಂದು ಪೊಲೀಸರು ಹೇಳಿದರು.
ಕೋರಮಂಗಲ ಠಾಣೆಯ ಪೊಲೀಸರು ಕಾರ್ಯಾಚರಣೆ ನಡೆಸಿ ಹೈಡ್ರೊ ಗಾಂಜಾ ಮಾರಾಟ ಮಾಡುತ್ತಿದ್ದ ಹವ್ಯಾಸಿ ಬರಹಗಾರ, ಕೇರಳದ ಆಂಥೋನಿ ಮ್ಯಾಥ್ಯುನನ್ನು ಬಂಧಿಸಿದ್ದಾರೆ. ಆರೋಪಿಯಿಂದ ₹1 ಕೋಟಿ ಮೌಲ್ಯದ ಹೈಡ್ರೊ ಗಾಂಜಾವನ್ನು ಜಪ್ತಿ ಮಾಡಿಕೊಂಡಿದ್ದಾರೆ.
ಠಾಣಾ ವ್ಯಾಪ್ತಿಯ ಎನ್.ಜಿ.ವಿ ಗೇಟ್ ಬಳಿ ಆರೋಪಿ ಹೈಡ್ರೊ ಗಾಂಜಾ ಮಾರಾಟ ಮಾಡುತ್ತಿದ್ದ. ಬಾತ್ಮೀದಾರರು ನೀಡಿದ ಮಾಹಿತಿ ಆಧರಿಸಿ ಆರೋಪಿಯನ್ನು ಬಂಧಿಸಲಾಯಿತು ಎಂದು ಪೊಲೀಸರು ಹೇಳಿದರು.
ಕೇರಳದಿಂದ ಕೆಲಸ ಹುಡುಕಿಕೊಂಡು ಆರೋಪಿ ನಗರಕ್ಕೆ ಬಂದಿದ್ದ. ಹೆಚ್ಚಿನ ಹಣ ಸಂಪಾದನೆ ಮಾಡುವ ಉದ್ದೇಶದಿಂದ ಕೇರಳದಿಂದ ಹೈಡ್ರೊ ಗಾಂಜಾ ತರಿಸಿಕೊಂಡು ನಗರದಲ್ಲಿ ಮಾರಾಟ ಮಾಡುತ್ತಿದ್ದ ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.