ಬೆಂಗಳೂರು: ನಗರದ ಎಂಪೈರ್ ರೆಸ್ಟೋರೆಂಟ್‌ನ ಚಿಕನ್ ಕಬಾಬ್ ಅಸುರಕ್ಷಿತ ಎನ್ನುವುದು ಆಹಾರ ಪ್ರಯೋಗಾಲಯದ ಪರೀಕ್ಷೆಯಿಂದ ದೃಢಪಟ್ಟಿದ್ದು, ಈ ಬಗ್ಗೆ ಉತ್ತರ ನೀಡುವಂತೆ ರೆಸ್ಟೋರೆಂಟ್‌ಗೆ ಬಿಬಿಎಂಪಿ ಉತ್ತರ ವಲಯ ಆಹಾರ ಸುರಕ್ಷತಾಧಿಕಾರಿ ನೋಟಿಸ್ ನೀಡಿದ್ದಾರೆ.
ಚಿಕನ್ ಕಬಾಬ್‌ಗೆ ನಿಷೇಧಿತ ಕೃತಕ ಬಣ್ಣಗಳನ್ನು ಬಳಸಿರುವುದು ಪ್ರಯೋಗಾಲಯದ ವಿಶ್ಲೇಷಣೆಯಿಂದ ಖಚಿತಪಟ್ಟಿದೆ. ಜೂನ್ 27ರಂದು ಈ ರೆಸ್ಟೋರೆಂಟ್‌ಗೆ ಭೇಟಿ ನೀಡಿದ್ದ ಆಹಾರ ಸುರಕ್ಷತಾಧಿಕಾರಿ, ಮಾರಾಟಕ್ಕೆ ಇಟ್ಟಿದ್ದ ಚಿಕನ್ ಕಬಾಬ್ ಮಾದರಿಗಳನ್ನು ಪರೀಕ್ಷೆಗೆ ಸಂಗ್ರಹಿಸಿದ್ದರು. 2 ಕೆ.ಜಿ. ತೂಕದ 4 ಪ್ಯಾಕೇಟ್‌ಗಳನ್ನು ಪಡೆದಿದ್ದ ಅವರು, ರಾಜ್ಯ ಆಹಾರ ಪ್ರಯೋಗಾಲಯಕ್ಕೆ ಸಲ್ಲಿಸಿದ್ದರು. ಈ ಬಗ್ಗೆ ಆಹಾರ ವಿಶ್ಲೇಷಕರು ಜುಲೈ 11ಕ್ಕೆ ವರದಿ ನೀಡಿದ್ದು, ಈ ಚಿಕನ್ ಕಬಾಬ್ ಮಾದರಿಗಳು ಅಸುರಕ್ಷಿತ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಈ ವರದಿ ಆಧರಿಸಿ, ಬಿಬಿಎಂಪಿ ಉತ್ತರ ವಲಯ ಆಹಾರ ಸುರಕ್ಷತಾಧಿಕಾರಿ ರೆಸ್ಟೋರೆಂಟ್‌ಗೆ ನೋಟಿಸ್ ನೀಡಿದ್ದಾರೆ. ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ–2006 ಅನ್ವಯ, ಮೈಸೂರಿನಲ್ಲಿರುವ ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾಲಯದ (ಸಿಎಫ್‌ಟಿಆರ್‌ಐ) ಪ್ರಯೋಗಾಲಯದಲ್ಲಿ ಈ ಮಾದರಿಗಳ ಮರು ಪರೀಕ್ಷೆಗೆ ಇಚ್ಛಿಸಿದಲ್ಲಿ ಅದರ ವೆಚ್ಚವನ್ನು ತಾವೇ ಭರಿಸಬೇಕು. 30 ದಿನಗಳೊಳಗೆ ಉತ್ತರ ನೀಡದಿದ್ದಲ್ಲಿ ಭಾರತೀಯ ಆಹಾರ ಸುರಕ್ಷೆ ಮತ್ತು ಗುಣಮಟ್ಟ ಪ್ರಾಧಿಕಾರದ (ಎಫ್‌ಎಸ್‌ಎಸ್‌ಎ) ಕಾನೂನು ರೀತಿ ಕ್ರಮ ಜರುಗಿಸಲಾಗುವುದು ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.