
ಎಐ ಚಿತ್ರ (ಸಾಂದರ್ಭಿಕ ಚಿತ್ರ)
ಬೆಂಗಳೂರು: ಹಬ್ಬದ ದಿವಸ ಮನೆಯಲ್ಲಿ ಮಾಂಸಾಹಾರ ಸೇವಿಸಿದ್ದನ್ನು ಪ್ರಶ್ನಿಸಿದ್ದಕ್ಕೆ ಸ್ನೇಹಿತನನ್ನು ಕೊಲೆ ಮಾಡಿರುವ ಘಟನೆ ಚಿಕ್ಕಜಾಲದ ನವರತ್ನ ಅಗ್ರಹಾರದಲ್ಲಿ ಸೋಮವಾರ ತಡರಾತ್ರಿ ನಡೆದಿದೆ.
ಬಿಹಾರದ ಶಂಭು ತಂತಿ(29) ಕೊಲೆಯಾದವರು.
ಕೃತ್ಯ ಎಸಗಿದ ಆರೋಪದ ಅಡಿ ಅಸ್ಸಾಂನ ರಾಜೇಶ್ ಎಂಬಾತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.
ಮೂರು ವರ್ಷಗಳ ಹಿಂದೆ ಕೂಲಿ ಕಾರ್ಮಿಕರಾಗಿ ಶಂಭುತಂತಿ ಹಾಗೂ ರಾಜೇಶ್ ನಗರಕ್ಕೆ ಬಂದಿದ್ದರು. ಚಿಕ್ಕಜಾಲದ ನವರತ್ನ ಅಗ್ರಹಾರದ ಲೆಬರ್ ಶೆಡ್‌ನಲ್ಲಿ ಇಬ್ಬರೂ ವಾಸವಾಗಿದ್ದರು. ನಿರ್ಮಾಣ ಹಂತದ ಕಟ್ಟಡದಲ್ಲಿ ಕೆಲಸ ಮಾಡಿಕೊಂಡಿದ್ದರು. ದೀಪಾವಳಿ ಸಂದರ್ಭದಲ್ಲಿ ಉತ್ತರ ಭಾರತದಲ್ಲಿ ಛತ್ ಪೂಜಾ ಹಬ್ಬ ಇರುತ್ತದೆ. ಹಬ್ಬದ ಹಿನ್ನೆಲೆಯಲ್ಲಿ ಶಂಭು ಕೂಡ ಎರಡು ದಿನದಿಂದ ಮನೆಯಲ್ಲಿ ವಿಶೇಷ ಪೂಜೆ ಮಾಡುತ್ತಿದ್ದರು. ಸೋಮವಾರ ಹಬ್ಬದ ಪ್ರಮುಖ ದಿನವಾಗಿತ್ತು. ಆರೋಪಿ ರಾಜೇಶ್ ಹೋಟೆಲ್‌ನಿಂದ ಮಾಂಸಾಹಾರ ತಂದು ಮನೆಯಲ್ಲೇ ಸೇವಿಸಿದ್ದ. ಈ ವಿಚಾರ ತಿಳಿದು ಶಂಭು ಅವರು ರಾಜೇಶ್‌ನನ್ನು ಪ್ರಶ್ನಿಸಿದ್ದರು. ಆಗ ಇಬ್ಬರ ನಡುವೆ ವಾಗ್ವಾದ ನಡೆದಿತ್ತು. ಗಲಾಟೆಯು ವಿಕೋಪಕ್ಕೆ ಹೋಗಿ ಮನೆಯಲ್ಲಿದ್ದ ಕಬ್ಬಿಣದ ರಾಡ್ ತೆಗೆದುಕೊಂಡು ಶಂಭು ಅವರ ಮೇಲೆ ಆರೋಪಿ ಹಲ್ಲೆ ನಡೆಸಿ ಪರಾರಿಯಾಗಿದ್ದ. ತೀವ್ರವಾಗಿ ಗಾಯಗೊಂಡಿದ್ದ ಶಂಭು ಅವರು ಮೃತಪಟ್ಟಿದ್ದರು.
ಕೊಲೆ ಪ್ರಕರಣ ದಾಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.