ಬೆಂಗಳೂರು: ಮುರಿದ ಬೆಂಚಿನ ಮೇಲೆಯೇ ಕುಳಿತು ಬಿಸಿಲು ಕಾಯಿಸುವ ರೋಗಿಗಳು, ಮಂಡಿ ನೋವಿನ ನಡುವೆಯೂ ಏದುಸಿರು ಬಿಡುತ್ತಾ ಮೆಟ್ಟಿಲುಗಳನ್ನು ಹತ್ತುವ ವೃದ್ಧರು, ಮಳೆ ಬಂದಾಗ ಸೋರುವ ಚಾವಣಿ...
ಇದು ಧನ್ವಂತರಿ ರಸ್ತೆಯಲ್ಲಿರುವ ಸರ್ಕಾರಿ ಆಯುರ್ವೇದ ಆಸ್ಪತ್ರೆಯ ಸ್ಥಿತಿ. 1948ರಲ್ಲಿ ಕಾರ್ಯಾರಂಭಿಸಿದ ಈ ಆಸ್ಪತ್ರೆಯು ಮೂಲಸೌಕರ್ಯಗಳ ಕೊರತೆ ನಡುವೆ ಚಿಕಿತ್ಸೆ ಒದಗಿಸುತ್ತಿದೆ. ಆಸ್ಪತ್ರೆಯ ಕಲ್ಲಿನ ಕಟ್ಟಡವು ಶಿಥಿಲಗೊಂಡಿದ್ದು, ಮಳೆ ಬಂದಾಗ ಚಾವಣಿ ಸೋರುತ್ತದೆ. ಇದರಿಂದಾಗಿ ರೋಗಿಗಳು ಹಾಗೂ ಅವರ ಸಹಾಯಕರು ಪರದಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಈ ಆಸ್ಪತ್ರೆಯು 200 ಹಾಸಿಗೆಗಳನ್ನು ಒಳಗೊಂಡಿದ್ದು, ಬಹುತೇಕ ಎಲ್ಲ ಹಾಸಿಗೆಗಳು ಭರ್ತಿಯಾಗಿವೆ. ಆದರೆ, ಸುಸಜ್ಜಿತ ವಾರ್ಡ್‌ಗಳಿರದ ಪರಿಣಾಮ ರೋಗಿಗಳು ಪ್ರತಿನಿತ್ಯ ಸಮಸ್ಯೆ ಎದುರಿಸುತ್ತಿದ್ದಾರೆ.
ಈ ಕಟ್ಟಡಕ್ಕೆ ಲಿಫ್ಟ್ ವ್ಯವಸ್ಥೆ ಕಲ್ಪಿಸಿಲ್ಲ. ಇದರಿಂದ ರೋಗಿಗಳು ಮೆಟ್ಟಿಲುಗಳನ್ನು ಹತ್ತಿಯೇ ಸಾಗಬೇಕಾದ ಸ್ಥಿತಿಯಿದೆ. ವಯಸ್ಸಾದವರೇ ಹೆಚ್ಚಾಗಿ ಇಲ್ಲಿ ಬರುವುದರಿಂದ ಮೊದಲ ಮಹಡಿಯ ವಾರ್ಡ್‌ಗಳಿಗೆ ತೆರಳಲು ಪರದಾಟ ನಡೆಸುವುದು ಸಾಮಾನ್ಯವಾಗಿದೆ. ಸಹಾಯಕರು ಕೂಡ ಸಮಸ್ಯೆ ಎದುರಿಸುತ್ತಿದ್ದಾರೆ. ಆಸ್ಪತ್ರೆಯ ಹೊರರೋಗಿ ವಿಭಾಗಕ್ಕೆ ಪ್ರತಿನಿತ್ಯ ಸರಾಸರಿ 600 ಮಂದಿ ಭೇಟಿ ನೀಡುತ್ತಿದ್ದು, ಟೋಕನ್ ವ್ಯವಸ್ಥೆ ಇಲ್ಲವಾದ್ದರಿಂದ ರೋಗಿಗಳು ತಮ್ಮ ಪಾಳಿಗೆ ಸರದಿಯಲ್ಲಿ ನಿಲ್ಲಬೇಕಾಗಿದೆ.
ಮುರಿದ ಕಿಟಕಿ, ಬಾಗಿಲು: ಒಳರೋಗಿ ವಿಭಾಗದ ಕಟ್ಟಡದ ನಡುವೆ ಖಾಲಿ ಜಾಗವಿದ್ದು, ಅಲ್ಲಿ ಅಳವಡಿಸಿರುವ ಸಿಮೆಂಟ್ ಬೆಂಚುಗಳು ಶಿಥಿಲಗೊಂಡಿವೆ. ಅಲ್ಲಿಯೇ ರೋಗಿಗಳ ಸಹಾಯಕರು ಹಾಗೂ ವೈದ್ಯಕೀಯ ವಿದ್ಯಾರ್ಥಿಗಳು ವಿಶ್ರಾಂತಿ ಪಡೆಯಬೇಕಾಗಿದೆ. ಕಟ್ಟಡದ ಚಾವಣಿಯ ಮೇಲ್ಪದರಗಳು ಕಿತ್ತುಹೋಗಿದ್ದು, ಮಳೆ ಬಂದಾಗ ಸೋರುತ್ತದೆ. ವಾರ್ಡ್‌ಗಳಲ್ಲಿನ ಕೊಠಡಿಗಳೂ ಶಿಥಿಲಗೊಂಡಿವೆ. ಕಿಟಕಿ ಹಾಗೂ ಬಾಗಿಲುಗಳು ಮುರಿದುಹೋಗಿವೆ. ಇದರಿಂದಾಗಿ ರೋಗಿಗಳು ಕಿಟಕಿಗಳಿಗೆ ಬಟ್ಟೆಗಳನ್ನೇ ಮುಚ್ಚಿಕೊಳ್ಳುತ್ತಿದ್ದಾರೆ. ವಾರ್ಡ್‌ಗಳಲ್ಲಿ ಕಬ್ಬಿಣದ ಮಂಚಗಳನ್ನು ಹೊರತುಪಡಿಸಿದರೆ, ಬೇರೆ ಯಾವುದೇ ವ್ಯವಸ್ಥೆಯನ್ನು ಕಲ್ಪಿಸದಿರುವುದು ರೋಗಿಗಳ ಹಾಗೂ ಸಹಾಯಕರ ಅಸಮಾಧಾನಕ್ಕೆ ಕಾರಣವಾಗಿದೆ.
‘ಆಸ್ಪತ್ರೆಯಲ್ಲಿ ಚಿಕಿತ್ಸೆ ಉತ್ತಮವಾಗಿದೆ. ಆದರೆ, ಯಾವುದೇ ಮೂಲಸೌಕರ್ಯವಿಲ್ಲ. ಗೋಡೆಗೆ ಬಳಿದಿರುವ ಸುಣ್ಣ, ಚಕ್ಕೆ ಚಕ್ಕೆಯಂತೆ ಉದುರುತ್ತಿದೆ. ಮಳೆ ಬಂದಾಗ ಚಾವಣಿ ಸೋರುತ್ತಿದೆ. ಕಿಟಕಿಗಳು ಹಾಳಾಗಿದ್ದು, ಬಾಗಿಲುಗಳನ್ನು ಹಾಕಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಕುಳಿತುಕೊಳ್ಳಲು ಸೂಕ್ತ ಆಸನ ವ್ಯವಸ್ಥೆಯಿಲ್ಲ. ನೆಲಹಾಸು ಕೂಡ ಹಾಳಾಗಿದ್ದರಿಂದ ಓಡಾಡುವುದು ಕಷ್ಟಸಾಧ್ಯವಾಗಿದೆ. ಕೆಲ ಔಷಧಗಳನ್ನು ಹೊರಗಡೆಯಿಂದ ತರಬೇಕಾಗಿದೆ’ ಎಂದು ಆಸ್ಪತ್ರೆಯಲ್ಲಿನ ರೋಗಿಗಳು ಹಾಗೂ ಅವರ ಸಹಾಯಕರು ದೂರಿದರು.
ವಿದ್ಯಾರ್ಥಿಗಳ ಕಲಿಕೆಗೆ ತೊಡಕು
ಸರ್ಕಾರಿ ಆಯುರ್ವೇದ ವೈದ್ಯಕೀಯ ವಿದ್ಯಾಲಯದಡಿ ಈ ಆಸ್ಪತ್ರೆಯು ಕಾರ್ಯನಿರ್ವಹಿಸುತ್ತಿದ್ದು ನೆಲಮಹಡಿ ಹಾಗೂ ಮೇಲ್ಮಹಡಿ ಹೊಂದಿದೆ. ರಾಜ್ಯದ ವಿವಿಧ ಭಾಗಗಳ ಜತೆಗೆ ಹೊರರಾಜ್ಯಗಳಿಂದಲೂ ರೋಗಿಗಳು ಇಲ್ಲಿಗೆ ಬರುತ್ತಿದ್ದು ಉಚಿತವಾಗಿ ಚಿಕಿತ್ಸೆ ಒದಗಿಸಲಾಗುತ್ತಿದೆ. ವೈದ್ಯಕೀಯ ವಿದ್ಯಾಲಯದಲ್ಲಿ ಪಂಚಕರ್ಮ ಶಾಲಾಕ್ಯತಂತ್ರ ಶಲ್ಯತಂತ್ರ ಸೇರಿ ವಿವಿಧ ವಿಭಾಗಗಳಿದ್ದು ಪದವಿಯಲ್ಲಿ 500 ಹಾಗೂ ಸ್ನಾತಕೋತ್ತರ ಪದವಿಯಲ್ಲಿ 150 ವಿದ್ಯಾರ್ಥಿಗಳಿಗೆ ಬೋಧಿಸಲಾಗುತ್ತಿದೆ. ಸುಮಾರು 90 ಪ್ರಾಧ್ಯಾಪಕರು ಕಾರ್ಯನಿರ್ವಹಿಸುತ್ತಿದ್ದಾರೆ. ಆಸ್ಪತ್ರೆಯಲ್ಲಿ ಸೂಕ್ತ ಮೂಲಸೌಕರ್ಯ ಇಲ್ಲದಿರುವುದು ವಿದ್ಯಾರ್ಥಿಗಳ ಕಲಿಕೆಗೂ ತೊಡಕಾಗಿದೆ.
‘ಮೂಲಸೌಕರ್ಯ ಅಗತ್ಯ’
‘ನರರೋಗ ಮಂಡಿನೋವು ಬೆನ್ನುನೋವು ಪಾರ್ಶ್ವವಾಯು ಮೂಲವ್ಯಾಧಿ ಪಿಸ್ತುಲ ಸೇರಿ ವಿವಿಧ ಸಮಸ್ಯೆಗಳ ಚಿಕಿತ್ಸೆಗಾಗಿ ರೋಗಿಗಳು ಬರುತ್ತಾರೆ. ಮಸಾಜ್ ಸೇರಿದಂತೆ ವಿವಿಧ ಚಿಕಿತ್ಸೆಗೆ ಅತ್ಯಾಧುನಿಕ ಸೌಲಭ್ಯ ಕಲ್ಪಿಸಿದಲ್ಲಿ ರೋಗಿಗಳಿಗೆ ಗುಣಮಟ್ಟದ ಚಿಕಿತ್ಸೆ ಒದಗಿಸಲು ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳ ಕಲಿಕೆಗೂ ಸಹಕಾರಿಯಾಗಲಿದೆ. ಕಟ್ಟಡಕ್ಕೆ ತುರ್ತಾಗಿ ಮೂಲಸೌಕರ್ಯ ಒದಗಿಸಬೇಕಿದೆ’ ಎಂದು ಆಸ್ಪತ್ರೆಯ ವೈದ್ಯರೊಬ್ಬರು ತಿಳಿಸಿದರು.
ಕಟ್ಟಡ ಹಳೆಯದಾಗಿದ್ದು ಇರುವ ವ್ಯವಸ್ಥೆಯಲ್ಲಿ ಗುಣಮಟ್ಟದ ಚಿಕಿತ್ಸೆ ಒದಗಿಸುತ್ತಿದ್ದೇವೆ. ರೋಗಿಗಳು ಅಧಿಕ ಸಂಖ್ಯೆಯಲ್ಲಿ ಬರುತ್ತಿದ್ದಾರೆಡಾ. ವೆಂಕಟರಾಮಯ್ಯ ಆಸ್ಪತ್ರೆಯ ಸ್ಥಾನಿಕ ವೈದ್ಯಾಧಿಕಾರಿ (ಆರ್‌ಎಂಒ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.