ADVERTISEMENT

ಬೆಂಗಳೂರು: 12 ಗಂಟೆಗಳಲ್ಲಿ ಮೂವರಿಗೆ ಹೃದಯ ಕಸಿ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2025, 14:27 IST
Last Updated 13 ಸೆಪ್ಟೆಂಬರ್ 2025, 14:27 IST
   

ಬೆಂಗಳೂರು: ಹೃದಯ ಸಂಬಂಧಿ ಸಂಕೀರ್ಣ ಸಮಸ್ಯೆ ಎದುರಿಸುತ್ತಿದ್ದ ಮೂವರು ಯುವಕರಿಗೆ 12 ಗಂಟೆಗಳ ಅವಧಿಯಲ್ಲಿ ನಾರಾಯಣ ಹೆಲ್ತ್ ಸಿಟಿ ಆಸ್ಪತ್ರೆ ವೈದ್ಯರು ಹೃದಯ ಕಸಿ ನಡೆಸಿದ್ದಾರೆ. 

ಈ ಕಸಿಗೆ ಒಳಗಾದ ಮೂವರೂ 30 ವರ್ಷದೊಳಗಿನವರಾಗಿದ್ದಾರೆ. ಸೂಕ್ತ ಹೃದಯ ದಾನಿಗಳಿಗಾಗಿ ಇವರು ಒಂದು ವರ್ಷದಿಂದ ಕಾಯುತ್ತಿದ್ದರು. ದಾನಿಗಳ ಹೃದಯ ಹೊಂದಾಣಿಕೆಯಾದ್ದರಿಂದ, ಯಲಹಂಕದ ಸ್ಪರ್ಶ್ ಆಸ್ಪತ್ರೆ, ಹೆಬ್ಬಾಳದ ಆಸ್ಟರ್ ಸಿಎಂಐ ಆಸ್ಪತ್ರೆ ಮತ್ತು ಹಳೆ ವಿಮಾನ ನಿಲ್ದಾಣ ರಸ್ತೆಯ ಮಣಿಪಾಲ್ ಆಸ್ಪತ್ರೆಯಿಂದ ಗ್ರೀನ್ ಕಾರಿಡಾರ್ ಮೂಲಕ ನಾರಾಯಣ ಹೆಲ್ತ್‌ ಸಿಟಿ ಆಸ್ಪತ್ರೆಗೆ ಹೃದಯಗಳನ್ನು ರವಾನಿಸಲಾಯಿತು ಎಂದು ಆಸ್ಪತ್ರೆ ತಿಳಿಸಿದೆ. 

‘ಹೃದ್ರೋಗ ತಜ್ಞರು, ಅರಿವಳಿಕೆ ತಜ್ಞರು ಸೇರಿ ವಿವಿಧ ವಿಭಾಗಗಳ ವೈದ್ಯಕೀಯ ತಜ್ಞರನ್ನು ಒಳಗೊಂಡ ತಂಡ ಈ ಶಸ್ತ್ರಚಿಕಿತ್ಸೆ ನಡೆಸಿದೆ. ಮೂವರು ರೋಗಿಗಳು ಹೃದಯ ಕಸಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸಿದ್ದಾರೆ. ಅವರ ಆರೋಗ್ಯ ಸ್ಥಿರವಾಗಿದ್ದು, ವೇಗವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಮಿದುಳು ನಿಷ್ಕ್ರಿಯಗೊಂಡ ವ್ಯಕ್ತಿಗಳ ಕುಟುಂಬಸ್ಥರು ಅಂಗಾಂಗ ದಾನಕ್ಕೆ ಸಮ್ಮತಿಸಿದ ಪರಿಣಾಮ ಈ ಕಸಿ ಶಸ್ತ್ರಚಿಕಿತ್ಸೆ ಸಾಧ್ಯವಾಯಿತು’ ಎಂದು ಆಸ್ಪತ್ರೆಯ ಹೃದ್ರೋಗ ತಜ್ಞ ಡಾ. ವರುಣ್ ಶೆಟ್ಟಿ ಹೇಳಿದ್ದಾರೆ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.