ADVERTISEMENT

ಬೆಂಗಳೂರು | ಬೆದರಿಸಿ ಸುಲಿಗೆ: ಗೃಹ ರಕ್ಷಕ ಬಂಧನ

ಟ್ವೀಟ್ ಮೂಲಕ ಯುವತಿ ದೂರು: ಕೆಲ ಗಂಟೆಗಳಲ್ಲೇ ಪೊಲೀಸರಿಂದ ಕ್ರಮ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2023, 2:44 IST
Last Updated 2 ಫೆಬ್ರುವರಿ 2023, 2:44 IST
   

ಬೆಂಗಳೂರು: ಕುಂದನಹಳ್ಳಿ ಕೆರೆ ದಡದಲ್ಲಿ ಕುಳಿತಿದ್ದ ಯುವಕ–ಯುವತಿಯನ್ನು ಬೆದರಿಸಿ ಸುಲಿಗೆ ಮಾಡಿದ್ದ ಆರೋಪ ದಡಿ ಗೃಹ ರಕ್ಷಕ ಮಂಜುನಾಥ್ ರೆಡ್ಡಿ (47) ಅವರನ್ನು ಪೊಲೀಸರು ಬಂಧಿಸಿದ್ದಾರೆ.

‘ಆರೋಪಿ ಮಂಜುನಾಥ್, ಐಟಿಐ ಕಾಲೊನಿ ಘಟಕದಲ್ಲಿ ಗೃಹ ರಕ್ಷಕ ನಾಗಿದ್ದ. ಬಿಬಿಎಂಪಿ ಅಡಿಯಲ್ಲಿ ಕೆಲಸ ಮಾಡುತ್ತಿದ್ದ. ಈತನ ಕೃತ್ಯದ ಬಗ್ಗೆ ಯುವತಿ ಟ್ವೀಟ್ ಮಾಡಿದ್ದರು. ಪ್ರಕರಣ ದಾಖಲಿಸಿಕೊಂಡು, ಕೆಲ ಗಂಟೆಗಳಲ್ಲಿ ಮುಂಜುನಾಥ್‌ನನ್ನು ಬಂಧಿಸಲಾಗಿದೆ’ ಎಂದು ವೈಟ್‌ಫೀಲ್ಡ್ ವಿಭಾಗದ ಡಿಸಿಪಿ ಎಸ್. ಗಿರೀಶ್ ಹೇಳಿದರು.

‘ಸಮವಸ್ತ್ರ ಧರಿಸಿ ಕೆರೆ ದಡಕ್ಕೆ ಹೋಗಿದ್ದ ಮಂಜುನಾಥ್, ಪೊಲೀಸ್ ಎಂಬುದಾಗಿ ಹೇಳಿ ₹ 1,000 ಸುಲಿಗೆ ಮಾಡಿದ್ದ. ಪೊಲೀಸರೇ ಸುಲಿಗೆ ಮಾಡಿದ್ದಾಗಿ ಯುವತಿ ಟ್ವೀಟ್‌ನಲ್ಲಿ ಆರೋಪಿಸಿದ್ದರು. ತನಿಖೆ ಮಾಡಿದಾಗ, ಆತ ಗೃಹ ರಕ್ಷಕನೆಂಬುದು ತಿಳಿಯಿತು’ ಎಂದು ಮಾಹಿತಿ ನೀಡಿದರು.

ADVERTISEMENT

ಫೋಟೊ ಕ್ಲಿಕ್ಕಿಸಿ ಬೆದರಿಕೆ: ‘ಇತ್ತೀಚೆಗೆ ಬೆಂಗಳೂರಿಗೆ ಭೇಟಿ ನೀಡಿದ್ದೆ. ನಾನು ಹಾಗೂ ಸ್ನೇಹಿತ ಜ. 29ರಂದು ಮಧ್ಯಾಹ್ನ ಕುಂದಲಹಳ್ಳಿ ಕೆರೆ ಬಳಿ ಹೋಗಿದ್ದೆವು. ಇಬ್ಬರೂ ಕೆರೆ ದಡದಲ್ಲಿ ಕುಳಿತಿದ್ದೆವು’ ಎಂದು ಯುವತಿ ಟ್ವೀಟ್‌ನಲ್ಲಿ ಬರೆದಿದ್ದರು.

‘ಪೊಲೀಸ್ ಸಮವಸ್ತ್ರ ಧರಿಸಿದ್ದ ವ್ಯಕ್ತಿ ನಮ್ಮ ಬಳಿ ಬಂದಿದ್ದ. ನನ್ನ ಹಾಗೂ ಸ್ನೇಹಿತನ ಫೋಟೊವನ್ನು ತನ್ನ ಮೊಬೈಲ್ ಕ್ಯಾಮೆರಾದಲ್ಲಿ ಕ್ಲಿಕ್ಕಿಸಿಕೊಂಡಿದ್ದ. ನಮ್ಮ ವಿಳಾಸ ನೀಡುವಂತೆ ಒತ್ತಾಯಿಸಿದ್ದ. ‘ಕೆರೆ ದಡದಲ್ಲಿ ಕುಳಿತುಕೊಳ್ಳುವುದು ಅಪರಾಧ. ನಿಮ್ಮಿಬ್ಬರ ಮೇಲೆ ಪ್ರಕರಣ ದಾಖಲಿಸುತ್ತೇನೆ. ಠಾಣೆಗೆ ಬನ್ನಿ’ ಎಂದು ಬೆದರಿಸಿದ್ದ.’ ‘ನಿಮ್ಮ ಮೇಲೆ ಪ್ರಕರಣ ದಾಖಲಿಸಿದರೆ, ಜೀವನಪೂರ್ತಿ ಜೈಲಿನಲ್ಲಿ ಇರಬೇಕಾಗುತ್ತದೆ. ಈ ರೀತಿ ಮಾಡಬಾರದೆಂದರೆ ₹ 1,000 ದಂಡ ಕಟ್ಟಿ. ನಿಮ್ಮ ಮೇಲೆ ಯಾವುದೇ ಪ್ರಕರಣ ದಾಖಲಿಸುವು ದಿಲ್ಲ’ ಎಂದು ಆರೋಪಿ ಹೇಳಿದ್ದ. ನಂತರ, ಆತನ ಪೇಟಿಎಂ ಸಂಖ್ಯೆಗೆ ₹ 1,000 ವರ್ಗಾವಣೆ ಮಾಡಿದ್ದೆವು. ಬಳಿಕವೇ ಆತ ಸ್ಥಳದಿಂದ ಹೊರಟುಹೋದ. ಈತನ ವಿರುದ್ಧ ಕ್ರಮ ಕೈಗೊಳ್ಳಿ’ ಎಂದು ಯುವತಿ ಟ್ವೀಟ್‌ನಲ್ಲಿ ಉಲ್ಲೇಖಿಸಿದ್ದರು.

ಆರೋಪಿ ಮಂಜುನಾಥ್ ರೆಡ್ಡಿ ಫೋಟೊವನ್ನು ಬೈಕ್ ನೋಂದಣಿ ಸಂಖ್ಯೆ ಸಮೇತ ಟ್ವೀಟ್‌ನಲ್ಲಿ ಅಪ್‌ಲೋಡ್ ಮಾಡಲಾಗಿತ್ತು. ಅದೇ ಸುಳಿವು ಆಧರಿಸಿ ಪೊಲೀಸರು, ಆರೋಪಿಯನ್ನು ಬಂಧಿಸಿದ್ದಾರೆ. ನಂತರ ಯುವತಿ ತಮ್ಮ ಟ್ವೀಟ್‌ ಅಳಿಸಿ ಹಾಕಿದ್ದಾರೆ.

‘ಹಣ ಕೇಳಿದರೆ 112ಕ್ಕೆ ಕರೆ ಮಾಡಿ’

‘ಪೊಲೀಸರು ಅಥವಾ ಪೊಲೀಸರ ಹೆಸರಿನಲ್ಲಿ ಯಾರಾದರೂ ಹಣ ಕೇಳಿದರೆ ನಿಯಂತ್ರಣ ಕೊಠಡಿ 112ಕ್ಕೆ ಕರೆ ಮಾಡಬಹುದು. ಹಿರಿಯ ಅಧಿಕಾರಿಗಳಿಗೂ ದೂರು ನೀಡಬಹುದು. ಇಂಥ ದೂರುಗಳನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.