ADVERTISEMENT

Bengaluru: ಪತ್ನಿ ಕೊಂದು ಟ್ರಾಲಿಬ್ಯಾಗ್‌ನಲ್ಲಿ ಮೃತದೇಹ ತುಂಬಿದ್ದ ಪತಿ ವಶಕ್ಕೆ

ಕೊಲೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ ಆರೋಪಿ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2025, 0:30 IST
Last Updated 28 ಮಾರ್ಚ್ 2025, 0:30 IST
   

ಬೆಂಗಳೂರು: ಪತ್ನಿಯನ್ನು ಕೊಲೆ ಮಾಡಿ ಮೃತದೇಹ ವನ್ನು ಟ್ರಾಲಿ ಬ್ಯಾಗ್‌ನಲ್ಲಿ ತುಂಬಿಟ್ಟು ಪತಿ ಪರಾರಿ ಆಗಿರುವ ಘಟನೆ ಹುಳಿಮಾವು ಪೊಲೀಸ್ ಠಾಣಾ ವ್ಯಾಪ್ತಿಯ ದೊಡ್ಡ ಕಮ್ಮನಹಳ್ಳಿಯಲ್ಲಿ ನಡೆದಿದೆ.

ಕೃತ್ಯ ನಡೆದಿರುವ ಬಗ್ಗೆ ಗುರುವಾರ ಸಂಜೆ ಗೊತ್ತಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಮಹಾರಾಷ್ಟ್ರದ ಗೌರಿ ಅನಿಲ್ ಸಾಂಬೆಕರ್ (32) ಕೊಲೆಯಾದವರು. ಪರಾರಿಯಾಗಿದ್ದ ಪತಿ ರಾಕೇಶ್ ಪತ್ತೆಗೆ ವಿಶೇಷ ತಂಡ ರಚಿಸಲಾಗಿತ್ತು.

ADVERTISEMENT

ಗುರುವಾರ ರಾತ್ರಿ ಆರೋಪಿ ರಾಕೇಶ್‌ನನ್ನು ವಶಕ್ಕೆ ಪಡೆದಿರುವುದಾಗಿ ಪುಣೆಯ ಪೊಲೀಸರು ಮಾಹಿತಿ ನೀಡಿದ್ದಾರೆ. ಅಲ್ಲಿಗೆ ನಮ್ಮ ತಂಡ ತೆರಳಿದೆ. ಆರೋಪಿಯನ್ನು ಕರೆತಂದು ವಿಚಾರಣೆಗೆ
ಒಳಪಡಿಸಲಾಗುವುದು ಎಂದು ಪೊಲೀಸ್
ಅಧಿಕಾರಿಯೊಬ್ಬರು ತಿಳಿಸಿದರು.

ದೊಡ್ಡ ಕಮ್ಮನಹಳ್ಳಿಯ ಅಪಾರ್ಟ್‌ಮೆಂಟ್‌ ವೊಂದರ ಬಳಿಯ ಮನೆಯಲ್ಲಿ ಆರೋಪಿ ಕೃತ್ಯ ಎಸಗಿದ್ದಾನೆ. ಶ್ವಾನದಳ ಹಾಗೂ ವಿಧಿ ವಿಜ್ಞಾನ ಪ್ರಯೋಗಾಲಯದ ತಜ್ಞರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಪೊಲೀಸರಿಗೆ ಕರೆ ಮಾಡಿ ಮಾಹಿತಿ:

‘ಆರೋಪಿಯು ಎರಡು ದಿನಗಳ ಹಿಂದೆ ಕೃತ್ಯ ಎಸಗಿ ಮುಂಬೈಗೆ ತೆರಳಿದ್ದ. ಗುರುವಾರ ಮಧ್ಯಾಹ್ನ ಮುಂಬೈ ಪೊಲೀಸರಿಗೆ ಕರೆ ಮಾಡಿ, ಬೆಂಗಳೂರಿನಲ್ಲಿ ಪತ್ನಿಯನ್ನು ಕೊಲೆ ಮಾಡಿ ಮೃತದೇಹವನ್ನು ಟ್ರಾಲಿ ಬ್ಯಾಗ್‌ನಲ್ಲಿ ತುಂಬಿ ಇಟ್ಟಿರುವುದಾಗಿ ಹೇಳಿದ್ದ. ಮಹಾರಾಷ್ಟ್ರ ಪೊಲೀಸರು, ಹುಳಿಮಾವು ಪೊಲೀಸರನ್ನು ಸಂಪರ್ಕಿಸಿ ಮಾಹಿತಿ ನೀಡಿದ್ದರು. ‌ಗೌರಿ ಅವರ ಪೋಷಕರಿಗೂ ವಿಷಯ ತಿಳಿಸಿದ್ದರು. ಮಾಹಿತಿ ತಿಳಿದ ಕೆಲವೇ ಕ್ಷಣಗಳಲ್ಲಿ ಸ್ಥಳೀಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಮನೆಯ ಬಾಗಿಲು ಒಡೆದು ಪರಿಶೀಲಿಸಿದಾಗ ಮಹಿಳೆಯನ್ನು ಕೊಲೆ ಮಾಡಿ ಮೃತದೇಹವನ್ನು ಟ್ರಾಲಿ ಬ್ಯಾಗ್‌ನಲ್ಲಿ ತುಂಬಿಟ್ಟಿರುವುದು ಪತ್ತೆಯಾಯಿತು’ ಎಂದು ಮೂಲಗಳು ತಿಳಿಸಿವೆ.

‘ನಗರದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ದಂಪತಿ, ಒಂದೂವರೆ ತಿಂಗಳ ಹಿಂದಷ್ಟೇ ದೊಡ್ಡ ಕಮ್ಮನ ಹಳ್ಳಿಯಲ್ಲಿ ಮೂರನೇ ಮಹಡಿಯಲ್ಲಿ ಬಾಡಿಗೆ ಮನೆ ಪಡೆದುಕೊಂಡಿದ್ದರು. ಮನೆಯಿಂದಲೇ ಕೆಲಸ ಮಾಡಲು ಕಂಪನಿ ಅವಕಾಶ ಕಲ್ಪಿಸಿದ್ದರಿಂದ ದಂಪತಿ ಮನೆಯಲ್ಲೇ ಇರುತ್ತಿದ್ದರು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ‘ಕೊಲೆಗೆ ಕಾರಣ ಗೊತ್ತಾಗಿಲ್ಲ’ ಎಂದು ಪೊಲೀಸ್‌ ಮೂಲಗಳು ಹೇಳಿವೆ.

ಶವಾಗಾರಕ್ಕೆ ಮೃತದೇಹ ರವಾನೆ:

‘ಗೌರಿ ಅವರ ಪೋಷಕರಿಗೆ ಮಾಹಿತಿ ನೀಡಲಾಗಿದೆ. ಆಸ್ಪತ್ರೆಯ ಶವಾಗಾರದಲ್ಲಿ ಮೃತದೇಹ ಇಡಲಾಗಿದೆ. ಪೋಷಕರು ನಗರಕ್ಕೆ ಬಂದ ಬಳಿಕ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗುವುದು’ ಎಂದು ಪೊಲೀಸರು ಹೇಳಿದರು.

6 ತಿಂಗಳಲ್ಲಿ ಎರಡನೇ ಪ್ರಕರಣ

ನಗರದ ಮಲ್ಲೇಶ್ವರದ ಪೈಪ್‌ಲೈನ್‌ನ ಕೆ.ವಿ.ರಸ್ತೆಯ ಬಾಡಿಗೆ ಮನೆಯಲ್ಲಿ ನೆಲಸಿದ್ದ ಮಹಾಲಕ್ಷ್ಮಿ ಎಂಬುವವರನ್ನು ಸೆಪ್ಟೆಂಬರ್‌ನಲ್ಲಿ 50ಕ್ಕೂ ಹೆಚ್ಚು ತುಂಡುಗಳನ್ನಾಗಿ ಕತ್ತರಿಸಿ, ಫ್ರಿಜ್‌ನಲ್ಲಿ ಬಚ್ಚಿಟ್ಟಿದ್ದ ಪ್ರಕರಣದ ಮಾದರಿಯಲ್ಲೇ ಈ ಕೊಲೆಯೂ ನಡೆದಿದೆ. ಮಹಾಲಕ್ಷ್ಮಿ ಅವರನ್ನು ಕೊಲೆ ಮಾಡಿದ ಬಳಿಕ ಆರೋಪಿ ಹೊರ ರಾಜ್ಯಕ್ಕೆ ತೆರಳಿ ಆತ್ಮಹತ್ಯೆ ಮಾಡಿಕೊಂಡಿದ್ದ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.