
ಬೆಂಗಳೂರು: ಬೆಂಗಳೂರು ಕರಗ ಶಕ್ತ್ಯೋತ್ಸವ ಏಪ್ರಿಲ್ 1ರಂದು ನಡೆಯಲಿದ್ದು ಅದಕ್ಕೆ ಬೇಕಾದ ತಯಾರಿಗಳನ್ನು ಮಾಡಿಕೊಳ್ಳಲು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಸೂಚಿಸಿದ್ದಾರೆ.
ಧರ್ಮರಾಯ ಸ್ವಾಮಿ ದೇವಾಲಯದ ನೂತನ ವ್ಯವಸ್ಥಾಪನಾ ಸಮಿತಿಯಿಂದ ವಿಶ್ವವಿಖ್ಯಾತ ಬೆಂಗಳೂರು ಕರಗ ಶಕ್ತ್ಯೋತ್ಸವಕ್ಕೆ ದಿನಾಂಕ ನಿಗದಿಪಡಿಸಲಾಗಿದೆ. ಮಾರ್ಚ್ 24ರಂದು ಧ್ವಜಾರೋಹಣದ ಮೂಲಕ ಉತ್ಸವಕ್ಕೆ ಚಾಲನೆ ಸಿಗಲಿದೆ.
ಮಾರ್ಚ್ 30ರಂದು ಬೆಳಿಗ್ಗೆ 4ರ ಸುಮಾರಿಗೆ ಹಸಿಕರಗ ಆರಂಭಗೊಳ್ಳಲಿದೆ. ಏಪ್ರಿಲ್ 1ರ ಮಧ್ಯರಾತ್ರಿ ಬೆಂಗಳೂರು ಕರಗ ಶಕ್ತ್ಯೋತ್ಸವ ನಡೆಯಲಿದೆ. ಒಟ್ಟು 11 ದಿನ ಬೆಂಗಳೂರು ಕರಗ ಶಕ್ತ್ಯೋತ್ಸವ ಕಾರ್ಯಕ್ರಮ ನಡೆಯಲಿವೆ ಎಂದು ಮುಜರಾಯಿ ಸಚಿವರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಅರ್ಚಕ ಎ.ಜ್ಞಾನೇಂದ್ರ ಸ್ವಾಮಿ ಅವರು 16ನೇ ಬಾರಿಗೆ ಕರಗ ಹೊರಲಿದ್ದಾರೆ. ಬೆಂಗಳೂರು ಕರಗ ದಕ್ಷಿಣ ಭಾರತದ ಅತ್ಯಂತ ಪುರಾತನ ಮತ್ತು ವೈಶಿಷ್ಟ್ಯಪೂರ್ಣ ಹಬ್ಬಗಳಲ್ಲಿ ಒಂದಾಗಿದೆ ಎಂದರು.
ಮಹೋತ್ಸವದ ಕೇಂದ್ರಬಿಂದು ಆಗಿರುವ ಧರ್ಮರಾಯಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆಗಳು ಮತ್ತು ವಿಧಿವಿಧಾನಗಳು ನೆರವೇರುತ್ತವೆ. ತಿಗಳ ಸಮುದಾಯದವರು ಈ ಹಬ್ಬದ ಮುಖ್ಯ ಆಯೋಜಕರಾಗಿದ್ದಾರೆ. ಧರ್ಮರಾಯಸ್ವಾಮಿ ದೇವಸ್ಥಾನದ ಅಲಂಕಾರ, ಪೂಜೆಗಳು ಮುಜರಾಯಿ ಇಲಾಖೆಯಿಂದ ನಡೆಯಲಿವೆ. ಕರಗ ನಡೆಯುವ ಸಂಪಂಗಿ ಕೆರೆಗೆ ಬಣ್ಣ ಬಳಿಯವುದು, ಕುಡಿಯುವ ನೀರಿನ ವ್ಯವಸ್ಥೆ, ಇ–ಟಾಯ್ಲೆಟ್ ವ್ಯವಸ್ಥೆ, ಬಂದೋಬಸ್ತ್ ಸಹಿತ ವಿವಿಧ ವ್ಯವಸ್ಥೆಗಳು ಬೇರೆ ಬೇರೆ ಇಲಾಖೆಗಳಿಂದ ನಡೆಯಲಿವೆ ಎಂದು ಮಾಹಿತಿ ನೀಡಿದರು.
ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನಾರಾಯಣಸ್ವಾಮಿ, ಪೊಲೀಸ್, ಲೋಕೋಪಯೋಗಿ, ಜಿಬಿಎ, ಜಿಲ್ಲಾಡಳಿತ ಸಹಿತ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಶುಕ್ರವಾರ ನಡೆದ ಕರಗದ ಪೂರ್ವಭಾವಿ ಸಭೆಯಲ್ಲಿ ಉಪಸ್ಥಿತರಿದ್ದರು.
ಪೂರ್ವಭಾವಿ ಸಭೆಯ ನಿರ್ಧಾರಗಳು
ಜಿಬಿಎ ವತಿಯಿಂದ ಅಲ್ಪಾವಧಿ ಟೆಂಡರ್ ಕರೆದು ಕರಗಕ್ಕೆ ತಗಲುವ ವೆಚ್ಚವನ್ನು ಸಮರ್ಪಕವಾಗಿ ನಿರ್ವಹಿಸಬೇಕು.
ವ್ಯವಸ್ಥಾಪನಾ ಸಮಿತಿಯ ಮಾರ್ಗದರ್ಶನದಲ್ಲಿ ಹೂವಿನ ಅಲಂಕಾರ, ದೀಪಾಲಂಕಾರ, ದೇವಸ್ಥಾನದ ಕಟ್ಟಡಕ್ಕೆ ಸುಣ್ಣ ಬಣ್ಣ, ಇತರ ಅಗತ್ಯ ಸೇವೆಗಳನ್ನು ಮಾಡಬೇಕು.
ದೇವಾಲಯದ ರಥವನ್ನು ಲೋಕೋಪಯೋಗಿ ಇಲಾಖೆ ಪರಿಶೀಲಿಸಬೇಕು. ಅಗತ್ಯವಿದ್ದಲ್ಲಿ ದುರಸ್ತಿಪಡಿಸಿ ರಥ ಸುಸ್ಥಿತಿಯಲ್ಲಿರುವುದನ್ನು ಖಾತ್ರಿಪಡಿಸಿಕೊಳ್ಳಬೇಕು.
ಹಡ್ಸನ್ ಸರ್ಕಲ್, ಟೌನ್‌ಹಾಲ್ ವೃತ್ತ, ಸಿಟಿ ಮಾರುಕಟ್ಟೆ ವೃತ್ತ, ಮೈಸೂರು ಬ್ಯಾಂಕ್ ವೃತ್ತ, ಜಿಬಿಎ ಮುಖ್ಯ ಕಚೇರಿ ಆವರಣ, ಕೇಂಪೇಗೌಡ ವೃತ್ತ, ಹಳೇಪೇಟೆ, ಇತರ ಮುಖ್ಯರಸ್ತೆಗಳಿಗೆ ವಿಶೇಷ ದೀಪಾಲಂಕಾರ ಮಾಡಬೇಕು.
ದೇವಾಲಯದ ಸುತ್ತಮುತ್ತ ಅವಕಾಶ ಇರುವಲ್ಲೆಲ್ಲ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಬೇಕು.
ಕಾನೂನು ಸುವ್ಯವಸ್ಥೆಗೆ ಅಡ್ಡಿಯಾಗದಂತೆ ನೋಡಿಕೊಳ್ಳಲು ಅಗತ್ಯ ಪೊಲೀಸ್ ಸಿಬ್ಬಂದಿ ನಿಯೋಜಿಸಬೇಕು. ವಾಹನ ನಿಲುಗಡೆಗೆ ವ್ಯವಸ್ಥೆ ಕಲ್ಪಿಸಬೇಕು. ಸುಗಮ ಸಂಚಾರಕ್ಕೆ ಕ್ರಮ ಕೈಗೊಳ್ಳಬೇಕು.
ಅಗತ್ಯ ಇರುವ ಕಡೆಗಳಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು.
ಆಂಬುಲೆನ್ಸ್ ಸಹಿತ ವೈದ್ಯಕೀಯ ವ್ಯವಸ್ಥೆ ಇರಬೇಕು. ಅಗ್ನಿಶಾಮಕ ವಾಹನ ನಿಯೋಜಿಸಿರಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.