ADVERTISEMENT

ಬೆಂಗಳೂರು ಕರಗ ಉತ್ಸವ | ₹10 ಲಕ್ಷ ಬಿಡುಗಡೆಗೆ ₹2 ಲಕ್ಷ ಕಮಿಷನ್‌: ಸತೀಶ್‌ ಆರೋಪ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2026, 16:20 IST
Last Updated 3 ಫೆಬ್ರುವರಿ 2026, 16:20 IST
<div class="paragraphs"><p>ಬೆಂಗಳೂರು ಕರಗ&nbsp;ಉತ್ಸವ </p></div>

ಬೆಂಗಳೂರು ಕರಗ ಉತ್ಸವ

   

ಬೆಂಗಳೂರು: ‘ಕರಗ ಉತ್ಸವದ ಅನುದಾನ ಬಿಡುಗಡೆಗೆ ಶೇ 20ರಷ್ಟು ಕಮಿಷನ್‌ ಕೇಳಲಾಗುತ್ತಿದೆ’ ಎಂದು ಧರ್ಮರಾಯಸ್ವಾಮಿ ದೇವಾಲಯದ ನಿಕಟಪೂರ್ವ ಆಡಳಿತ ಮಂಡಳಿ ಅಧ್ಯಕ್ಷ ಕೆ. ಸತೀಶ್‌ ಆರೋಪಿಸಿದರು.

‘₹10 ಲಕ್ಷ ಅನುದಾನ ಬಿಡುಗಡೆಗೆ ₹2 ಲಕ್ಷ ಕಮಿಷನ್‌ ಕೇಳುತ್ತಿದ್ದಾರೆ. ಹೂವಿನ ಅಲಂಕಾರ, ಲೈಟಿಂಗ್‌ ಸೇರಿದಂತೆ ವಿವಿಧ ಗುತ್ತಿಗೆ ಪಡೆದವರಿಂದ ಮುಜರಾಯಿ ಇಲಾಖೆಯ ಅಧಿಕಾರಿಗಳು ಕಮಿಷನ್‌ ಕೇಳುತ್ತಿದ್ದಾರೆ. ಈ ಭ್ರಷ್ಟಾಚಾರದಲ್ಲಿ ಇಲಾಖೆಯ ಆರು ಅಧಿಕಾರಿಗಳು ಭಾಗಿಯಾಗಿದ್ದು, ಅವರೆಲ್ಲ ಒಂದು ತಂಡವಾಗಿದ್ದಾರೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಆರೋಪಿಸಿದರು.

ADVERTISEMENT

‘ಕಳೆದ ವರ್ಷದ ಕರಗ ಉತ್ಸವ ಮುಗಿದ ಎರಡು ತಿಂಗಳ ನಂತರ ಟೆಂಡರ್‌ ಕರೆಯುತ್ತಾರೆ. ಕರಗ ಉತ್ಸವದಲ್ಲಿ ಹೂವಿನ ಅಲಂಕಾರ, ವಿದ್ಯುತ್‌ ಅಲಂಕಾರ ಮಾಡಿದವರಿಗೆ ಹಣ ನೀಡಿಲ್ಲ. ಎಲ್ಲವನ್ನೂ ಮುಚ್ಚಿಟ್ಟು, ಅಧಿಕಾರಿಗಳೇ ಹಣ ಪಡೆದುಕೊಂಡು ಗುತ್ತಿಗೆದಾರರಿಗೆ ಮೋಸ ಮಾಡಿದ್ದಾರೆ. ಕರಗ ಉತ್ಸವಕ್ಕೆ ಬಿಬಿಎಂಪಿ ₹1.5 ಕೋಟಿ ಅನುದಾನ ಮೀಸಲಿಟ್ಟಿದ್ದರೂ ಅದನ್ನು ಪಡೆಯದೆ ₹40 ಲಕ್ಷದಲ್ಲೇ ಕರಗ ನಡೆಸಿದ್ದೇವೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಆದರೆ ಯಾರಿಗೂ ದುಡ್ಡು ಕೊಟ್ಟಿಲ್ಲ’ ಎಂದು ದೂರಿದರು.

ದಾಖಲೆ ಒದಗಿಸಲಿ: ‘ಕರಗ ಮಹೋತ್ಸವ ವೆಚ್ಚಗಳಿಗೆ ಧಾರ್ಮಿಕ ದತ್ತಿ ಇಲಾಖೆಯ ಅಧಿಕಾರಿಗಳು ಕಮಿಷನ್‌ ಕೇಳಿದ್ದಾರೆ ಎಂದು ಕೆ. ಸತೀಶ್‌ ಅವರು ಆರೋಪ ಮಾಡಿದ್ಧಾರೆ. ಈ ಆರೋಪಗಳಿಗೆ ಸೂಕ್ತ ದಾಖಲೆಗಳನ್ನು ಒದಗಿಸಿದರೆ, ಪರಿಶೀಲಿಸಿ, ಅಕ್ರಮವೆಸಗಿರುವುದು ಕಂಡುಬಂದಲ್ಲಿ ಸಂಬಂಧಪಟ್ಟವರ ವಿರುದ್ಧ ನಿಯಮಾನುಸಾರ ಕ್ರಮ ಜರುಗಿಸಲಾಗುವುದು’ ಎಂದು ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.