ADVERTISEMENT

ಬೆಂಗಳೂರು: ನಗರದಲ್ಲಿ ಕರಗದ ಸಂಭ್ರಮ, ಸಡಗರ

ಪೇಟೆಗಳಲ್ಲಿ ಗೋವಿಂದ... ಗೋವಿಂದ... ನಾಮಸ್ಮರಣೆ; ರಾತ್ರಿಯಿಡೀ ಉತ್ಸವದ ಮೆರುಗು

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2025, 23:05 IST
Last Updated 12 ಏಪ್ರಿಲ್ 2025, 23:05 IST
<div class="paragraphs"><p>ಕರಗದ ಕುಂಟೆಯಲ್ಲಿ ಪೂಜೆ ಮುಗಿಸಿ ಧರ್ಮರಾಯಸ್ವಾಮಿ ದೇವಸ್ಥಾನಕ್ಕೆ ಮೆರವಣಿಗೆಯಲ್ಲಿ ಬಂದ ಕರಗದ ಪೂಜಾರಿ ಎ. ಜ್ಞಾನೇಂದ್ರ </p></div>

ಕರಗದ ಕುಂಟೆಯಲ್ಲಿ ಪೂಜೆ ಮುಗಿಸಿ ಧರ್ಮರಾಯಸ್ವಾಮಿ ದೇವಸ್ಥಾನಕ್ಕೆ ಮೆರವಣಿಗೆಯಲ್ಲಿ ಬಂದ ಕರಗದ ಪೂಜಾರಿ ಎ. ಜ್ಞಾನೇಂದ್ರ

   

ಪ್ರಜಾವಾಣಿ ಚಿತ್ರ / ಎಂ. ಎಸ್. ಮಂಜುನಾಥ್

ಬೆಂಗಳೂರು: ಸಾವಿರಾರು ವೀರಕುಮಾರರ ಉದ್ಘೋಷ, ಭಕ್ತರ ಗೋವಿಂದ... ಗೋವಿಂದ... ನಾಮಸ್ಮರಣೆ, ಮಲ್ಲಿಗೆ ಹೂವಿನ ಸಮರ್ಪಣೆಯೊಂದಿಗೆ ಇತಿಹಾಸ ಪ್ರಸಿದ್ಧ ಬೆಂಗಳೂರು ಕರಗ ಸಂಭ್ರಮ, ಸಡಗರದಿಂದ ಶನಿವಾರ ತಡರಾತ್ರಿಯಿಂದ ಭಾನುವಾರ ನಸುಕಿನವರೆಗೆ ನಗರದ ಪೇಟೆಗಳ ಮುಖ್ಯರಸ್ತೆ, ಗಲ್ಲಿಗಳಲ್ಲಿ ಜರುಗಿತು.

ADVERTISEMENT

ಚೈತ್ರ ಪೌರ್ಣಮಿಯಾದ ಶನಿವಾರ, ಅರ್ಚಕ ಎ. ಜ್ಞಾನೇಂದ್ರ ಅವರು ಪೂರ್ವ ಪೂಜಾಕ್ರಮಗಳನ್ನು ಪೂರೈಸಿ, ತಿಗಳರಪೇಟೆಯಲ್ಲಿರುವ ಧರ್ಮರಾಯ ಸ್ವಾಮಿ ದೇವಸ್ಥಾನಕ್ಕೆ ಬಂದರು. ಹಸಿ ಕರಗವನ್ನು ಸ್ಥಾಪಿಸಿದ್ದ ಸ್ಥಳದಲ್ಲಿ ಧಾರ್ಮಿಕ ವಿಧಿವಿಧಾನಗಳನ್ನು ಪೂರೈಸಿದ ನಂತರ ಮಲ್ಲಿಗೆ ಹೂವಿನಿಂದ ಅಲಂಕೃತಗೊಂಡಿದ್ದ ದ್ರೌಪದಿದೇವಿ ಕರಗ ಉತ್ಸವ ಧರ್ಮರಾಯಸ್ವಾಮಿ ದೇವಸ್ಥಾನದಿಂದ ಶನಿವಾರ ತಡರಾತ್ರಿ ಹೊರಟಿತು.

ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹಾಗೂ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅವರು ಧರ್ಮರಾಯಸ್ವಾಮಿ ದೇವಸ್ಥಾನದ ಅಂಗಳದಲ್ಲಿ ಕರಗಕ್ಕೆ ಪುಷ್ಪಾರ್ಚನೆ ಮಾಡಿದರು.

ದ್ರೌಪದಿದೇವಿ ಕರಗ ಶಕ್ತ್ತೋತ್ಸವದ (ಬೆಂಗಳೂರು ಕರಗ) ಅಂಗವಾಗಿ ತಿಗಳರಪೇಟೆ, ನಗರ್ತರಪೇಟೆ, ಕಬ್ಬನ್‌ಪೇಟೆ, ಗಾಣಿಗರ ಪೇಟೆ, ದೊಡ್ಡಪೇಟೆಯ ಮುಖ್ಯರಸ್ತೆ ಹಾಗೂ ಗಲ್ಲಿಗಲ್ಲಿಗಳಲ್ಲಿ ಸಂಭ್ರಮ ಮನೆ ಮಾಡಿತ್ತು. ಸಹಸ್ರಾರು ಸಂಖ್ಯೆಯಲ್ಲಿದ್ದ ವೀರಕುಮಾರರು ‘ದೀ ಧಿತ್ತಿ...’ ಎಂಬ ಉದ್ಗಾರದೊಂದಿಗೆ ಕತ್ತಿಯನ್ನು ಎದೆಗೆ ಬಡಿಕೊಂಡು ನಮಸ್ಕರಿಸಿದರು.

‘ಗೋವಿಂದ... ಗೋವಿಂದಾ..’ ಎಂಬ ಘೋಷಣೆಗಳು ಮೊಳಗುತ್ತಿದ್ದವು. ಭಕ್ತರು ಕರಗದ ಮೇಲೆ ಮಲ್ಲಿಗೆ ಹೂವನ್ನು ಚೆಲ್ಲಿ ಭಕ್ತಿಭಾವ ಮೆರೆದರು. ಹಲವೆಡೆ ಗಲ್ಲಿಗಳಲ್ಲಿ, ಮನೆಯ ಮೇಲೆನಿಂತಿದ್ದ ನಾಗರಿಕರು ಅಲ್ಲಿಂದಲೇ ಮಲ್ಲಿಗೆಯನ್ನು ಎರಚಿ, ಮಲ್ಲಿಗೆಯ ಅಭಿಷೇಕವನ್ನೂ ಮಾಡಿದರು.

ನಗರ್ತಪೇಟೆ, ಸಿದ್ದಣ್ಣ ಗಲ್ಲಿ, ಕಬ್ಬನ್‌ಪೇಟೆ, ಗಾಣಿಗರ ಪೇಟೆ, ದೊಡ್ಡಪೇಟೆಯಿಂದ ಕೆ.ಆರ್. ಮಾರುಕಟ್ಟೆ ತಲುಪಿ, ಮಸ್ತಾನ್ ಸಾಬ್‌ ದರ್ಗಾಕ್ಕೆ ಭೇಟಿ ನೀಡಿ ಪೂಜೆ ಸ್ವೀಕರಿಸಿತು. ಬಳೇಪೇಟೆ ಹಳೇಗರಡಿ, ಅಣ್ಣಮ್ಮನ ದೇವಾಲಯ, ಕಿಲಾರಿ ರಸ್ತೆ, ಯಲಹಂಕ ಗೇಟ್, ಅವೆನ್ಯೂ ರಸ್ತೆ, ಕುಂಬಾರಪೇಟೆ, ಗೊಲ್ಲರಪೇಟೆ, ತಿಗಳರ ಪೇಟೆಗಳಲ್ಲಿ ಸಾಗಿತು.

ಕರಗ ಉತ್ಸವ ಹೊರಟ ನಂತರ ಧರ್ಮರಾಯಸ್ವಾಮಿ ಮಹಾರಥೋತ್ಸವ ಮುಖ್ಯ ರಸ್ತೆಗಳಲ್ಲಿ ಸಾಗಿತು. ಭಕ್ತರು ಬಾಳೆಹಣ್ಣನ್ನು ಎಸೆದು ಭಕ್ತಿ ಮೆರೆದರು. ಈ ರಥದ ಹಿಂದೆ ನಗರದ ಹಲವು ಭಾಗಗಳಿಂದ ಆಗಮಿಸಿದ್ದ ನೂರಾರು ತೇರು–ರಥಗಳು, ಪಲ್ಲಕ್ಕಿಗಳು ಸಾಗಿದವು.  

ಧರ್ಮರಾಯಸ್ವಾಮಿ ದೇವಸ್ಥಾನದಲ್ಲಿ ಶನಿವಾರ ಬೆಳಿಗ್ಗೆಯಿಂದಲೇ ವಿಶೇಷ ಪೂಜೆಗಳು, ಧಾರ್ಮಿಕ ವಿಧಿ–ವಿಧಾನಗಳು ನಡೆದವು. ಭಾನುವಾರ ತಡರಾತ್ರಿ ಹಸಿ ಕರಗದ ಪೂಜೆ ನಡೆದು, ಸಂಪಂಗಿ ಕೆರೆಯ ಶಕ್ತಿಪೀಠದಿಂದ ಧರ್ಮರಾಯಸ್ವಾಮಿ ದೇವಸ್ಥಾನಕ್ಕೆ ಹಸಿ ಕರಗವನ್ನು ಅರ್ಚಕ ಜ್ಞಾನೇಂದ್ರ ಮೆರಣಿಗೆಯಲ್ಲಿ ಹೊತ್ತು ತಂದಿದ್ದರು. ದೇವಸ್ಥಾನದ ಮುಂಭಾಗದ ರಸ್ತೆಯಲ್ಲಿ, ಹರಕೆ ತೀರಿಸುವ ಭಕ್ತರು ಸಣ್ಣ ಗಾತ್ರದ ಕರ್ಪೂರ ಸೇರಿದಂತೆ ಬೃಹತ್‌ ಗಾತ್ರದ ಕರ್ಪೂರಗಳ ಆರತಿ ಮಾಡಿದರು. ಸುತ್ತಮುತ್ತಲ ರಸ್ತೆಗಳಲ್ಲಿ ಕರ್ಪೂರದ ಘಮ ವ್ಯಾಪಿಸಿತ್ತು.

ತಿಗಳರಪೇಟೆ ಸೇರಿದಂತೆ ಕರಗ ಸಾಗುವ ಮಾರ್ಗದಲ್ಲಿ ವಿಶೇಷ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ಕರಗ ತಲುಪುವ ದೇವಸ್ಥಾನಗಳನ್ನು ದೀಪಾಲಂಕಾರಗಳಿಂದ ಆಕರ್ಷಕವಾಗಿ ಸಿಂಗರಿಸಲಾಗಿತ್ತು.

ಧರ್ಮರಾಯಸ್ವಾಮಿ ದೇವಸ್ಥಾನದ ಮುಂಭಾಗ ಭಕ್ತರು ಶನಿವಾರ ಬೆಳಿಗ್ಗೆ ಕರ್ಪೂರದಾರತಿಗೆ ಸಿದ್ಧತೆ ನಡೆಸಿದರು ಪ್ರಜಾವಾಣಿ ಚಿತ್ರ ಎಂ. ಎಸ್. ಮಂಜುನಾಥ್
ಧರ್ಮರಾಯಸ್ವಾಮಿ ದೇವಸ್ಥಾನದ ಮುಂಭಾಗ ಭಕ್ತರು ದೊಡ್ಡ ಕರ್ಪೂರಗಳನ್ನು ಬೆಳಗಿದರು ಪ್ರಜಾವಾಣಿ ಚಿತ್ರ ಎಂ. ಎಸ್. ಮಂಜುನಾಥ್

ಕರಗಕ್ಕೆ ಅಗತ್ಯ ಸಹಕಾರ: ಡಿಸಿಎಂ

‘ನಮಗೆ ಯಾರು ಬಂದು ಅರ್ಜಿ ನೀಡಿದ್ದಾರೋ ಅವರಿಗೆ ನೆರವು ನೀಡಲಿದ್ದೇವೆ. ಇದಕ್ಕೆ ಬಿಬಿಎಂಪಿ ಬಜೆಟ್‌ನಲ್ಲೂ ಅನುದಾನ ಮೀಸಲಿಡಲಾಗಿದೆ. ಅವರು 2-3 ಭಾಗಗಳಾಗಿದ್ದಾರೆ. ಎಲ್ಲರೂ ಒಗ್ಗಟ್ಟಾಗಿ ಬಂದರೆ ಕರಗ ಉತ್ಸವಕ್ಕೆ ಮೊದಲಿನಿಂದಲೂ ಯಾವ ರೀತಿ ನೆರವು ನೀಡುತ್ತಿದ್ದೆವೋ ಅದನ್ನೇ ನೀಡುತ್ತೇವೆ. ನಾವು ಅನುದಾನ ನೀಡದಿದ್ದರೆ ನಮಗೆ ಆಹ್ವಾನ ಯಾಕೆ ನೀಡಿದ್ದಾರೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ‘ಕರಗ ಉತ್ಸವಕ್ಕೆ ಅನುದಾನ ನೀಡಿಲ್ಲ’ ಎಂಬ ಆರೋಪದ ಬಗ್ಗೆ ಪ್ರತಿಕ್ರಿಯಿಸಿದರು.

ಆರೋಪ: ಕರಗ ಉತ್ಸವದ ಮುನ್ನ ಕಬ್ಬನ್‌ ಉದ್ಯಾನದಲ್ಲಿರುವ ಶನಿವಾರ ಮಧ್ಯಾಹ್ನ ಕರಗದ ಕುಂಟೆಯಲ್ಲಿ ಪೂಜೆ ಸಲ್ಲಿಸಲಾಯಿತು. ಎಲ್ಲರೂ ಉತ್ಸಾಹ ಸಡಗರದಿಂದ ಇದ್ದ ಈ ಸಂದರ್ಭದಲ್ಲೇ ಕರಗ ಉತ್ಸವಕ್ಕೆ ಸರ್ಕಾರದಿಂದ ಹಣ ಬಿಡುಗಡೆಯಾಗಿಲ್ಲ ಎಂಬ ಆರೋಪ ಕೇಳಿಬಂತು. ‘ಕರಗದ ಉತ್ಸವದ ಅಂಗವಾಗಿ ಹೂವಿನ ಅಲಂಕಾರ ಸೇರಿದಂತೆ ಹಲವು ರೀತಿಯ ಸಿದ್ದತೆಗೆ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿದ್ದೇವೆ. ಕೋಟ್ಯಂತರ ಹಣ ಮೀಸಲಿಡಲಾಗಿದೆ ಎಂದು ಹೇಳಲಾಗಿದ್ದರೂ ಇನ್ನೂ ಹಣ ಬಿಡುಗಡೆ ಮಾಡಿಲ್ಲ’ ಎಂದು ಧರ್ಮರಾಯಸ್ವಾಮಿ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ. ಸತೀಶ್‌ ಹಾಗೂ ಕರಗದ ಪೂಜಾರಿ ಎ. ಜ್ಞಾನೇಂದ್ರ ದೂರಿದರು. ಶುಕ್ರವಾರ ಬೆಳಿಗ್ಗೆಯೇ ₹40 ಲಕ್ಷವನ್ನು ಜಿಲ್ಲಾಧಿಕಾರಿಯವರ ಖಾತೆಗೆ ವರ್ಗಾಯಿಸಲಾಗಿದೆ ಎಂದು ಬಿಬಿಎಂಪಿ ಮಾಹಿತಿ ನೀಡಿತು. ‘ಕರಗ ಉತ್ಸವಕ್ಕೆ ಯಾವುದೇ ರೀತಿಯ ಹಣದ ಕೊರತೆ ಇಲ್ಲ. ಸಮಿತಿಯಲ್ಲಿರುವ ಅಧಿಕಾರಿಗಳು ನಿಯಮದಂತೆ ಟೆಂಡರ್ ಕರೆದು ಮುಂಗಡ ಹಣವನ್ನೂ ನೀಡಿದ್ದಾರೆ. ಬಿಲ್‌ ಪ್ರಸ್ತುತಪಡಿಸಿದವರಿಗೆ ಹಣ ಬಿಡುಗಡೆ ಮಾಡಲಾಗುತ್ತದೆ’ ಎಂದು ಜಿಲ್ಲಾಧಿಕಾರಿ ಜಗದೀಶ್‌ ಹೇಳಿದರು.

ಪ್ರಸಾದ ವಿನಿಯೋಗ

ಅವೆನ್ಯೂ ರಸ್ತೆ ಬಿ.ವಿ.ಕೆ ಅಯ್ಯಂಗಾರ್‌ ರಸ್ತೆ ಸುತ್ತಮುತ್ತ ಹಾಗೂ ಕರಗ ಸಾಗುವ ಮುಖ್ಯರಸ್ತೆ ಅಡ್ಡರಸ್ತೆಗಳಲ್ಲಿ ಪಲಾವ್‌ ಬಿಸಿಬೇಳೆಬಾತ್‌ ಸೇರಿದಂತೆ ವಿವಿಧ ರೀತಿಯ ಭಕ್ಷ್ಯಗಳನ್ನು ವಿತರಿಸಲಾಯಿತು. ಪಾನಕ ಮಜ್ಜಿಗೆಯನ್ನೂ ಕರಗ ನೋಡಲು ಬಂದ ಭಕ್ತರಿಗೆ ನೀಡಲಾಯಿತು. ಜಾತ್ರೆಯ ಸಂಭ್ರಮ: ನಗರ್ತಪೇಟೆ ಮುಖ್ಯರಸ್ತೆ ಹಾಗೂ ಅಡ್ಡರಸ್ತೆಗಳ ಇಕ್ಕೆಲಗಳಲ್ಲಿ ಆಟಿಕೆ ಫ್ಯಾನ್ಸಿ ವಸ್ತುಗಳು ತಿಂಡಿ ತಿನಿಸುಗಳನ್ನು ಬೀದಿಬದಿ ವ್ಯಾಪಾರಿಗಳು ಭರ್ಜರಿಯಾಗಿ ಮಾರಾಟ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.