
ಬೆಂಗಳೂರು: ಹೊಸ ವರ್ಷಾಚರಣೆಗೆ ಕೆಲವೇ ದಿನಗಳು ಬಾಕಿ ಇದ್ದು, ನಗರದಾದ್ಯಂತ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ.
ಪಬ್, ರೆಸ್ಟೋರೆಂಟ್ ಹಾಗೂ ಹೊಸ ವರ್ಷಕ್ಕೆ ಪಾರ್ಟಿ ಮಾಡಲು ನಿಗದಿ ಪಡಿಸಿರುವ ಸ್ಥಳ ಪರಿಶೀಲನೆ ನಡೆಸುತ್ತಿರುವ ಪೊಲೀಸರು, ಅಹಿತಕರ ಘಟನೆಗಳು ನಡೆಯದಂತೆ ಹಾಗೂ ಅಕ್ರಮ ಚಟುವಟಿಕೆಗಳ ಮೇಲೆ ನಿಗಾ ವಹಿಸಲು ಕ್ರಮ ಕೈಗೊಂಡಿದ್ದಾರೆ.
ದೆಹಲಿ ಸ್ಫೋಟ ಹಾಗೂ ಗೋವಾದ ನೈಟ್ ಕ್ಲಬ್ ದುರಂತದಿಂದಾಗಿ ಮುಂಜಾಗೃತಾ ಕ್ರಮ ಕೈಗೊಳ್ಳಲಾಗಿದೆ. ಎಂ.ಜಿ ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್ ಸ್ಟ್ರೀಟ್, ಕೋರಮಂಗಲ, ಟ್ರಿನಿಟಿ ಸೇರಿದಂತೆ ಸೂಕ್ಷ್ಮ ಹಾಗೂ ಅತೀ ಸೂಕ್ಷ್ಮ ಪ್ರದೇಶಗಳಲ್ಲಿ ತಪಾಸಣೆ ಕೈಗೊಂಡಿದ್ದಾರೆ. ಕಾರ್ಯಕ್ರಮ ಆಯೋಜಕರಿಗೂ ಕೆಲವು ಸೂಚನೆಗಳನ್ನು ನೀಡುತ್ತಿದ್ದಾರೆ.
ಆಯಕಟ್ಟಿನ ಸ್ಥಳಗಳ ಬಗ್ಗೆ ಮಾಹಿತಿ ಪಡೆದುಕೊಂಡಿರುವ ಹಿರಿಯ ಅಧಿಕಾರಿಗಳು, ಜಿಬಿಎ, ಅಗ್ನಿಶಾಮಕ ಹಾಗೂ ಪೊಲೀಸ್ ಇಲಾಖೆ ನಿಯಮಗಳ ಪಾಲನೆ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಕೆಲ ಪ್ರದೇಶಗಳಿಗೆ ಪೊಲೀಸ್ ಅಧಿಕಾರಿಗಳೇ ಖುದ್ದು ಭೇಟಿ ನೀಡಿ, ಪರಿಶೀಲನೆ ನಡೆಸುತ್ತಿದ್ದಾರೆ.
ನಗರದಲ್ಲಿ ಮಾದಕ ವಸ್ತು ಮಾರಾಟದ ಬಗ್ಗೆ ಸಿಸಿಬಿ ಹಾಗೂ ಸ್ಥಳೀಯ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ. ವಿವಿಧೆಡೆ ದಾಳಿ ನಡೆಸುತ್ತಿರುವ ಪೊಲೀಸರು, ವಿದೇಶಿ ಪ್ರಜೆಗಳು ಸೇರಿ ಸ್ಥಳೀಯ ಡ್ರಗ್ಸ್ ಪೆಡ್ಲರ್‌ಗಳನ್ನು ಬಂಧಿಸಿ, ದಾಸ್ತಾನು ಮಾಡಿದ್ದ ಮಾದಕ ವಸ್ತುವನ್ನು ಜಪ್ತಿ ಮಾಡುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.