ಸಾವು
ಪ್ರಾತಿನಿಧಿಕ ಚಿತ್ರ
ಬೆಂಗಳೂರು: ಬ್ಯಾಟರಾಯನಪುರ ಹಾಗೂ ಎಲೆಕ್ಟ್ರಾನಿಕ್ ಸಿಟಿ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದ ಎರಡು ಪ್ರತ್ಯೇಕ ಅಪಘಾತದಲ್ಲಿ ಇಬ್ಬರು ಮೃತಪಟ್ಟಿದ್ದಾರೆ.
ನಾಯಂಡಹಳ್ಳಿಯ ಹೊರವರ್ತುಲ ರಸ್ತೆಯ(ನೈಸ್ ರಸ್ತೆ) ವೀರಭದ್ರನಗರ ಜಂಕ್ಷನ್ ಬಳಿ ಸ್ಕೂಟರ್ ಹಾಗೂ ಲಾರಿ ಮಧ್ಯೆ ಸಂಭವಿಸಿದ ಅಪಘಾತದಲ್ಲಿ ಮಹಿಳೆ ಮೃತಪಟ್ಟಿದ್ದಾರೆ. ರೇಣುಕಾ (52) ಮೃತ ಮಹಿಳೆ.
ಬಸವೇಶ್ವರನಗರದ ಪಟ್ಟೇಗಾರಪಾಳ್ಯದ ಬಿಡಿಎ ಲೇಔಟ್‌ನ ಮೂರನೇ ಹಂತದಲ್ಲಿ ರೇಣುಕಾ ಅವರು ನೆಲಸಿದ್ದರು. ರೇಣುಕಾ ಅವರು ಪುತ್ರಿ ಕುಸುಮಾ (32) ಹಾಗೂ ಮೊಮ್ಮಗ ಮೋಕ್ಷಿತ್ (9) ಜೊತೆಗೆ ಸ್ಕೂಟರ್‌ನಲ್ಲಿ ಬಂಡೆ ಮಹಾಕಾಳಿ ದೇವಸ್ಥಾನಕ್ಕೆ ತೆರಳುತ್ತಿದ್ದರು. ಪುತ್ರಿ ಸ್ಕೂಟರ್ ಚಲಾಯಿಸುತ್ತಿದ್ದರು. ಮುಂದೆ ಚಲಿಸುತ್ತಿದ್ದ ಸ್ಕೂಟರ್‌ಗೆ ಹಿಂಬದಿಯಿಂದ ಬಂದ ಲಾರಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ರೇಣುಕಾ ಅವರು ಕೆಳಕ್ಕೆ ಬಿದ್ದು ಗಾಯಗೊಂಡಿದ್ದರು. ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ದಾರಿಯಲ್ಲಿ ಮೃತಪಟ್ಟರು ಎಂದು ಸಂಚಾರ ಪೊಲೀಸರು ಹೇಳಿದರು. ಕುಸುಮಾ ಹಾಗೂ ಮೋಕ್ಷಿತ್ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅಪಘಾತಕ್ಕೆ ಕಾರಣವಾದ ಲಾರಿ ಚಾಲಕ, ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಬುಕ್ಕಯಸಸಮುದ್ರಂ ನಿವಾಸಿ ಗೋವರ್ಧನ್ ರೆಡ್ಡಿಯನ್ನು ಬ್ಯಾಟರಾಯನಪುರ ಸಂಚಾರ ಠಾಣೆಯ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಬೈಕ್ ಸವಾರ ಸಾವು: ಎಲೆಕ್ಟ್ರಾನಿಕ್ ಸಿಟಿ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸರಕು ಸಾಗಣೆ ವಾಹನ ಹಾಗೂ ಬೈಕ್ ಮಧ್ಯೆ ಸಂಭವಿಸಿದ ಅಪಘಾತದಲ್ಲಿ ನೀರಿನ ಕ್ಯಾನ್‌ಗಳನ್ನು ಪೂರೈಸುವ ಕೆಲಸ ಮಾಡುತ್ತಿದ್ದ ವಿಘ್ನೇಶ್ (32) ಅವರು ಮೃತಪಟ್ಟಿದ್ದಾರೆ.
ಸೋಮವಾರ ನಸುಕಿನ ವೇಳೆ ವಿಘ್ನೇಶ್ ಅವರು ಬೈಕ್‌ನಲ್ಲಿ ಹೊಸೂರಿನಿಂದ ಕೋನಪ್ಪನ ಅಗ್ರಹಾರದ ಕಡೆಗೆ ಸರ್ವೀಸ್ ರಸ್ತೆಯಲ್ಲಿ ತೆರಳುತ್ತಿದ್ದರು. ಆಗ ವಿರುದ್ಧ ದಿಕ್ಕಿನಿಂದ ವೇಗವಾಗಿ ಬಂದ ಸರಕು ಸಾಗಣೆ ವಾಹನವು ಬೈಕ್‌ಗೆ ಡಿಕ್ಕಿ ಹೊಡೆದಿತ್ತು. ಗಂಭೀರವಾಗಿ ಗಾಯಗೊಂಡಿದ್ದ ವಿಘ್ನೇಶ್ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ದಾರಿಯಲ್ಲಿ ಮೃತಪಟ್ಟರು ಎಂದು ಎಲೆಕ್ಟ್ರಾನಿಕ್ ಸಿಟಿ ಸಂಚಾರ ಠಾಣೆಯ ಪೊಲೀಸರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.