ಬೆಂಗಳೂರು: ಇಲ್ಲಿನ ಬಿಟಿಎಂ ಒಂದನೇ ಹಂತದ ಗಂಗೋತ್ರಿ ವೃತ್ತದಲ್ಲಿರುವ ಪೇಯಿಂಗ್ ಗೆಸ್ಟ್‌ಗೆ(ಪಿ.ಜಿ) ನುಗ್ಗಿ ಯುವತಿಯೊಂದಿಗೆ ಅನುಚಿತ ವರ್ತನೆ ತೋರಿದ್ದ ಆರೋಪಿಯನ್ನು ಸುದ್ದಗುಂಟೆಪಾಳ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಆಂಧ್ರಪ್ರದೇಶದ ಮದನಪಲ್ಲಿ ನಿವಾಸಿ ಕೆ.ನರೇಶ್ ಪಟ್ಯಂ ಬಂಧಿತ ಆರೋಪಿ.
ಬಂಧಿತನಿಂದ ₹1,500 ನಗದು ಹಾಗೂ ಬೈಕ್ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದರು.
ನಗರದಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡಿಕೊಂಡಿದ್ದ ಆರೋಪಿ, ಎಲೆಕ್ಟ್ರಾನಿಕ್ ಸಿಟಿಯಲ್ಲಿ ಬಾಡಿಗೆ ಮನೆಯಲ್ಲಿ ನೆಲಸಿದ್ದ ಎಂದು ಪೊಲೀಸರು ಹೇಳಿದರು.
ಆರೋಪಿ ವಿರುದ್ಧ ಮದನಪಲ್ಲಿ ಠಾಣೆಯಲ್ಲೂ ಮೊಬೈಲ್ ಕಳ್ಳತನ ಪ್ರಕರಣಗಳು ದಾಖಲಾಗಿವೆ ಎಂಬುದು ಗೊತ್ತಾಗಿದೆ.
ಆಗಸ್ಟ್ 29ರಂದು ನಸುಕಿನ ಜಾವ 3 ಗಂಟೆ ಸುಮಾರಿಗೆ ಮಹಿಳಾ ಪಿ.ಜಿಗೆ ಆರೋಪಿ ನುಗ್ಗಿದ್ದ. ಆತನ ಚಲನವಲನಗಳು ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆ ಆಗಿದ್ದವು. ದೃಶ್ಯಾವಳಿ ಆಧರಿಸಿ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಪಿ.ಜಿಗೆ ನುಗ್ಗಿದ್ದ ಆರೋಪಿ ಎಲ್ಲ ರೂಮ್‌ಗಳ ಬಾಗಿಲುಗಳನ್ನು ಹೊರಗಿನಿಂದ ಲಾಕ್ ಮಾಡಿದ್ದ. ನಂತರ, ಯುವತಿಯೊಬ್ಬಳ ಕೊಠಡಿ ನುಗ್ಗಿದ್ದ. ಯುವತಿಯ ಮೈಕೈ ಮುಟ್ಟಿ ದೌರ್ಜನ್ಯ ಎಸಗಿದ್ದ. ಆರೋಪಿಯನ್ನು ಕಂಡು ಆತಂಕಗೊಂಡು ಯುವತಿ ಜೋರಾಗಿ ಕೂಗಿದ್ದರು. ಚಾಕು ತೋರಿಸಿ ಬೆದರಿಸಿದ್ದ. ಈ ವೇಳೆ ಪ್ರತಿರೋಧವೊಡ್ಡಿದ ಯುವತಿಯ ಮೇಲೆ ಹಲ್ಲೆ ನಡೆಸಿ ಎಳೆದಾಡಿದ್ದ. ನಂತರ, ಕೊಠಡಿಯಲ್ಲಿದ್ದ ₹2,500 ನಗದು ಕಳವು ಮಾಡಿಕೊಂಡು ಪರಾರಿಯಾಗಿದ್ದ. ಯುವತಿಯ ಚೀರಾಟ ಕೇಳಿ ಪಕ್ಕದ ಕೊಠಡಿಯ ಯುವತಿಯರು ಎಚ್ಚರಗೊಂಡು ವಿಚಾರಿಸಿದಾಗ ಕೃತ್ಯ ಗೊತ್ತಾಗಿತ್ತು. ನಂತರ, ಯುವತಿ ಪೊಲೀಸರಿಗೆ ದೂರು ನೀಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.