
ಬೆಂಗಳೂರು: 15 ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಕುಖ್ಯಾತ ಕಳ್ಳನನ್ನು ಮಾದನಾಯಕನಹಳ್ಳಿ ಠಾಣೆಯ ಪೊಲೀಸರು ಬಂಧಿಸುವಲ್ಲಿ ಯಶಸ್ವಿ ಆಗಿದ್ದಾರೆ.
ಮಳವಳ್ಳಿಯ ಸಿದ್ದು ಅಲಿಯಾಸ್ ನಾಗರಾಜ್ ಬಂಧಿತ.
ಆರೋಪಿಯಿಂದ ₹19.5 ಲಕ್ಷ ನಗದು ಮತ್ತು 711 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಹೇಳಿದರು.
ಠಾಣಾ ವ್ಯಾಪ್ತಿಯ ಅಂಚೆಪಾಳ್ಯದ ಪ್ರಕೃತಿ ಲೇಔಟ್‌ನ ಮನೆಯೊಂದರಲ್ಲಿ ಆರೋಪಿ ನಾಗರಾಜ್ ಅವರು 248 ಗ್ರಾಂ ಚಿನ್ನದ ಆಭರಣ ಕಳ್ಳತನ ಮಾಡಿದ್ದರು. ಮನೆಯ ಮಾಲೀಕರು ನೀಡಿದ ದೂರಿನ ಮೇಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು.
ನಾಗರಾಜ್ ಎಂಟು ವರ್ಷಗಳಿಂದ ಕಳ್ಳತನ ಮಾಡುತ್ತಿದ್ದರು. ಈತನ ವಿರುದ್ಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆ ಸೇರಿದಂತೆ ಹಲವು ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ಹೇಳಿದರು.
ಚಿನ್ನಾಭರಣ ಕಳ್ಳತನ ಮಾಡಿದ ಬಳಿಕ ಮಾದಪ್ಪನ ಬೆಟ್ಟಕ್ಕೆ ದೇವರ ದರ್ಶನ ಪಡೆಯಲು ತೆರಳಿದ್ದರು. ಅಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.
ಮೂವರು ಆರೋಪಿಗಳ ಸೆರೆ
ಬೆಂಗಳೂರು: ಕಾಶಿಯಾತ್ರೆಗೆ ಹೋಗಿದ್ದವರ ಮನೆ ದೋಚಿದ್ದ ಆರೋಪಿಗಳನ್ನು ಹೆಬ್ಬಗೋಡಿ ಪೊಲೀಸರು ಬಂಧಿಸಿದ್ದಾರೆ. ಪಾಂಡ್ಯರಾಜು ಪೃಥ್ವಿ ಮತ್ತು ಮಂಜುನಾಥ್ ಬಂಧಿತರು. ಆರೋಪಿಗಳಿಂದ ₹44 ಲಕ್ಷ ಮೌಲ್ಯದ 3 ಕೆ.ಜಿ ಬೆಳ್ಳಿ 220 ಗ್ರಾಂ ಚಿನ್ನ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದರು.
ಬೀಗ ಹಾಕಿದ ಮನೆಗಳನ್ನು ಗುರಿಯಾಗಿಸಿ ಆರೋಪಿಗಳು ಕಳ್ಳತನ ಮಾಡುತ್ತಿದ್ದರು. ಬಂಧಿತರ ಪೈಕಿ ಪಾಂಡ್ಯರಾಜು ಅವರ ಮೇಲೆ ಅಮೃತಹಳ್ಳಿ ವೈಟ್‌ಫೀಲ್ಡ್ ಕಲಾಸಿಪಾಳ್ಯ ಬೆಳ್ಳಂದೂರಿನಲ್ಲಿ ಮನೆಗಳ್ಳತನ ಪ್ರಕರಣಗಳು ದಾಖಲಾಗಿವೆ ಎಂದು ಮೂಲಗಳು ಹೇಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.