
ಬೆಂಗಳೂರು: ದಕ್ಷಿಣ ನಗರ ಪಾಲಿಕೆ ವತಿಯಿಂದ ಬೊಮ್ಮನಹಳ್ಳಿ ವಲಯದಲ್ಲಿ ಆಯೋಜಿಸಿದ್ದ ಆಸ್ತಿ ಹರಾಜು ಪ್ರಕ್ರಿಯೆಯಲ್ಲಿ ಬಿಡ್‌ದಾರರು ಪಾಲ್ಗೊಳ್ಳದ ಕಾರಣ ಹರಾಜು ಪ್ರಕ್ರಿಯೆಯನ್ನು ಮುಂದೂಡಲಾಗಿದೆ.
ಸುಸ್ತಿದಾರರಿಂದ ಆಸ್ತಿ ತೆರಿಗೆ ವಸೂಲಿ ಮಾಡಲು ಬೊಮ್ಮನಹಳ್ಳಿ ವ್ಯಾಪ್ತಿಯ ಒಟ್ಟು 50 ಆಸ್ತಿಗಳನ್ನು ಹರಾಜು ಹಾಕುವ ಪ್ರಕ್ರಿಯೆಯನ್ನು ಶುಕ್ರವಾರ ನಡೆಸಲಾಯಿತು. ಸುಸ್ತಿದಾರರಿಂದ ₹1.08 ಕೋಟಿ ತೆರಿಗೆ ಬಾಕಿ ಇತ್ತು. ಈ ಆಸ್ತಿಗಳ ಹರಾಜು ಪ್ರಕ್ರಿಯೆ ಆರಂಭವಾಗುವ ಮುನ್ನ 14 ಸುಸ್ತಿದಾರರು ₹27,62,525 ತೆರಿಗೆಯನ್ನು ಪಾವತಿಸಿದರು. ಹೀಗಾಗಿ, ಹರಾಜು ಪ್ರಕ್ರಿಯೆಯಿಂದ ಆಸ್ತಿಗಳನ್ನು ಕೈಬಿಟ್ಟಿರುವ ಹಿಂಬರಹವನ್ನು ಅವರಿಗೆ ನೀಡಲು ಸಹಾಯಕ ಕಂದಾಯ ಅಧಿಕಾರಿಗಳಿಗೆ ಸೂಚಿಸಲಾಯಿತು.
ಇನ್ನುಳಿದ 36 ಸುಸ್ತಿದಾರರು ಶುಕ್ರವಾರ ಮಧ್ಯಾಹ್ನದವರೆಗೂ ತೆರಿಗೆ ಪಾವತಿಸಿರಲಿಲ್ಲ. ಈ ಆಸ್ತಿಗಳ ಹರಾಜು ಪ್ರಕ್ರಿಯೆ ಆರಂಭಿಸಿದಾಗ, ಸ್ಥಳದಲ್ಲಿ ಹಾಜರಿದ್ದ ಕೆಲವು ಸಾರ್ವಜನಿಕರು ಠೇವಣಿ ಮೊತ್ತ ಪಾವತಿಸಿ ಬಿಡ್ ಮಾಡಲು ಸಿದ್ಧರಾಗಿರಲಿಲ್ಲ. ಯಾವುದೇ ಸಾರ್ವಜನಿಕರು ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಿ ಬಿಡ್ ಮಾಡಲು ಮುಂದೆ ಬಾರದ ಕಾರಣ, 36 ಆಸ್ತಿಗಳ ಮರು ಹರಾಜು ಪ್ರಕ್ರಿಯೆಗೆ ಮತ್ತೆ ಸಿದ್ಧತೆ ನಡೆಸಲು ಅಧಿಕಾರಿಗಳಿಗೆ ಸೂಚಿಸಲಾಯಿತು ಎಂದು ಆಯುಕ್ತ ಕೆ.ಎನ್. ರಮೇಶ್ ತಿಳಿಸಿದರು.
ವಿಳಂಬ ಬೇಡ: ವಾರ್ಡ್‌ಗಳಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಪರಿಹಾರ, ಅಭಿವೃದ್ಧಿ ಕಾರ್ಯ, ಅಗತ್ಯ ಸೌಲಭ್ಯಗಳು ವಿಳಂಬವಿಲ್ಲದೆ ನಾಗರಿಕರಿಗೆ ತಲುಪಬೇಕು ಎಂದು ಶಾಸಕ ಸುರೇಶ್ ಕುಮಾರ್ ಸೂಚಿಸಿದರು.
ಪೂರ್ವ ನಗರ ಪಾಲಿಕೆ ಆಯುಕ್ತ ಡಾ. ಕೆ.ವಿ. ರಾಜೇಂದ್ರ ಅವರೊಂದಿಗೆ ರಾಜಾಜಿನಗರ ಕ್ಷೇತ್ರದಲ್ಲಿ ಪ್ರಗತಿ ಪರಿಶೀಲನೆ ನಡೆಸಿದ ಅವರು, ಅಧಿಕಾರಿಗಳು ಕ್ರಮಬದ್ಧವಾಗಿ ಕಂದಾಯ ಸಂಗ್ರಹ ಕಾರ್ಯವನ್ನು ನಿರ್ವಹಿಸಿ, ಆಸ್ತಿಗಳಿಗೆ ತಪ್ಪಾಗಿ ಕಂದಾಯ ಪಾವತಿಸಿರುವ ಪ್ರಕರಣಗಳನ್ನು ಪರಿಶೀಲಿಸಿ, ಪರಿಷ್ಕೃತ ಕಂದಾಯ ವಸೂಲಿ ಮಾಡುವಂತೆ ಸೂಚಿಸಿದರು.
ಇದಲ್ಲದೆ, ದಾಖಲಾತಿಗಳನ್ನು ಡಿಜಿಟಲೀಕರಣ ಮಾಡುವ ಕಾರ್ಯಕ್ಕೆ ಹೆಚ್ಚಿನ ವೇಗ ನೀಡುವುದರೊಂದಿಗೆ, ನಿಗದಿತ ಅವಧಿಯಲ್ಲಿ ಅದನ್ನು ಪೂರ್ಣಗೊಳಿಸುವಂತೆ ನಿರ್ದೇಶನ ನೀಡಿದರು.
ಘನತ್ಯಾಜ್ಯ ನಿರ್ವಹಣೆಯನ್ನು ಖಚಿತಪಡಿಸಿಕೊಳ್ಳುವ ಉದ್ದೇಶದಿಂದ, ಆರೋಗ್ಯ ಅಧಿಕಾರಿಗಳು, ವ್ಯವಸ್ಥಾಪಕರು ಕಾರ್ಯಯೋಜನೆ ರೂಪಿಸಿ, ಬ್ಲ್ಯಾಕ್ ಸ್ಪಾಟ್‌ಗಳನ್ನು ಸಂಪೂರ್ಣವಾಗಿ ತೆರವುಗೊಳಿಸಬೇಕು. ಅವು ಮರುಕಳಿಸದಂತೆ ಕ್ರಮ ಕೈಗೊಳ್ಳಬೇಕು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.