ADVERTISEMENT

ಬೆಂಗಳೂರು: ಆರು ಹೊಸ ಬಡಾವಣೆಗೆ ಹಸಿರು ನಿಶಾನೆ

6217 ಎಕರೆ ಭೂಸ್ವಾಧೀನ: ಭೂ ಮಾಲೀಕರಿಗೆ 40:60 ಅನುಪಾತದಲ್ಲಿ ಪರಿಹಾರ

ಕೆ.ಎಸ್.ಸುನಿಲ್
Published 5 ಆಗಸ್ಟ್ 2025, 20:31 IST
Last Updated 5 ಆಗಸ್ಟ್ 2025, 20:31 IST
ಬಿಡಿಎ ಕಚೇರಿ. 
ಬಿಡಿಎ ಕಚೇರಿ.    

ಬೆಂಗಳೂರು: ಬೆಂಗಳೂರು ಬ್ಯುಸಿನೆಸ್ ಕಾರಿಡಾರ್ (ಪಿಆರ್‌ಆರ್‌–2) ಸುತ್ತಮುತ್ತ ಹೊಸದಾಗಿ ಆರು ಬಡಾವಣೆಗಳನ್ನು ನಿರ್ಮಿಸುತ್ತಿದ್ದು, ಆರು ಸಾವಿರ ಎಕರೆ ಜಮೀನು ಸ್ವಾಧೀನಕ್ಕೆ ಪ್ರಾಥಮಿಕ ಅಧಿಸೂಚನೆ ಹೊರಡಿಸಲು ನಗರಾಭಿವೃದ್ಧಿ ಇಲಾಖೆಯು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ (ಬಿಡಿಎ) ಅನುಮೋದನೆ ನೀಡಿದೆ.

ಹೊಸೂರು ರಸ್ತೆಯಿಂದ ಬನ್ನೇರುಘಟ್ಟ ರಸ್ತೆ, ಕನಕಪುರ ರಸ್ತೆ ಮೂಲಕ ಮೈಸೂರು ರಸ್ತೆವರೆಗೆ ಪಿಆರ್‌ಆರ್‌–2ಕ್ಕೆ ಹೊಂದಿಕೊಂಡಂತೆ ಆರು ಬಡಾವಣೆಗಳನ್ನು ಒಟ್ಟು 6217 ಎಕರೆ 3.88 ಗುಂಟೆ ವಿಸ್ತೀರ್ಣದ ಪ್ರದೇಶದಲ್ಲಿ ನಿರ್ಮಿಸಲಾಗುತ್ತದೆ.

ಈ ಬಡಾವಣೆಗಳನ್ನು ಸಾರ್ವಜನಿಕ ಸಹಭಾಗಿತ್ವದ ಮಾದರಿಯಲ್ಲಿ ನಿರ್ಮಿಸಲಾಗುತ್ತಿದ್ದು, ಜಮೀನು ಕಳೆದುಕೊಳ್ಳುವ ಭೂ ಮಾಲೀಕರಿಗೆ 40:60 ಅನುಪಾತದಲ್ಲಿ ಅಭಿವೃದ್ಧಿಪಡಿಸಿದ ನಿವೇಶನ ಅಥವಾ ನಗದು ಪರಿಹಾರ ನೀಡಲಾಗುತ್ತದೆ.

ADVERTISEMENT

ಪ್ರಾಧಿಕಾರದ ವತಿಯಿಂದ ಯೋಜನಾಬದ್ಧವಾಗಿ ಬಡಾವಣೆಗಳನ್ನು ರಚಿಸಿ, ಸಾರ್ವಜನಿಕರಿಗೆ ನ್ಯಾಯೋಚಿತ ದರದಲ್ಲಿ ನಿವೇಶಗಳನ್ನು ಹಂಚಿಕೆ ಮಾಡುವುದು ಹಾಗೂ ಭೂ ಸ್ವಾಧೀನಪಡಿಸಿಕೊಳ್ಳುತ್ತಿರುವ ಜಮೀನುಗಳು ಕೆ.ಟಿ.ಸಿ.ಪಿ ಕಾಯ್ದೆ 1961ರ ಕಲಂ 12 (1) (ಬಿ) (ಸಿ) ಮತ್ತು (ಎಫ್‌)ಗೆ ಒಳಪಡದಿರುವ ಬಗ್ಗೆ ಖಚಿತ ಪಡಿಸಿಕೊಳ್ಳುವಂತೆ ನಗರಾಭಿವೃದ್ಧಿ ಇಲಾಖೆ ಹೊರಡಿಸಿರುವ ಆದೇಶದಲ್ಲಿ ತಿಳಿಸಲಾಗಿದೆ.

ಈಗಾಗಲೇ ಕೆಲವು ರೈತರಿಗೆ ನೋಟಿಸ್‌ ಜಾರಿ ಮಾಡುತ್ತಿದ್ದು, ಭೂದಾಖಲೆಗಳನ್ನು ಒದಗಿಸಲು ಸೂಚಿಸಲಾಗಿದೆ. ಮೈಸೂರು ರಸ್ತೆಯಿಂದ ಮಾಗಡಿ ರಸ್ತೆವರೆಗೆ ನಾಡಪ್ರಭು ಕೆಂಪೇಗೌಡ ಬಡಾವಣೆ ನಿರ್ಮಾಣ ಆಗಿದೆ. ಹೀಗಾಗಿ ಮೈಸೂರು ರಸ್ತೆಯಿಂದ ಹೊಸೂರು ರಸ್ತೆವರೆಗಿನ ಗ್ರಾಮಗಳಲ್ಲಿ ಹೊಸ ಬಡಾವಣೆಗಳನ್ನು ನಿರ್ಮಿಸಲು ನಿರ್ಧರಿಸಲಾಗಿದೆ.  

ಆರು ಹೊಸ ಬಡಾವಣೆಗಳಿಗಾಗಿ 22 ಗ್ರಾಮಗಳ ಸರ್ವೆ ನಂಬರ್‌ಗಳನ್ನು ಗುರುತಿಸಿದ್ದು, 50 ಸಾವಿರಕ್ಕೂ ಹೆಚ್ಚು ನಿವೇಶನಗಳನ್ನು ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ. 100 ಮೀ. ಅಗಲದ ಪಿಆರ್‌ಆರ್‌–2 ಅನ್ನು ನಿರ್ಮಿಸಲು ಉದ್ದೇಶಿಸಲಾಗಿದ್ದು, ಸಂಪರ್ಕ ರಸ್ತೆಗಳು ಹಾಗೂ ವಾಣಿಜ್ಯ ಚಟುವಟಿಕೆಗಳಿಗೂ ಹೆಚ್ಚು ಪ್ರಾಮುಖ್ಯ ಸಿಗಲಿದೆ ಎಂದು ಬಿಡಿಎ ಮೂಲಗಳು ತಿಳಿಸಿವೆ.

‘ಬೆಂಗಳೂರು ನಗರ ವೇಗವಾಗಿ ಬೆಳೆಯುತ್ತಿರುವುದರಿಂದ ವಾಹನಗಳ ಸುಗಮ ಸಂಚಾರಕ್ಕೆ ಹಾಗೂ ಸಂಚಾರ ದಟ್ಟಣೆ ಕಡಿಮೆ ಮಾಡಲು ಪಿಆರ್‌ಆರ್ ರಸ್ತೆ ಬಹುಮುಖ್ಯ ಪಾತ್ರ ನಿರ್ವಹಿಸುತ್ತದೆ. ಜೊತೆಗೆ ವೈಜ್ಞಾನಿಕ ಮತ್ತು ವಿಶಾಲವಾದ ಬಡಾವಣೆ ನಿರ್ಮಿಸುವುದರಿಂದ ಸಾರ್ವಜನಿಕರಿಗೆ ವಸತಿ ಸೌಲಭ್ಯ ಕಲ್ಪಿಸಬಹುದು. ಹೈಕೋರ್ಟ್‌ ಮತ್ತು ಸುಪ್ರೀಂ ಕೋರ್ಟ್‌ ಹಲವು ಪ್ರಕರಣಗಳಲ್ಲಿ ಅನಧಿಕೃತ ಬಡಾವಣೆಗಳನ್ನು ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮಕೈಗೊಳ್ಳುವಂತೆ ನಿರ್ದೇಶನ ನೀಡಿದೆ. ಹಾಗಾಗಿ ಹೊಸ ಬಡಾವಣೆಗಳ ನಿರ್ಮಾಣದಿಂದ ಬೆಂಗಳೂರು ನಗರ ಸುತ್ತಮುತ್ತ ಅನಧಿಕೃತ ಬಡಾವಣೆಯನ್ನು ತಡೆಗಟ್ಟಬಹುದು’ ಎಂದು ಬಿಡಿಎ ಅಧಿಕಾರಿಗಳು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.