ADVERTISEMENT

ಮಳೆ ತಂದ ಸಂಕಟ: ಕಗ್ಗಲಿಪುರ ಆಸ್ಪತ್ರೆ ಅಸ್ತವ್ಯಸ್ತ

ಸ್ವಚ್ಛತೆ ಕಾರ್ಯದಲ್ಲಿ ತೊಡಗಿರುವ ಆಸ್ಪತ್ರೆ ಸಿಬ್ಬಂದಿ: ಸಮಸ್ಯೆಗೆ ಬೇಕಿದೆ ಶಾಶ್ವತ ಪರಿಹಾರ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2022, 19:59 IST
Last Updated 29 ಆಗಸ್ಟ್ 2022, 19:59 IST
ಕಗ್ಗಲಿಪುರ ಸಮುದಾಯ ಆರೋಗ್ಯ ಕೇಂದ್ರದ ಸೋಮವಾರದ ಸ್ಥಿತಿ - –ಪ್ರಜಾವಾಣಿ ಚಿತ್ರ/ಪ್ರಶಾಂತ್ ಎಚ್‌. ಜಿ.
ಕಗ್ಗಲಿಪುರ ಸಮುದಾಯ ಆರೋಗ್ಯ ಕೇಂದ್ರದ ಸೋಮವಾರದ ಸ್ಥಿತಿ - –ಪ್ರಜಾವಾಣಿ ಚಿತ್ರ/ಪ್ರಶಾಂತ್ ಎಚ್‌. ಜಿ.   

ಬೆಂಗಳೂರು: ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ನಗರ ಮತ್ತು ಹೊರ ವಲಯಗಳ ಕೆರೆ–ಕಟ್ಟೆಗಳ ನೀರು ರಸ್ತೆಗಳಿಗೆ ನುಗ್ಗಿ ಅವಾಂತರ ಸೃಷ್ಟಿಸುತ್ತಿದೆ. ಕಗ್ಗಲಿಪುರದಲ್ಲಿ ಸರ್ಕಾರಿ ಸಮುದಾಯ ಆಸ್ಪತ್ರೆಗೆ ನುಗ್ಗಿದ ನೀರು ಅಪಾರ ಪ್ರಮಾಣದ ಹಾನಿ ಉಂಟು ಮಾಡಿದ್ದು, ಆಸ್ಪತ್ರೆಯ ವ್ಯವಸ್ಥೆಯೇ ಅಸ್ತವ್ಯಸ್ತವಾಗಿದೆ.

ಕನಕಪುರ ರಸ್ತೆಯಲ್ಲಿನ ಕಗ್ಗಲಿಪುರದ ಸರ್ಕಾರಿ ಸಮುದಾಯ ಆಸ್ಪತ್ರೆ ಸುಸಜ್ಜಿತ ಕಟ್ಟಡ, ವೈದ್ಯಕೀಯ ಸಲಕರಣೆಯೊಂದಿಗೆ ಸುತ್ತಮುತ್ತಲ ಊರುಗಳ ಜನರಿಗೆ ಆರೋಗ್ಯ ಸೇವೆ ಒದಗಿಸುತ್ತಿದ್ದು, ನಾಲ್ಕು ಬಾರಿ ಕಾಯಕಲ್ಪ ಪ್ರಶಸ್ತಿಗೂ ಆಯ್ಕೆಯಾಗಿದೆ. ದಿನಕ್ಕೆ 250 ಹೊರ ರೋಗಿಗಳು ಇಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಶನಿವಾರ ಬೆಳಗಿನ ಜಾವ ನುಗ್ಗಿದ ನೀರು ಇಡೀ ಆಸ್ಪತ್ರೆ ವ್ಯವಸ್ಥೆಯ ಚಿತ್ರಣವನ್ನೇ ಬದಲಿಸಿದೆ.

ನೀರು ನುಗ್ಗಿದ ಸಂದರ್ಭದಲ್ಲಿ ಇದ್ದ 10 ಒಳರೋಗಿಗಳನ್ನು ಬೇರೆ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಆದರೆ, ಆಸ್ಪತ್ರೆ
ಯೊಳಗೆ ದಾಸ್ತಾನಿದ್ದ ಔಷಧಗಳು ನೀರು ಪಾಲಾಗಿವೆ. ವೈದ್ಯಕೀಯ ಉಪಕರಣಗಳು ನೀರಿನಲ್ಲಿ ಮುಳುಗಿ ಹಾಳಾಗಿವೆ. ಹಾಳಾಗಿರುವ ಔಷಧವನ್ನು ಹೊರ ಹಾಕಿ ಕಟ್ಟಡ ಸ್ವಚ್ಛಗೊಳಿಸುವ ಕೆಲಸದಲ್ಲಿ ಆಸ್ಪತ್ರೆ ಸಿಬ್ಬಂದಿ ನಿರತರಾಗಿದ್ದಾರೆ.

ADVERTISEMENT

ಸುತ್ತಮುತ್ತಲ ಗ್ರಾಮಗಳ ಜನರ ಜೀವನಾಡಿಯಾಗಿದ್ದ ಆಸ್ಪತ್ರೆಯು ಈಗ ರೋಗಗ್ರಸ್ಥ ಸ್ಥಿತಿಯಲ್ಲಿದ್ದು, ಇದು ಅಲ್ಲಿನ ವೈದ್ಯರು ಮತ್ತು ಸಿಬ್ಬಂದಿಯನ್ನು ಚಿಂತೆಗೀಡು ಮಾಡಿದೆ.

ನೀರು ನುಗ್ಗಲು ಕಾರಣ: ಕನಕಪುರ ರಸ್ತೆ ಪಕ್ಕದ ಹಳ್ಳದ ಬದಿಯಲ್ಲಿ ಆಸ್ಪತ್ರೆ ಇದೆ. ಈ ಹಳ್ಳವನ್ನು ಹಾದು ಹೋಗುವ ರಸ್ತೆಗೆ ಕಿರಿದಾದ ಸೇತುವೆಯೊಂದಿದೆ. ಶನಿವಾರದ ಅಬ್ಬರದ ಮಳೆಯಿಂದ ಸೇತುವೆ ಮೇಲಿಂದ ಪ್ರವಾಹದಂತೆ ಹರಿದ ನೀರು ಆಸ್ಪತ್ರೆಯ ಆವರಣಕ್ಕೆ ನುಗ್ಗಿ ಈ ಅವಾಂತರ ಸೃಷ್ಟಿಸಿದೆ ಎಂದು ಸಿಬ್ಬಂದಿ ಬೇಸರ ವ್ಯಕ್ತಪಡಿಸುತ್ತಾರೆ.

ಕೂಡಲೇ ಜೆಸಿಬಿ ತರಿಸಿ ಸೇತುವೆ ಸಮೇತ ತೆರವುಗೊಳಿಸಲಾಯಿತು. ಇಲ್ಲದಿದ್ದರೆ ಇನ್ನಷ್ಟು ನೀರು ಆಸ್ಪತ್ರೆಗೆ ನುಗ್ಗುವ ಸಾಧ್ಯತೆ ಇತ್ತು. 2017ರಲ್ಲೂ ವಾರದ ಅವಧಿಯಲ್ಲಿ ಎರಡು ಬಾರಿ ನೀರು ನುಗ್ಗಿತ್ತು. ಸಂಬಂಧಪಟ್ಟವರು ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂದು ಮನವಿ ಮಾಡಿದರು.

‘₹1 ಕೋಟಿ ಮೌಲ್ಯದ ವಸ್ತು ಹಾಳು’
ನೀರು ನುಗ್ಗಿದ್ದರಿಂದ ₹50 ಲಕ್ಷ ಮೌಲ್ಯದ ಔಷಧ ಹಾಳಾಗಿದೆ. ವೈದ್ಯಕೀಯ ಉಪಕರಣಗಳೂ ಹಾಳಾಗಿರುವ ಸಾಧ್ಯತೆ ಇದ್ದು, ಪರಿಶೀಲಿಸಬೇಕಿದೆ. ಒಟ್ಟಾರೆ ₹1 ಕೋಟಿ ಮೌಲ್ಯದ ವಸ್ತುಗಳು ಹಾಳಾಗಿರುವ ಸಾಧ್ಯತೆ ಇದೆ ಎಂದು ಇಲ್ಲಿನ ಅಧಿಕಾರಿಯೊಬ್ಬರು ಹೇಳಿದರು.

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ನಗರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಿರಂಜನ್, ‘ಎಷ್ಟು ನಷ್ಟವಾಗಿದೆ ಎಂಬುದನ್ನು ಅಂದಾಜು ಮಾಡುತ್ತಿದ್ದು, ಮಂಗಳವಾರ ವರದಿ ಬರಲಿದೆ. ಇನ್ನು ಮೂರ್ನಾಲ್ಕು ದಿನಗಳಲ್ಲಿ ಆಸ್ಪತ್ರೆ ಕಾರ್ಯಾರಂಭವಾಗಲಿದೆ’ ಎಂದರು.

ಇನ್ನೂ ಒಂದು ವಾರ ಆಸ್ಪತ್ರೆ ಬಂದ್
ಸಂಪೂರ್ಣವಾಗಿ ಸ್ವಚ್ಛಗೊಳಿಸಿ ಸುಸ್ಥಿತಿಗೆ ಮರಳಿದ ಬಳಿಕವೇ ಆಸ್ಪತ್ರೆ ಕಾರ್ಯಾರಂಭ ಆಗಲಿದ್ದು, ಕನಿಷ್ಠ ಒಂದು ವಾರ ಬೇಕಾಗಬಹುದು ಎಂದು ಆಸ್ಪತ್ರೆ ವೈದ್ಯರು ಹೇಳಿದರು.

ಮೂರ್ನಾಲ್ಕು ಬಾರಿ ಸ್ವಚ್ಛಗೊಳಿಸಿ ರೋಗಿಗಳ ಚಿಕಿತ್ಸೆಗೆ ಪೂರಕವಾತಾವರಣ ಇದೆ ಎಂಬುದು ಖಚಿತವಾದ ಬಳಿಕವೇ ಆಸ್ಪತ್ರೆ ಕಾರ್ಯಾರಂಭ ಆಗಲಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.