ಬೆಂಗಳೂರು: ಮಾನ್ಯತಾ ಟೆಕ್ ಪಾರ್ಕ್ ಹಾಗೂ ಸುತ್ತಮುತ್ತ ಮಳೆನೀರು ಹರಿಯಲು ಅಡ್ಡವಿರುವ ಕಟ್ಟಡಗಳನ್ನು ವಿಪತ್ತು ನಿರ್ವಹಣೆ ಕಾಯ್ದೆಯಡಿ ಶೀಘ್ರ ತೆರವುಗೊಳಿಸಬೇಕು ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಯಲಹಂಕದ ಮಾನ್ಯತಾ ಟೆಕ್ ಪಾರ್ಕ್ ಬಳಿ ಪ್ರವಾಹಕ್ಕೆ ಕಾರಣವಾಗುತ್ತಿರುವ ರಾಜಕಾಲುವೆ ಹಾಗೂ ನಾಲೆಗಳನ್ನು ಶಿವಕುಮಾರ್ ಅವರು ಗುರುವಾರ ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
‘ನಾನು ಹಾಗೂ ಮುಖ್ಯಮಂತ್ರಿಯವರು ಈಗಾಗಲೇ ಮಳೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದೇವೆ. ಮಾನ್ಯತಾ ಟೆಕ್‌ಪಾರ್ಕ್ ಬಳಿಯ ಮ್ಯಾನ್ಫೋ ಜಂಕ್ಷನ್‌ನಿಂದ ಸಮಸ್ಯೆ ಆರಂಭವಾಗಿ ನಂತರ ಸುತ್ತಮುತ್ತಲಿನ ಪ್ರದೇಶಗಳಿಗೂ ಸಮಸ್ಯೆಯಾಗುತ್ತಿದೆ. ಕೆಲವರು ನ್ಯಾಯಾಲಯದಿಂದ ತಡೆಯಾಜ್ಞೆ ತಂದು ಅಡ್ಡಿಪಡಿಸುತ್ತಿದ್ದಾರೆ. ನಮ್ಮ ಅಧಿಕಾರಿಗಳಿಗೂ ಸಹಕಾರ ನೀಡುತ್ತಿರಲಿಲ್ಲ. ಹೀಗಾಗಿ ಸಮಸ್ಯೆಗೆ ಕಾರಣವಾಗಿರುವ ಪ್ರದೇಶಗಳಲ್ಲಿ ವಿಪತ್ತು ನಿರ್ವಹಣಾ ಕಾಯ್ದೆ ಅಡಿ ಕಟ್ಟಡ ತೆರವುಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ’ ಎಂದರು.
‘ಯಾರ ಆಸ್ತಿಯನ್ನೂ ನಷ್ಟ ಮಾಡಲು ಇಷ್ಟವಿಲ್ಲ. ಯಾರಿಗೂ ಅನ್ಯಾಯ ಮಾಡಲು ಬಯಸುವುದಿಲ್ಲ. ನೀರು ಸರಾಗವಾಗಿ ಹರಿಯಬೇಕು. ಹೀಗಾಗಿ ನಾನೇ ಸ್ಥಳಕ್ಕೆ ಭೇಟಿನೀಡಿ ಪರಿಶೀಲನೆ ನಡೆಸಿದ್ದೇನೆ. ಕಾಮಗಾರಿ ಮುಂದುವರಿಸಲು ನನ್ನ ಮುಂದೆ ಎಲ್ಲರೂ ಒಪ್ಪಿಕೊಂಡಿದ್ದಾರೆ. ಟಿಡಿಆರ್ ಕೂಡ ನೀಡಲಾಗುತ್ತದೆ. ಪ್ರವಾಹಮುಕ್ತಗೊಳಿಸಲು ಶಾಶ್ವತ ಪರಿಹಾರ ಕಂಡು ಹಿಡಿಯುವುದು ಮುಖ್ಯ’ ಎಂದು ತಿಳಿಸಿದರು.
‘ಬೆಂಗಳೂರಿನ ಘನತೆ ಹಾಳಾಗಲು ಬಿಡುವುದಿಲ್ಲ. ಹೀಗಾಗಿ ಕಾಮಗಾರಿಗೆ ಸಹಕಾರ ನೀಡುವಂತೆ ಈ ಭಾಗದ ಜಮೀನು ಮಾಲೀಕರಿಗೆ ಮನವಿ ಮಾಡಿದ್ದೇವೆ. ತಾಂತ್ರಿಕ ಕಾರಣಗಳಿಂದಾಗಿ ತಪ್ಪಾಗಿದ್ದರೆ ನಾವು ಅದಕ್ಕೆ ಪರಿಹಾರ ನೀಡುತ್ತೇವೆ. ಇದಕ್ಕೆ ಎಲ್ಲರೂ ಒಪ್ಪಿಗೆ ನೀಡಿದ್ದು, ನಾವು ನಮ್ಮ ಕೆಲಸ ಮುಂದುವರಿಸುತ್ತೇವೆ. ಈ ವಿಚಾರದಲ್ಲಿರುವ ಅಡಚಣೆಗಳನ್ನು ತೆರವುಗೊಳಿಸಲು ಪಾಲಿಕೆ ಮುಖ್ಯ ಆಯುಕ್ತರು ಹಾಗೂ ಅಧಿಕಾರಿಗಳಿಗೆ ಸಂಪೂರ್ಣ ಅಧಿಕಾರ ನೀಡಲಾಗಿದೆ’ ಎಂದರು.
‘ಕಟ್ಟಡಗಳಿಗೆ ನಕ್ಷೆ ಅನುಮೋದನೆ ಆಗಿದೆ’ ಎಂದು ಮಾಲೀಕರೊಬ್ಬರು ಹೇಳಿದಾಗ, ‘ನಕ್ಷೆಗಳ ಗೊಂದಲ ಏನೇ ಇದ್ದರೂ ನೀರು ಹರಿಯಲು ಜಾಗ ಮಾಡಲೇಬೇಕು’ ಎಂದು ಶಿವಕುಮಾರ್ ತಿಳಿಸಿದರು.
‘ತ್ಯಾಜ್ಯ ಬಳಕೆದಾರರ ಶುಲ್ಕ: ಬಿಜೆಪಿಯವರೊಂದಿಗೆ ಚರ್ಚೆ’
‘ಘನತ್ಯಾಜ್ಯ ನಿರ್ವಹಣೆಗೆ ಬಳಕೆದಾರರ ಶುಲ್ಕ ವಿಧಿಸಿರುವ ಬಗ್ಗೆ ಬಿಜೆಪಿಯವರು ಪ್ರಸ್ತಾವ ಸಲ್ಲಿಸಿದ್ದಾರೆ. ಅದನ್ನು ಪರಿಶೀಲಿಸಿ ಅವರೊಂದಿಗೆ ಮಾತುಕತೆ ಮಾಡುತ್ತೇನೆ. ಅವರ ಅಭಿಪ್ರಾಯಕ್ಕೂ ಗೌರವ ನೀಡುತ್ತೇನೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು. ‘ಬಳಕೆದಾರರ ಶುಲ್ಕ ವಿಧಿಸುವ ಬಗ್ಗೆ ಅವರ ಕಾಲದಲ್ಲೇ ತೆಗೆದುಕೊಂಡ ತೀರ್ಮಾನವನ್ನು ನಾವು ಬಿಜೆಪಿಯವರಿಗೆ ಮನವರಿಕೆ ಮಾಡಿಕೊಡುತ್ತೇವೆ’ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.