ADVERTISEMENT

ಬೆಂಗಳೂರು| ಪ್ರೇಮಿಗಳ ದಿನದಂದು ಅತ್ಯಾಚಾರ ಆರೋಪ: ಇಬ್ಬರ ವಿರುದ್ಧ ಎಫ್ಐಆರ್

ಯುವತಿಯ ವಿರುದ್ಧ ‘ಹನಿಟ್ರ್ಯಾಪ್’ ಆರೋಪದಡಿ ಪ್ರಕರಣ ದಾಖಲು * ಮಲ್ಲೇಶ್ವರ– ಅಮೃತಹಳ್ಳಿ ಠಾಣೆಯಲ್ಲಿ ಪ್ರಕರಣ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2026, 16:15 IST
Last Updated 23 ಫೆಬ್ರುವರಿ 2026, 16:15 IST
   

ಬೆಂಗಳೂರು: ಜ್ಯೂಸ್‌ನಲ್ಲಿ ಮತ್ತುಬರುವ ಮಾತ್ರೆ ಹಾಕಿ ಯುವತಿಯ ಪ್ರಜ್ಞೆತಪ್ಪಿಸಿ ಅತ್ಯಾಚಾರ ಎಸಗಿರುವ ಆರೋಪದ ಅಡಿ ಇಬ್ಬರ ವಿರುದ್ಧ ಅಮೃತಹಳ್ಳಿ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಡಿಕ್ಸನ್ ಸಂದ್ರ ಹಾಗೂ ನಿಖಿಲ್‌ ಅವರ ವಿರುದ್ಧ ಎಫ್‌ಐಆರ್‌ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ತಮಿಳುನಾಡಿನ 19 ವರ್ಷದ ಯುವತಿ ನೀಡಿದ ದೂರಿನ ಮೇಲೆ ಪ್ರಕರಣ ದಾಖಲಾಗಿದೆ. ಫೆ.14ರಂದು ಜಕ್ಕೂರಿನ ವಿಲ್ಲಾಕ್ಕೆ ಕರೆದೊಯ್ದು ಸ್ನೇಹಿತರು ಕೃತ್ಯ ಎಸಗಿದ್ದಾರೆಂದು ಯುವತಿ ದೂರು ನೀಡಿದ್ದಾರೆ ಎಂದು ಪೊಲೀಸರು ಹೇಳಿದರು.

ಇಬ್ಬರ ವಿರುದ್ಧ ಫೆ.22ರಂದು ಎಫ್​​ಐಆರ್​​ ದಾಖಲಾಗಿದೆ. ಇದಕ್ಕೂ ಮುನ್ನ ಅಂದರೆ ಫೆ.21ರಂದು ಮಲ್ಲೇಶ್ವರ ಪೊಲೀಸ್ ಠಾಣೆಯಲ್ಲಿ ಯುವತಿ ವಿರುದ್ಧ ‘ಹನಿಟ್ರ್ಯಾಪ್’ ಆರೋಪದಡಿ ಪ್ರಕರಣ ದಾಖಲಾಗಿದೆ. ಎರಡು ದೂರುಗಳನ್ನು ಆಧರಿಸಿ ಅಮೃತಹಳ್ಳಿ ಹಾಗೂ ಮಲ್ಲೇಶ್ವರ ಠಾಣೆಯ ಪೊಲೀಸರು, ಪ್ರತ್ಯೇಕವಾಗಿ ತನಿಖೆ ನಡೆಸುತ್ತಿದ್ದಾರೆ ಎಂದು ಮೂಲಗಳು ಹೇಳಿವೆ. 

ADVERTISEMENT

‘ನಗರದ ಖಾಸಗಿ ಕಾಲೇಜಿನಲ್ಲಿ ವಿದ್ಯಾರ್ಥಿನಿ ಓದುತ್ತಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ಡಿಕ್ಸನ್‌ ಸಂದ್ರ ಅವರು ಯುವತಿಗೆ ಪರಿಚಯವಾಗಿದ್ದರು. ಬಳಿಕ, ಕೋರಮಂಗಲದ ಕೆಫೆಯಲ್ಲಿ ಇಬ್ಬರೂ ಭೇಟಿಯಾಗಿದ್ದರು. ಈ ವೇಳೆ ಆರೋಪಿ ಪ್ರೇಮ ನಿವೇದನೆ ಮಾಡಿಕೊಂಡಿದ್ದರು. ಯುವತಿ ಸಹ ಒಪ್ಪಿದ್ದರು. ಫೆ.14ರಂದು ಡಿಕ್ಸನ್‌ ಸಂದ್ರ ಜಕ್ಕೂರಿನಲ್ಲಿರುವ ವಿಲ್ಲಾವೊಂದಕ್ಕೆ ಬರುವಂತೆ ಕರೆ ಮಾಡಿದ್ದರು. ಸ್ನೇಹಿತೆಯಾದ ಸಂತ್ರಸ್ತೆ ವಿಲ್ಲಾಗೆ ಹೋಗಿದ್ದರು. ಈ ವೇಳೆ ಡಿಕ್ಸನ್ ಹಾಗೂ ನಿಖಿಲ್ ಬಲವಂತವಾಗಿ ಮತ್ತುಬರುವ ಮಾತ್ರೆ ತಿನ್ನಿಸಿ ಅತ್ಯಾಚಾರ ಎಸಗಿದ್ದಾರೆಂದು ಯುವತಿ ದೂರು ನೀಡಿದ್ದು, ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಅರೆ ಪ್ರಜ್ಞಾವಸ್ಥೆಯಲ್ಲಿದ್ದಾಗ ಡಿಕ್ಸನ್ ಹಾಗೂ ನಿಖಿಲ್‌ ಲೈಂಗಿಕವಾಗಿ ಪ್ರಚೋದನೆ ಮಾಡಿ, ನನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ. ಬಳಿಕ ನಡೆದ ಘಟನೆಯ ಕುರಿತು ಯಾರಿಗೂ ಹೇಳದಂತೆ ಜೀವ ಬೆದರಿಕೆ ಹಾಕಿದ್ದಾರೆ. ನಡೆದಿರುವ ಘಟನೆಯಿಂದ ಆಘಾತಕ್ಕೊಳಗಾಗಿದ್ದೆ. ನಂತರ, ಸಹೋದರನ ಸೂಚನೆಯಂತೆ ದೂರು ನೀಡುತ್ತಿರುವುದಾಗಿ ಸಂತ್ರಸ್ತೆ ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ’ ಎಂದು ಮೂಲಗಳು ಹೇಳಿವೆ.

ಯುವತಿ ವಿರುದ್ಧವೂ ಎಫ್‌ಐಆರ್, ಒಬ್ಬನ ಬಂಧನ 

‘ಹನಿಟ್ರ್ಯಾಪ್‌’ ಮಾಡಿ ಹಣಕ್ಕೆ ಬೇಡಿಕೆಯಿಟ್ಟ ಆರೋಪದಡಿ ಮಲ್ಲೇಶ್ವರ ಠಾಣೆಗೆ ನಿಖಿಲ್‌ ಅವರು ದೂರು ನೀಡಿದ್ದು, ಯುವತಿಯ ವಿರುದ್ಧವೂ ಎಫ್‌ಐಆರ್‌ ದಾಖಲಾಗಿದೆ.

ನಿಖಿಲ್‌ ನೀಡಿದ ದೂರಿನ ಮೇಲೆ ಯುವತಿ ಮತ್ತು ಖಾಸಗಿ ಸುದ್ದಿವಾಹಿನಿಯ ಇಮ್ರಾನ್‌ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

‘ಇಮ್ರಾನ್‌ ಅವರನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ಮಂಗಳವಾರ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗುವುದು’ ಎಂದು ಪೊಲೀಸರು ಹೇಳಿದರು.

ಸ್ನೇಹಿತ ಡಿಕ್ಸನ್‌ ಸಂದ್ರನ ಮೂಲಕ ಪರಿಚಯವಾದ ಯುವತಿ ಹಾಗೂ ಖಾಸಗಿ ವಾಹಿನಿಯ ಸಿಬ್ಬಂದಿ ಹೆಸರಿನಲ್ಲಿ ಕರೆ ಮಾಡಿಸಿ, ಬೆದರಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಫೆ.14ರಂದು ಜಕ್ಕೂರಿನಲ್ಲಿ ಇರುವ ವಿಲ್ಲಾದಲ್ಲಿ ಪಾರ್ಟಿ ಮಾಡುವಾಗ ಯುವತಿ ಸಲುಗೆಯಿಂದ ವರ್ತಿಸುತ್ತಿದ್ದರು. ಅದೇ ದಿನ ಆಕೆಯನ್ನು ಕಾರಿನಲ್ಲಿ ಕರೆತಂದು ಸುರಕ್ಷಿತವಾಗಿ ರಾಜಾಜಿನಗರದ ವಾರಿಯರ್ ಬೇಕರಿ ಬಳಿ ಬಿಟ್ಟು ಹೋಗಿದ್ದೆ.

ನಂತರ, ಇನ್‌ಸ್ಟಾಗ್ರಾಂನಲ್ಲಿ ವಿಡಿಯೊವೊಂದನ್ನು ಹಾಕಿ ಸುಳ್ಳು ಆರೋಪ ಮಾಡಿದ್ದಾರೆ. ನಂತರ, ಖಾಸಗಿ ವಾಹಿನಿಯ ಪ್ರತಿನಿಧಿಯ ಹೆಸರಿನಲ್ಲಿ ಇಮ್ರಾನ್ ಅವರ ಮೂಲಕ ಕರೆ ಮಾಡಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದರು ಎಂದು ನಿಖಿಲ್‌ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.