ಬೆಂಗಳೂರು: ಪೀಣ್ಯ, ಯಲಹಂಕ, ಕಾಮಾಕ್ಷಿಪಾಳ್ಯ, ಯಶವಂತಪುರ ಸಂಚಾರ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಬುಧವಾರ ರಾತ್ರಿ ಹಾಗೂ ಗುರುವಾರ ಬೆಳಿಗ್ಗೆ ಸಂಭವಿಸಿದ ನಾಲ್ಕು ಪ್ರತ್ಯೇಕ ಅಪಘಾತಗಳಲ್ಲಿ ವಿದ್ಯಾರ್ಥಿನಿ ಸೇರಿ ನಾಲ್ವರು ಮೃತಪಟ್ಟಿದ್ದಾರೆ.
ಯಲಹಂಕದ ಕೋಗಿಲು ಕ್ರಾಸ್‌ನ ಮಾರುತಿನಗರದ ಸಮೀಪ ಬಿಎಂಟಿಸಿ ಬಸ್‌ನ ಚಕ್ರ ಹರಿದು ವಿದ್ಯಾರ್ಥಿನಿ ತನ್ವಿಕೃಷ್ಣ (10) ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ತನ್ವಿಕೃಷ್ಣ ಐದನೇ ತರಗತಿಯಲ್ಲಿ ಓದುತ್ತಿದ್ದಳು.
ಕೋಗಿಲು ಕ್ರಾಸ್ ನಿವಾಸಿ ಹರ್ಷಿತಾ ಅವರು ಇಬ್ಬರು ಮಕ್ಕಳನ್ನು ಶಾಲೆಗೆ ಬಿಡಲು ಗುರುವಾರ ಬೆಳಿಗ್ಗೆ ಸ್ಕೂಟರ್ನಲ್ಲಿ ಹೋಗುತ್ತಿದ್ದರು. ಮಾರುತಿನಗರದ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ ಬಳಿ ಸ್ಕೂಟರ್ ನಿಯಂತ್ರಣ ಕಳೆದುಕೊಂಡು ಮೂವರು ಕೆಳಕ್ಕೆ ಬಿದ್ದಿದ್ದರು. ಹಿಂದಿನಿಂದ ವೇಗವಾಗಿ ಬಂದ ಬಿಎಂಟಿಸಿ ಬಸ್ ಬಾಲಕಿ ತನ್ವಿಕೃಷ್ಣ ಮೇಲೆ ಹರಿದ ಪರಿಣಾಮ ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಾಳೆ ಎಂದು ಸಂಚಾರ ಪೊಲೀಸರು ಹೇಳಿದರು.
‘ಗುರುವಾರ ಬೆಳಿಗ್ಗೆ 8.20ರ ಸುಮಾರಿಗೆ ಈ ಅಪಘಾತ ಸಂಭವಿಸಿದೆ. ಯಲಹಂಕದಿಂದ ಶಿವಾಜಿನಗರದ ಕಡೆಗೆ ಬಿಎಂಟಿಸಿ ಬಸ್ ಸಂಚರಿಸುತ್ತಿತ್ತು. ದ್ವಿಚಕ್ರ ವಾಹನದ ಹಿಂಬದಿ ಕುಳಿತಿದ್ದ 10 ವರ್ಷದ ಬಾಲಕಿ ಮೃತಪಟ್ಟಿದ್ದು, ಉಳಿದ ಇಬ್ಬರಿಗೆ ಗಾಯವಾಗಿದೆ’ ಎಂದು ಸಂಚಾರ ಪೊಲೀಸರು ಹೇಳಿದರು.
ಬಸ್‌ನಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾದ ದೃಶ್ಯಾವಳಿಗಳ ಪರಿಶೀಲನೆ ನಡೆಸಲಾಗಿದೆ. ಬೆಳಿಗ್ಗೆ 8.18ರ ಸುಮಾರಿಗೆ ದ್ವಿಚಕ್ರ ವಾಹನ ಸವಾರರು, ತನ್ನ ಇಬ್ಬರು ಮಕ್ಕಳೊಂದಿಗೆ ಮುಖ್ಯರಸ್ತೆಗೆ ಪ್ರವೇಶಿಸಿದ್ದರು. ರಸ್ತೆ ಕಾಮಗಾರಿ ನಡೆಯುತ್ತಿದ್ದ ಹಾಗೂ ಮುಂದೆ ಇನ್ನೊಂದು ದ್ವಿಚಕ್ರ ವಾಹನ ನಿಂತಿದ್ದ ಕಾರಣಕ್ಕೆ ಬ್ರೇಕ್ ಹಾಕಿ ನಿಯಂತ್ರಣ ಕಳೆದುಕೊಂಡಿದ್ದರು. ಆಗ ಬಾಲಕಿ, ಬಸ್ ಎಡಭಾಗದ ಹಿಂಬದಿಯ ಚಕ್ರದ ಅಡಿಗೆ ಬಿದ್ದಿದ್ದಳು ಎಂದು ಬಿಎಂಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.
ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು ಕುಟುಂಬದವರಿಗೆ ಹಸ್ತಾಂತರ ಮಾಡಲಾಗಿದೆ ಎಂದು ಸಂಚಾರ ವಿಭಾಗದ ಪೊಲೀಸರು ಹೇಳಿದರು. ಯಲಹಂಕ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಗರದ ವಿವಿಧೆಡೆ ಜುಲೈ 18ರಿಂದ ಆಗಸ್ಟ್ 21ರವರೆಗೆ ಬಿಎಂಟಿಸಿ ಬಸ್‍ಗಳಿಂದ ಸಂಭವಿಸಿದ ಅಪಘಾತಗಳಲ್ಲಿ ಎಂಟು ಮಂದಿ ಮೃತಪಟ್ಟಿದ್ದಾರೆ.
ಟಿಪ್ಪರ್ ಡಿಕ್ಕಿ, ಪಾದಚಾರಿ ಸಾವು: ಕಾಮಾಕ್ಷಿಪಾಳ್ಯ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬುಧವಾರ ರಾತ್ರಿ ವೇಗವಾಗಿ ಬಂದ ಟಿಪ್ಪರ್ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಪಾದಚಾರಿಯೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಕಾರ್ಮಿಕ ಬಿಸೋಜಿತ್ ಫರೀದ್ (37) ಮೃತ ಪಾದಚಾರಿ. ಕಾಮಾಕ್ಷಿಪಾಳ್ಯದಲ್ಲಿ ವಾಸವಾಗಿದ್ದ ಫರೀದ್ ಅವರು ಕೆಲಸದ ನಿಮಿತ್ತ ಹೊರಗೆ ಹೋಗಿ ಮನೆಗೆ ವಾಪಸ್ ಬರುತ್ತಿದ್ದರು. ಮಾಗಡಿ ರಸ್ತೆಯ ಅರ್ಕಾವತಿ ಆಸ್ಪತ್ರೆ ಎದುರು ವೇಗವಾಗಿ ಬಂದ ಟಿಪ್ಪರ್ ವಾಹನ ಬಿಸೋಜಿತ್ ಫರೀದ್ ಅವರಿಗೆ ಡಿಕ್ಕಿ ಹೊಡೆದು ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಚಾಲಕ ಪರಾರಿ: ಅಪಘಾತ ಸಂಭವಿಸುತ್ತಿದ್ದಂತೆ ಟಿಪ್ಪರ್ ಚಾಲಕ ವಾಹನ ನಿಲ್ಲಿಸದೇ ಚಾಲನೆ ಮಾಡಿಕೊಂಡು ಹೋಗಿದ್ದಾನೆ. ಕಾಮಾಕ್ಷಿಪಾಳ್ಯ ಸಂಚಾರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಟಿಪ್ಪರ್ ವಾಹನ ಚಾಲಕನ ಅತೀ ವೇಗವೇ ಅಪಘಾತಕ್ಕೆ ಕಾರಣ ಎಂದು ಸಂಚಾರ ಪೊಲೀಸರು ಹೇಳಿದರು.
ವೃದ್ಧೆ ಸಾವು: ಜಾಲಹಳ್ಳಿ ಜಂಕ್ಷನ್‌ನಲ್ಲಿ ರಸ್ತೆ ದಾಟುತ್ತಿದ್ದ ವೇಳೆ ಟ್ರಕ್‌ವೊಂದು ಡಿಕ್ಕಿ ಹೊಡೆದ ಪರಿಣಾಮ ಹೆಗ್ಗನಹಳ್ಳಿಯ ನಿವಾಸಿ ಮಂಜುಳಾ (63) ಅವರು ಮೃತಪಟ್ಟಿದ್ದಾರೆ.
ಮಂಜುಳಾ ಅವರು ಕುಣಿಗಲ್‌ಗೆ ಹೋಗಿ ನಗರಕ್ಕೆ ವಾಪಸ್ ಬರುತ್ತಿದ್ದರು. ಆಗ ಅಪಘಾತ ಸಂಭವಿಸಿದೆ. ಬುಧವಾರ ರಾತ್ರಿ 9ರ ಸುಮಾರಿಗೆ ಜಾಲಹಳ್ಳಿ ಕ್ರಾಸ್‌ನಲ್ಲಿ ಬಸ್ ಇಳಿದಿದ್ದರು. ಹೆಗ್ಗನಹಳ್ಳಿ ಕ್ರಾಸ್‌ಗೆ ಹೋಗಲು ಮತ್ತೊಂದು ಬಸ್ ಹತ್ತಲು ರಸ್ತೆ ದಾಟಲು ಮುಂದಾಗಿದ್ದರು. ವೇಗವಾಗಿ ಬಂದ ಟ್ರಕ್, ಮಂಜುಳಾ ಅವರಿಗೆ ಡಿಕ್ಕಿ ಹೊಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದರು ಎಂದು ಸಂಚಾರ ಪೊಲೀಸರು ಹೇಳಿದರು.
ತಕ್ಷಣವೇ ಸ್ಥಳದಲ್ಲಿದ್ದ ಸಂಚಾರ ಪೊಲೀಸರು ಅವರನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆಗೆ ದಾಖಲಿಸಿದ್ದರು. ಗುರುವಾರ ಮುಂಜಾನೆ ಮೃತಪಟ್ಟಿದ್ದಾರೆ.
ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು ಕುಟುಂಬದವರಿಗೆ ಹಸ್ತಾಂತರ ಮಾಡಲಾಗಿದೆ ಎಂದು ಪೊಲೀಸರು ಹೇಳಿದರು. ಪೀಣ್ಯ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯಶವಂತಪುರ ಮೇಲ್ಸೇತುವೆಯಿಂದ ಕೆಳಕ್ಕೆ ಬಿದ್ದು ಬೈಕ್ ಸವಾರ ಚಿತ್ರದುರ್ಗದ ಅಕ್ಷಯ್‌ರಾಮ್(23) ಮೃತಪಟ್ಟಿದ್ದಾರೆ. ಮೃತ ಯುವಕ ಟಿ.ದಾಸರಹಳ್ಳಿಯಲ್ಲಿ ನೆಲಸಿದ್ದರು. ಅಕ್ಷಯ್‌ರಾಮ್ ಅವರು ಸ್ನೇಹಿತನ ಜತೆಗೆ ಗುರುವಾರ ಮುಂಜಾನೆ ತೆರಳುತ್ತಿದ್ದರು. ಯಶವಂತಪುರ ಮೇಲ್ಸೇತುವೆಯ ತಡೆಗೋಡೆಗೆ ಬೈಕ್ ಡಿಕ್ಕಿ ಹೊಡೆದು ಅವರು ಕೆಳಕ್ಕೆ ಬಿದ್ದು ಮೃತಪಟ್ಟಿದ್ದಾರೆ. ಹಿಂಬದಿಯ ಸವಾರ ಗಾಯಗೊಂಡಿದ್ದಾರೆ. ‘ಅಕ್ಷಯ್ ಅವರು ಬೈಕ್ ಚಾಲನೆ ಮಾಡುತ್ತಿದ್ದರು. ನಿಯಂತ್ರಣ ತಪ್ಪಿ ತಡೆಗೋಡೆಗೆ ಡಿಕ್ಕಿ ಹೊಡೆದ ಪರಿಣಾಮ ಅವಘಡ ಸಂಭವಿಸಿದೆ’ ಎಂದು ಪೊಲೀಸರು ಹೇಳಿದರು. ಯಶವಂತಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.