ಬೆಂಗಳೂರು: ಚಾಮರಾಜಪೇಟೆಯಲ್ಲಿ 5ನೇ ಮುಖ್ಯರಸ್ತೆಯನ್ನು ವೈಟ್ ಟಾಪಿಂಗ್ ಕಾಮಗಾರಿಗಾಗಿ ಅಗೆಯಲಾಗಿದೆ. ಇದನ್ನು ಸರಿಪಡಿಸುವ ಮೊದಲೇ ಈ ರಸ್ತೆಯನ್ನು ಸಂಪರ್ಕಿಸುವ 6ನೇ ಅಡ್ಡರಸ್ತೆಯಲ್ಲಿಯೂ ಗುಂಡಿ ತೋಡಿರುವುದರಿಂದ ಜನರು ಸಂಚರಿಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಕಂದಕಗಳಲ್ಲಿ ವಾಹನಗಳು ಸಿಲುಕಿಕೊಳ್ಳುತ್ತಿವೆ.
ಹಲವು ರಸ್ತೆಗಳಲ್ಲಿ ಇಲ್ಲಿ ಏಕಕಾಲಕ್ಕೆ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ. ಮಳೆ ಬಂದಾಗ ಕೆಸರುಮಯ, ಬಿಸಿಲೇರಿದಾಗ ದೂಳುಮಯವಾಗುತ್ತಿವೆ. ಗುಂಡಿ ತೋಡಿ ಪೈಪ್ ಅಳವಡಿಸಿರುವ ಜಾಗಗಳಲ್ಲಿ ಮಳೆಗೆ ಮಣ್ಣು ಸಡಿಲಗೊಂಡಿದ್ದು, ವಾಹನಗಳು ಸಿಲುಕಿಕೊಳ್ಳುತ್ತಿವೆ. ಎರಡು ದಿನಗಳ ಹಿಂದೆ ಒಂದೇ ದಿನ ಎರಡು ಕಾರುಗಳು ಮತ್ತು ಒಂದು ಟ್ಯಾಂಕರ್ ಸಿಲುಕಿಕೊಂಡಿದ್ದವು. ಚಾಲಕರೊಂದಿಗೆ ಸ್ಥಳೀಯರು ಕೈಜೋಡಿಸಿ ವಾಹನಗಳನ್ನು ಹೊರತೆಗೆದಿದ್ದಾರೆ.
‘ಕೆಲವು ರಸ್ತೆ ಡಾಂಬರೀಕರಣವಾಗಿ ವರ್ಷ ಕೂಡ ಆಗಿಲ್ಲ. ಮತ್ತೆ ಅಗೆದು ಹಾಕಿದ್ದಾರೆ. ಅಗೆಯುವುದಿದ್ದರೆ ಡಾಂಬರ್ ಯಾಕೆ ಹಾಕಬೇಕಿತ್ತು. ಏನು ಮಾಡುತ್ತಿದ್ದಾರೆ ಎಂಬುದೇ ಗೊತ್ತಾಗುತ್ತಿಲ್ಲ’ ಎಂದು ಸ್ಥಳೀಯರು ದೂರಿದರು.
‘ನಮ್ಮ ಅಂಗಡಿಯ ಮುಂದೆ ಅಗೆದು ಹಾಕಿ ಹೋಗಿದ್ದರು. ಇಲ್ಲಿ ಹಾಸುಕಲ್ಲುಗಳನ್ನು ಮತ್ತೆ ಅಳವಡಿಸಿ, ಇಲ್ಲದೇ ಇದ್ದರೆ ಅಂಗಡಿಗೆ ಯಾರೂ ಬರುವುದಿಲ್ಲ ಎಂದು ಕೇಳಿಕೊಂಡರೂ ಪ್ರಯೋಜನವಾಗಿಲ್ಲ. ಕೊನೆಗೆ ₹ 10 ಸಾವಿರ ನೀಡಿ ಹಾಸುಕಲ್ಲು ಹಾಕಿಸಬೇಕಾಯಿತು’ ಎಂದು ಅಂಗಡಿಯವರೊಬ್ಬರು ಅಸಮಾಧಾನ ತೋಡಿಕೊಂಡರು.
ಬಿಬಿಎಂಪಿಯಿಂದ ವೈಟ್ ಟಾಪಿಂಗ್ ಕಾಮಗಾರಿ, ಜಲಮಂಡಳಿಯಿಂದ ಒಳಚರಂಡಿ ಕೊಳವೆ ಮಾರ್ಗ ಅಳವಡಿಕೆ ಕಾಮಗಾರಿ ನಡೆಯುತ್ತಿದೆ. ಜೊತೆಗೆ ಮಳೆನೀರು ಚರಂಡಿಯನ್ನೂ ನಿರ್ಮಿಸಲಾಗುತ್ತಿದೆ. ಕಾಮಗಾರಿ ಏಳು ತಿಂಗಳಿನಿಂದ ನಡೆಯುತ್ತಿದೆ. ಇದು ಮುಗಿಯುವ ಲಕ್ಷಣ ಕಾಣುತ್ತಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.
ಒಂದೆಡೆ ದೂಳು ಹಾರುತ್ತಿದ್ದರೆ, ಅದರ ಮಧ್ಯೆಯೇ ನಿಂತು ವ್ಯಾಪಾರಿಗಳು ತರಕಾರಿ, ಹಣ್ಣುಗಳನ್ನು ಮಾರಾಟ ಮಾಡುತ್ತಿದ್ದಾರೆ. ಡಾಂಬರನ್ನು ರಸ್ತೆ ಬದಿಯಲ್ಲೇ ಸುರಿಯಲಾಗಿದೆ. ಗಿಡಮರಗಳನ್ನು ಕಡಿದು ಇಲ್ಲೇ ರಾಶಿ ಹಾಕಲಾಗಿದೆ. ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನದಡಿ ನಿರ್ಮಿಸಲಾಗಿರುವ ಬಸ್ ತಂಗುದಾಣ ಈ ಕಸದ ರಾಶಿಯ ಮಧ್ಯೆ ಕಾಣದಂತಾಗಿದೆ.
‘ಮುಂದಿನ 30 ವರ್ಷ ಈ ರಸ್ತೆಗಳನ್ನು ಮತ್ತೆ ಅಗೆಯಬಾರದು. ರಸ್ತೆ ಕೆಟ್ಟು ಹೋಗಬಾರದು ಎಂಬ ಉದ್ದೇಶ ಇಟ್ಟುಕೊಂಡು ವೈಟ್ ಟಾಪಿಂಗ್ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಒಳಚರಂಡಿ ಮಂಡಳಿ, ಬೆಸ್ಕಾಂ ಸಹಿತ ವಿವಿಧ ಇಲಾಖೆಗಳು ಸೇರಿ ಯೋಜನೆ ಹಮ್ಮಿಕೊಳ್ಳಲಾಗಿದೆ. ಪ್ರತಿಕೂಲ ಹವಾಮಾನದ ನಡುವೆ ಕೆಲಸ ಮಾಡಲಾಗುತ್ತಿದೆ. ಕಾಮಗಾರಿ ನಡೆಯುತ್ತಿರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗಿದೆ. ಕೆಲವೇ ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದ್ದು, ಸುಸಜ್ಜಿತ ರಸ್ತೆಗಳು ನಿರ್ಮಾಣಗೊಳ್ಳಲಿವೆ’ ಎಂದು ಬೆಂಗಳೂರು ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿಯ ಎಂಜಿನಿಯರ್ ಮತ್ತು ಬಿಬಿಎಂಪಿ ಎಂಜಿನಿಯರ್‌ಗಳು ಪ್ರತಿಕ್ರಿಯಿಸಿದರು.
ಇಲ್ಲಿ ಶ್ರೀರಾಮ ಶಿಶುವಿಹಾರ ಶಕುಂತಲಾದೇವಿ ಹಿರಿಯ ಪ್ರಾಥಮಿಕ ಶಾಲೆ ಲಕ್ಷ್ಮೀದೇವಿ ರಾಮಣ್ಣ ಪ್ರೌಢಶಾಲೆಗಳಿವೆ. ಶಾಲೆಗೆ ಪ್ರವೇಶವೇ ಇಲ್ಲದಂತೆ ಅಗೆದು ಹಾಕಿದ್ದಾರೆ. ಪಕ್ಕದಲ್ಲೇ ಇರುವ ಸಿದ್ದಾರೂಢ ಪ್ರೌಢಶಾಲೆಯ ಬಳಿ ದೊಡ್ಡ ಹೊಂಡವನ್ನೇ ತೋಡಿದ್ದಾರೆ. ಹೀಗೆ ಮಾಡಿದರೆ ಮಕ್ಕಳು ಶಿಕ್ಷಕರು ಶಾಲೆಗೆ ಬರುವುದು ಹೇಗೆ? ಮಕ್ಕಳನ್ನು ಕರೆದುಕೊಂಡು ಹೋಗಲು ಹೆತ್ತವರು ಬರುವುದು ಹೇಗೆ?-ಗೌರಮ್ಮ ಸ್ಥಳೀಯರು
ಒಂದು ಕಡೆ ಅಗೆದು ಪೈಪ್ ಅಳವಡಿಸಿ ಸರಿಯಾಗಿ ಮುಚ್ಚಿ ಮುಂದಕ್ಕೆ ಸಾಗಿದರೆ ಇಷ್ಟು ಸಮಸ್ಯೆ ಆಗುತ್ತಿರಲಿಲ್ಲ. ಎಲ್ಲ ಕಡೆ ಅಗೆದು ಹೋಗಿ ಬಿಡುತ್ತಾರೆ. ಆಮೇಲೆ ಇನ್ನಾವತ್ತೋ ಒಂದು ದಿನ ಬಂದು ಪೈಪ್ ಅಳವಡಿಸುತ್ತಾರೆ. ಸರಿಯಾಗಿ ಮಣ್ಣು ಹಾಕಿ ಮುಚ್ಚುವುದೂ ಇಲ್ಲ. ಮಣ್ಣು ಒಟ್ಟಾರೆ ಹಾಕುವ ಬದಲು ಜೆಸಿಬಿಯಲ್ಲಿ ಸಮತಟ್ಟುಗೊಳಿಸಿ ಅಂದರೂ ಕೇಳುವುದಿಲ್ಲ. ಸಂಚಾರಕ್ಕೆ ತೊಡಕಾಗಿದೆ. ಜನರಿಗೆ ನಡೆದಾಡಲೂ ಕಷ್ಟವಾಗಿದೆ.-ಲೋಕೇಶ್ ಟೈಲರ್
ನಾವು ಅಭಿವೃದ್ಧಿಯನ್ನು ವಿರೋಧಿಸುತ್ತಿಲ್ಲ. ಆದರೆ ನಿಧಾನವಾಗಿ ಕಾಮಗಾರಿ ನಡೆಸುತ್ತಿರುವುದರಿಂದ ಉಂಟಾಗುತ್ತಿರುವ ಸಮಸ್ಯೆಗಳ ಬಗ್ಗೆ ಹೇಳಿಕೊಳ್ಳುತ್ತಿದ್ದೇವೆ. ಈ ರೀತಿ ಮಣ್ಣು ಅಗೆದು ಹಾಕಿ ಹೋದರೆ ನಾವೆಲ್ಲ ಅತ್ತಿತ್ತ ಹೋಗುವುದು ಹೇಗೆ? ಮನೆಗಳಿಗೆ ಅಂಗಡಿಗಳಿಗೆ ಹೋಗದ ಹಾಗೆ ಮಾಡಿದ್ದಾರೆ. ಆದಷ್ಟು ಬೇಗ ಕಾಮಗಾರಿಯನ್ನು ಪೂರ್ಣಗೊಳಿಸಿ ಜನರಿಗೆ ಆಗುತ್ತಿರುವ ತೊಂದರೆಗಳನ್ನು ತಪ್ಪಿಸಬೇಕು.-ರಾಜು, ವ್ಯಾಪಾರಸ್ಥರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.