ADVERTISEMENT

ಚಿನ್ನ ಬಿಡಿಸಿಕೊಡುವ ನೆಪದಲ್ಲಿ ಹಣ ದರೋಡೆ| ಗುತ್ತಿಗೆದಾರ ಬಂಧನ: ₹4 ಲಕ್ಷ ಜಪ್ತಿ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2025, 14:45 IST
Last Updated 14 ಡಿಸೆಂಬರ್ 2025, 14:45 IST
<div class="paragraphs"><p>ಬಂಧನ (ಸಾಂದರ್ಭಿಕ ಚಿತ್ರ)</p></div>

ಬಂಧನ (ಸಾಂದರ್ಭಿಕ ಚಿತ್ರ)

   

ಬೆಂಗಳೂರು: ಹಣಕಾಸು ಸಂಸ್ಥೆಯೊಂದರ ಉದ್ಯೋಗಿಗಳನ್ನು ಅಡ್ಡಗಟ್ಟಿ ಹಲ್ಲೆ ನಡೆಸಿ ₹6.5 ಲಕ್ಷ ದರೋಡೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಹೆಣ್ಣೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬೆಸ್ಕಾಂ ಗುತ್ತಿಗೆದಾರ ನಾರಾಯಣ ಮೂರ್ತಿ ಎಂಬಾತನನ್ನು ಬಂಧಿಸಿ, ₹4 ಲಕ್ಷ ನಗದು ಜಪ್ತಿ ಮಾಡಲಾಗಿದೆ. ಪ್ರಕರಣದಲ್ಲಿ ಭಾಗಿಯಾಗಿದ್ದ ಇಬ್ಬರು ಆರೋಪಿಗಳು ನಾಪತ್ತೆಯಾಗಿದ್ದು, ಅವರಿಗೆ ಶೋಧ ಕಾರ್ಯ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಆರೋಪಿ ನಾರಾಯಣಮೂರ್ತಿ ಅಡವಿಟ್ಟಿದ್ದ ಚಿನ್ನ ಬಿಡಿಸಿಕೊಡುವುದಾಗಿ ಮೈಸೂರಿನ ಡಿಜಿಎಫ್‌ ಕಂಪನಿಯ ಯೋಗೇಶ್‌ ಮತ್ತು ರಾಮಲಿಂಗ ಅವರನ್ನು ನಂಬಿಸಿ ನಗರಕ್ಕೆ ಕರೆಸಿಕೊಂಡು, ಹಣ ದರೋಡೆ ಮಾಡಿದ್ದರು ಎಂದು ಹೇಳಿದರು.

ಯೋಗೇಶ್ ಕೆಲಸ ಮಾಡುತ್ತಿರುವ ಡಿಜಿಎಫ್ ಕಂಪನಿಯವರು ಕರೆ ಮಾಡಿ, ನಾರಾಯಣಮೂರ್ತಿ ಅವರಿಂದ 69 ಗ್ರಾಂ ಚಿನ್ನ ಬಿಡಿಸಿಕೊಂಡು ಬರುವಂತೆ ಹೇಳಿದ್ದರು. ಹಾಗಾಗಿ ಯೋಗೇಶ್ ತನ್ನ ಸಹದ್ಯೋಗಿ ರಾಮಲಿಂಗ ಜತೆ ಸೇರಿ, ಸಂಸ್ಥೆಯ ಕ್ಯಾಷಿಯರ್ ಅವರಿಂದ ₹6.5 ಲಕ್ಷ ನಗದು ತೆಗೆದುಕೊಂಡು ಬಂದರು.  

ಹೆಣ್ಣೂರು ಮುಖ್ಯರಸ್ತೆಯ ಸಿಎಸ್‌ಬಿ ಬ್ಯಾಂಕ್ ಬಳಿ ಭೇಟಿಯಾದ ನಾರಾಯಣಮೂರ್ತಿ, 69 ಗ್ರಾಂ ಚಿನ್ನದ ಬದಲಾಗಿ 39 ಗ್ರಾಂ ಚಿನ್ನ ಬಿಡಿಸಿಕೊಡುವುದಾಗಿ ಮಾತು ಬದಲಿಸಿದ್ದ. ಬಳಿಕ ಹಣವನ್ನು ತನಗೆ ಕೊಡುವಂತೆ ಯೋಗೇಶ್ ಅವರನ್ನು ಕೇಳಿದ್ದ. ಅನುಮಾನಗೊಂಡು ಹಣ ನೀಡದೇ, ಇಬ್ಬರು ಅಲ್ಲಿಂದ ಹೆಣ್ಣೂರು ಬಂಡೆಯ ಬಸ್ ನಿಲ್ದಾಣ ಬಳಿ ಆಟೊದಲ್ಲಿ ತೆರಳುವಾಗ, ಬೈಕ್‌ನಲ್ಲಿ ಬಂದ ಅಪರಿಚಿತರಿಬ್ಬರು ಅಡ್ಟಗಟ್ಟಿ ಹಲ್ಲೆ ನಡೆಸಿದ್ದರು. ನಂತರ ಅಲ್ಲಿಗೆ ಬಂದ ನಾರಾಯಮೂರ್ತಿ ₹6.5 ಲಕ್ಷ ನಗದು ಕಿತ್ತುಕೊಂಡರು. ಒಟ್ಟಿಗೆ ಮೂವರು ಪರಾರಿಯಾಗಿದ್ದರು.

ಹಣ ಕಳೆದುಕೊಂಡ ಯೋಗೇಶ್ 112ಕ್ಕೆ ಕರೆ ಮಾಡಿ ಮಾಹಿತಿ ನೀಡಿದ್ದರು. ಹೆಣ್ಣೂರು ಪೊಲೀಸರು ಕಾರ್ಯಾಚರಣೆ ನಡೆಸಿ, ಆರೋಪಿಯನ್ನು ಬಂಧಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.