ಬೆಂಗಳೂರು: ಬೆಂಗಳೂರು ದಕ್ಷಿಣ (ಜಯನಗರ) ಪ್ರಾದೇಶಿಕ ಸಾರಿಗೆ ಕಚೇರಿಯನ್ನು ಅಂಜನಾಪುರದಲ್ಲಿ ನಿರ್ಮಿಸಲಾಗಿರುವ ನೂತನ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ. ಹೊಸ ಕಚೇರಿಯನ್ನು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಶನಿವಾರ ಉದ್ಘಾಟಿಸಿದರು.
ಬೆಂಗಳೂರು ದಕ್ಷಿಣ ಕೆಎ-05, ಜಯನಗರ ಕಚೇರಿಯು 1981ರಲ್ಲಿ ಪ್ರಾರಂಭವಾಗಿತ್ತು. 2011ರಿಂದ ಜಯನಗರ ಬಿಎಂಟಿಸಿ ಬಸ್ ನಿಲ್ದಾಣದ ಕಾಂಪ್ಲೆಕ್ಸ್‌ನಲ್ಲಿ ಕಚೇರಿ ಕಾರ್ಯ ನಿರ್ವಹಿಸುತ್ತಿತ್ತು. ಇದೀಗ ಅಂಜನಾಪುರದಲ್ಲಿ ಇಲಾಖೆ ಸ್ವಂತ ಕಟ್ಟಡ ನಿರ್ಮಿಸಿದ್ದು, ಅಲ್ಲಿಯೇ ಕಚೇರಿ ಕಾರ್ಯಗಳು ನಡೆಯಲಿವೆ. ದಾಖಲೆಗಳನ್ನು ಸ್ಥಳಾಂತರ ಮಾಡಲಾಗುತ್ತಿದ್ದು, ಇನ್ನು ಒಂದು ತಿಂಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಹೊಸ ಕಟ್ಟಡದಲ್ಲಿ ಕಚೇರಿ ಕಾರ್ಯ ನಿರ್ವಹಿಸಲಿದೆ ಎಂದು ಸಾರಿಗೆ ಅಧಿಕಾರಿಗಳು ಮಾಹಿತಿ ನೀಡಿದರು.
ಮೂರು ಅಂತಸ್ತಿನ ಈ ಕಟ್ಟಡವು 38,793 ಚದರಡಿ ವಿಸ್ತೀರ್ಣ ಹೊಂದಿದ್ದು, ₹11.25 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ ಎಂದು ತಿಳಿಸಿದರು.
ಶಾಸಕ ಕೃಷ್ಣಪ್ಪ, ಸಾರಿಗೆ ಇಲಾಖೆಯ ಹೆಚ್ಚುವರಿ ಆಯುಕ್ತರಾದ ಸಿ. ಮಲ್ಲಿಕಾರ್ಜುನ, ಉಮಾಶಂಕರ್ ಬಿ.ಪಿ., ಜ್ಞಾನೇಂದ್ರ ಕುಮಾರ್, ಪುರುಷೋತ್ತಮ್, ಓಂಕಾರೇಶ್ವರಿ, ಪ್ರಾದೇಶಿಕ ಸಾರಿಗೆ ಅಧಿಕಾರಿಗಳಾದ ರಮೇಶ್ ವಿ.ಪಿ., ದೀಪಕ್, ಶ್ರೀನಿವಾಸ್, ಶ್ರೀನಿವಾಸ್ ಪ್ರಸಾದ್ ಉಪಸ್ಥಿತರಿದ್ದರು.
18.54 ಲಕ್ಷ ವಾಹನ ನೋಂದಣಿ: ಬೆಂಗಳೂರು ದಕ್ಷಿಣ (ಜಯನಗರ) ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಇದುವರೆಗೆ ಒಟ್ಟು 18,54,982 ವಾಹನಗಳು ನೋಂದಣಿಯಾಗಿವೆ. ಈ ಕಚೇರಿ ವ್ಯಾಪ್ತಿಯಲ್ಲಿ 70 ವಾಹನ ತರಬೇತಿ ಶಾಲೆಗಳು, 36 ವಾಯುಮಾಲಿನ್ಯ ತಪಾಸಣಾ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.