
ರೆಸಿಡೆನ್ಸಿ ರಸ್ತೆಯಲ್ಲಿನ ಸಂಚಾರ ದಟ್ಟಣೆ
ಪ್ರಜಾವಾಣಿ ಚಿತ್ರ: ಪ್ರಶಾಂತ್ ಎಚ್.ಜಿ.
ಬೆಂಗಳೂರು: ಭಾರತದ ಐ.ಟಿ ಕೇಂದ್ರವಾದ ಬೆಂಗಳೂರು ಜಾಗತಿಕವಾಗಿ ಎರಡನೇ ಅತಿ ಹೆಚ್ಚು ವಾಹನದಟ್ಟಣೆಯ ನಗರ ಎಂದು ನೆದರ್‌ಲ್ಯಾಂಡ್‌ನ ಟಾಮ್‌ಟಾಮ್ ಸಂಸ್ಥೆ ಬಿಡುಗಡೆ ಮಾಡಿರುವ ಸಂಚಾರ ಸೂಚ್ಯಂಕದಲ್ಲಿ ಉಲ್ಲೇಖಿಸಲಾಗಿದೆ. ಮೆಕ್ಸಿಕೊ ಮೊದಲ ಸ್ಥಾನದಲ್ಲಿದೆ.
ಬೆಂಗಳೂರಿನಲ್ಲಿ ಸರಾಸರಿ ದಟ್ಟಣೆಯು ಶೇ 74.4ರಷ್ಟಿದೆ. 2024ಕ್ಕೆ ಹೋಲಿಸಿದರೆ 2025ರಲ್ಲಿ ಶೇ 1.7ರಷ್ಟು ಹೆಚ್ಚಾಗಿದೆ. ಚಾಲಕರು 15 ನಿಮಿಷಗಳಲ್ಲಿ ಸರಾಸರಿ 4.2 ಕಿ.ಮೀ. ದೂರವನ್ನಷ್ಟೇ ಕ್ರಮಿಸಲು ಸಾಧ್ಯವಾಗಿದೆ. 10 ಕಿ.ಮೀ. ಸಾಗಲು ಸರಾಸರಿ 36 ನಿಮಿಷ ಒಂಬತ್ತು ಸೆಕೆಂಡ್ಸ್ ತೆಗೆದುಕೊಂಡಿತ್ತು. ದಟ್ಟಣೆ ಸಮಯದಲ್ಲಿ ಗಂಟೆಗೆ ಸರಾಸರಿ 13.9 ಕಿ.ಮೀ.ಗೆ ಇಳಿದಿತ್ತು ಎಂದು ವರದಿ ತಿಳಿಸಿದೆ.
2025ರ ಮೇ 17ರಂದು ನಗರದಲ್ಲಿ ಪ್ರಯಾಣದ ಅನುಭವ ತುಂಬಾ ಕೆಟ್ಟದಾಗಿತ್ತು ಎಂದು ಗುರುತಿಸಲಾಗಿದೆ. ದಟ್ಟಣೆಯ ಮಟ್ಟವು ಶೇ 101ರಷ್ಟಿತ್ತು. ಆ ದಿನ ಸಂಜೆ 6ಕ್ಕೆ ದಟ್ಟಣೆ ಪ್ರಮಾಣವು ಶೇ 183ಕ್ಕೆ ಏರಿತು. 2.5 ಕಿ.ಮೀ. ಕ್ರಮಿಸಲು 15 ನಿಮಿಷ ತೆಗೆದುಕೊಂಡಿದೆ ಎಂದು ಉಲ್ಲೇಖಿಸಲಾಗಿದೆ.
ಬೆಂಗಳೂರು ಅಲ್ಲದೇ ಭಾರತದ ಆರು ನಗರಗಳು ಜಾಗತಿಕವಾಗಿ ಅಗ್ರ 35 ನಗರಗಳ ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ಪುಣೆ ಶೇಕಡ 71.1 ರಷ್ಟು ದಟ್ಟಣೆಯೊಂದಿಗೆ ಐದನೇ ಸ್ಥಾನದಲ್ಲಿದೆ. ಮುಂಬೈ ಶೇ 63.2 (18ನೇ ಸ್ಥಾನ), ನವದೆಹಲಿ ಶೇ 60.2(23ನೇ ಸ್ಥಾನ), ಕೋಲ್ಕತ್ತ ಶೇ 58.9(29ನೇ ಸ್ಥಾನ), ಜೈಪುರ ಶೇ 58.7 (30ನೇ ಸ್ಥಾನ) ಮತ್ತು ಚೆನ್ನೈ ಶೇ 58.6ರಷ್ಟು(32ನೇ ಸ್ಥಾನ) ಜನದಟ್ಟಣೆಯನ್ನು ಹೊಂದಿದೆ.
ಪ್ರಮುಖ ಹೆದ್ದಾರಿಗಳು ಸೇರಿದಂತೆ ಸಂಪೂರ್ಣ ರಸ್ತೆ ಜಾಲವನ್ನು ಒಳಗೊಂಡಂತೆ ಮಹಾನಗರ ಮತ್ತು ನಗರ ಪ್ರದೇಶಗಳಲ್ಲಿನ ಚಾಲಕರಿಂದ ದತ್ತಾಂಶವನ್ನು ಸಂಗ್ರಹಿಸಲಾಗಿದೆ ಎಂದು ಟಾಮ್‌ಟಾಮ್ ತಿಳಿಸಿದೆ.
ವಿಶ್ವದ ನಗರಗಳಲ್ಲಿ ಪ್ರಯಾಣಕ್ಕೆ ತೆಗೆದುಕೊಳ್ಳುವ ಸರಾಸರಿ ಸಮಯ ಮತ್ತು ದಟ್ಟಣೆ ಮಟ್ಟವನ್ನು ಆಧರಿಸಿ ಮೌಲ್ಯಮಾಪನ ಮಾಡಲಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.