
ಐಪಿಎಲ್ ವಿಜೇತ ತಂಡಕ್ಕೆ ವಿಧಾನಸೌಧದ ಮುಂಭಾಗದಲ್ಲಿ ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮದ ಸಂದರ್ಭದಲ್ಲಿ ಗೇಟ್ ಹೊರಗೆ ನೆರೆದಿದ್ದ ಅಭಿಮಾನಿಗಳು
–ಪ್ರಜಾವಾಣಿ ಚಿತ್ರ: ರಂಜು ಪಿ.
ಬೆಂಗಳೂರು: ಐಪಿಎಲ್‌ನ 18ನೇ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಚಾಂಪಿಯನ್ ಆಗಿರುವ ಸಂಭ್ರಮಕ್ಕೆ ಸಾಕ್ಷಿಯಾಗಲು ರಾಜಧಾನಿಯ ದಶದಿಕ್ಕುಗಳಿಂದ ಯುವ ಅಭಿಮಾನಿಗಳು ಸಾಗರೋಪಾದಿಯಾಗಿ ನಗರದ ಹೃದಯಭಾಗಕ್ಕೆ ಹರಿದು ಬಂದಿರುವುದೇ ಅನಾಹುತಕ್ಕೆ ಕಾರಣವಾಯಿತು. ಉನ್ಮಾದದ ಅಭಿಮಾನವು 11 ಜನರನ್ನು ಸಾವಿನ ದವಡೆಗೆ ದೂಡಿತು.
ಬಸ್, ಸ್ವಂತ ವಾಹನಗಳಲ್ಲಿ ನೇರವಾಗಿ ಸಾವಿರಾರು ಜನರು ಬಂದಿದ್ದರು. ಎಲ್ಲ ರಸ್ತೆಗಳು ಚಿನ್ನಸ್ವಾಮಿ ಸ್ಟೇಡಿಯಂ ಕಡೆಗೆ ಮುಖ ಮಾಡಿದಂತಾಗಿತ್ತು. ಅಲ್ಲದೇ ನಗರದ ಹೊರಗೆಯೇ ಇಳಿದ ಜನರನ್ನು ನಾಲ್ಕು ದಿಕ್ಕುಗಳಿಂದ ಮೆಟ್ರೊ ಹೊತ್ತು ತಂದಿತ್ತು. ನಿಲ್ಲಲು ಜಾಗವೇ ಇಲ್ಲದಂತಾಗಿದ್ದ ಮೆಟ್ರೊ ಒಳಗೂ ಅಭಿಮಾನಿಗಳು ಆರ್‌ಸಿಬಿ.. ಆರ್‌ಸಿಬಿ ಎಂದು ಕೂಗಿದರು. ಕಿವಿಯ ತಮಟೆ ಒಡೆದು ಹೋಗುವಷ್ಟು ಶಬ್ದದಿಂದಾಗಿ ಪ್ರಯಾಣಿಕರು ಕಿರಿಕಿರಿ ಅನುಭವಿಸಿದರು.
‘ನಾವು ಬೆವತು ಹೋದೆವು. ಕಿವಿಮುಚ್ಚಿಕೊಂಡೇ ಪ್ರಯಾಣಿಸಬೇಕಾಯಿತು. ಕಾಲು ಇಡಲು ಜಾಗ ಇಲ್ಲದಿದ್ದರೂ ಅಭಿಮಾನಿಗಳು ಕುಣಿಯತೊಡಗಿದ್ದರಿಂದ ಮೆಟ್ರೊ ಅಲುಗಾಡಿದಂತೆ ಭಾಸವಾಯಿತು’ ಎಂದು ಬುಧವಾರ ಮಧ್ಯಾಹ್ನ ಮೆಟ್ರೊದಲ್ಲಿ ಪ್ರಯಾಣಿಸಿದವರು ಅನುಭವ ಬಿಚ್ಚಿಟ್ಟರು.
ಮಧ್ಯಾಹ್ನ ಒಂದು ಗಂಟೆಯಿಂದ ಸಂಜೆವರೆಗೆ ಪ್ರವಾಹದಂತೆ ಹರಿದು ಬಂದಿದ್ದರಿಂದ ವಿಧಾನಸೌಧದ ಎದುರು, ಚಿನ್ನಸ್ವಾಮಿ ಸ್ಟೇಡಿಯಂ ಸುತ್ತಮುತ್ತ ಲಕ್ಷಾಂತರ ಮಂದಿ ನೆರೆದಿದ್ದರು. ಸ್ಟೇಡಿಯಂ ಒಳಗೆ ನಡೆದ ಅಭಿನಂದನಾ ಕಾರ್ಯಕ್ರಮ ವೀಕ್ಷಿಸಲು ಪ್ರವೇಶ ಶುಲ್ಕ ಇಲ್ಲದೇ ಇದ್ದಿದ್ದು ಎಲ್ಲ ಗೇಟ್‌ಗಳಲ್ಲಿ ನೂಕು ನುಗ್ಗಲು ಉಂಟಾಗಲು ಕಾರಣವಾಯಿತು.
ಐಪಿಎಲ್ ಟ್ರೋಫಿಯನ್ನೇ ಹೋಲುವ ಟ್ರೋಫಿಗಳನ್ನು ಇಟ್ಟುಕೊಂಡು ಹಲವರು ಜೀಪು, ತೆರೆದ ಕಾರು, ಬೈಕ್‌ಗಳಲ್ಲಿ ಮೆರವಣಿಗೆ ಮಾಡಿದರು. ಆರ್‌ಸಿಬಿ ತಂಡದ ಚಿತ್ರವನ್ನು ಪ್ರದರ್ಶಿಸುತ್ತಾ ವಾಹನಗಳಲ್ಲಿ ಸುತ್ತಾಡಿದರು. ಆರ್‌ಸಿಬಿಯ ಆಟಗಾರರನ್ನು ಕರೆದುಕೊಂಡು ಬರಲು ಎರಡು ಬಸ್‌ಗಳು ಹೊರಟಾಗ ಜನರು ಹುಚ್ಚೆದ್ದು ಕುಣಿದಿದ್ದರು.
ಪೊಲೀಸರು ಹಾಕಿದ ಬ್ಯಾರಿಕೇಡ್‌ಗಳು ಲೆಕ್ಕಕ್ಕೇ ಸಿಗಲಿಲ್ಲ. ಹಲವೆಡೆ ಬ್ಯಾರಿಕೇಡ್‌ಗಳನ್ನು ದೂಡಿ ಕೆಳಗೆ ತಳ್ಳಲಾಗಿತ್ತು. ಹಲವರು ಬ್ಯಾರಿಕೇಡ್ ತಾಗಿ ಗಾಯಗೊಂಡರು. ಆರ್‌ಸಿಬಿ... ಆರ್‌ಸಿಬಿ ಎಂದು ಎಲ್ಲೆಡೆ ಮಾರ್ದನಿಸಿದ್ದರಿಂದ ಎಲ್ಲಿ ಏನಾಗುತ್ತಿದೆ ಎಂಬ ಮಾಹಿತಿ ಯಾರಿಗೂ ತಿಳಿಯದಂತಾಯಿತು.
ಮಧ್ಯೆ ಆಗಾಗ ಮಳೆ ಸುರಿದರೂ ಅಭಿಮಾನಗಳು ವಿಚಲಿತರಾಗದೇ ನೆರೆದಿದ್ದರು. ಚಿನ್ನಸ್ವಾಮಿ ಸ್ಟೇಡಿಯಂನ ಒಂದು ಗೇಟ್‌ನಲ್ಲಿ ಉಂಟಾದ ಸಣ್ಣ ಘಟನೆ ಹಲವು ಕಡೆ ಕಾಲ್ತುಳಿತ ಉಂಟಾಗಲು ಕಾರಣವಾಯಿತು.
ಹರಿದು ಬಂದ ಜನಸಾಗರ: ಮೆಟ್ರೊ ನಿಲುಗಡೆ ಸ್ಥಗಿತ ಆರ್‌ಸಿಬಿ ತಂಡದ ಅಭಿನಂದನೆಗಾಗಿ ಚಿನ್ನಸ್ವಾಮಿ ಕ್ರೀಡಾಂಗಣ ಮತ್ತು ವಿಧಾನಸೌಧಕ್ಕೆ ಅಭಿಮಾನಿಗಳು ಭಾರಿ ಸಂಖ್ಯೆಯಲ್ಲಿ ಮೆಟ್ರೊ ಮೂಲಕ ಬಂದಿದ್ದರಿಂದ ವಿಧಾನಸೌಧ ಮತ್ತು ಕಬ್ಬನ್ ಪಾರ್ಕ್ ಮೆಟ್ರೊ ನಿಲ್ದಾಣಗಳು ಜನರಿಂದ ತುಂಬಿ ತುಳುಕುತ್ತಿದ್ದವು. ಜನರನ್ನು ನಿಯಂತ್ರಿಸಲು ಈ ಎರಡು ನಿಲ್ದಾಣಗಳಲ್ಲಿ ರೈಲು ನಿಲುಗಡೆಯನ್ನೇ ಬಿಎಂಆರ್‌ಸಿಎಲ್ ಸ್ಥಗಿತಗೊಳಿಸಿತು.
ಎಲ್ಲ ಕಡೆಯಿಂದ ಪ್ರವಾಹದಂತೆ ಜನರು ಹರಿದುಬಂದಿದ್ದರಿಂದಾಗಿ ಮೆಜೆಸ್ಟಿಕ್‌ನ ನಾಡಪ್ರಭು ಕೆಂಪೇಗೌಡ ಇಂಟರ್‌ಚೇಂಜ್ ನಿಲ್ದಾಣದಲ್ಲಿ ನೂಕುನುಗ್ಗಲು ಉಂಟಾಯಿತು. ಹಸಿರು ಮಾರ್ಗ ಮತ್ತು ನೇರಳೆ ಮಾರ್ಗಕ್ಕೆ ಪ್ರಯಾಣ ಬದಲಾಯಿಸುವವರು ಪರದಾಡುವಂತಾಯಿತು. ಹಿರಿಯರು ಮಹಿಳೆಯರು ಮುಂದೆ ಹೋಗಲಾಗದೇ ಹಿಂದೆ ಬರಲಾರದೇ ಪ್ರಯಾಸ ಪಟ್ಟರು.
ಸಂಜೆ 4.30ರಿಂದ ಟೋಕನ್ ಕ್ಯೂಆರ್ ಟಿಕೆಟ್ ವಿತರಣೆಯನ್ನು ಕೂಡ ಸ್ಥಗಿತಗೊಳಿಸಿತು. ಇದರಿಂದಾಗಿ ಕೆ.ಆರ್. ಸರ್ಕಲ್ ಬಳಿಯ ಸರ್ ಎಂ. ವಿಶ್ವೇಶ್ವರಯ್ಯ ನಿಲ್ದಾಣ ಮತ್ತು ಎಂ.ಜಿ. ರಸ್ತೆ ನಿಲ್ದಾಣದಲ್ಲಿ ಜನದಟ್ಟಣೆ ಉಂಟಾಯಿತು. ಎಂ.ಜಿ. ರಸ್ತೆಯ ಮೆಟ್ರೊ ನಿಲ್ದಾಣದಲ್ಲಿಯೂ ತಾತ್ಕಾಲಿಕವಾಗಿ ಪ್ರವೇಶದ್ವಾರದ ಶಟರ್ ಎಳೆಯಲಾಯಿತು. ನಿಲ್ದಾಣದ ಒಳಗೆ ಹೋಗಿರುವ ಪ್ರಯಾಣಿಕರೆಲ್ಲರೂ ಮೆಟ್ರೊ ಹತ್ತಿದ ನಂತರ ಎರಡು ನಿಮಿಷ ಶಟರ್ ತೆಗೆದು ಪ್ರಯಾಣಿಕರನ್ನು ಒಳಗೆ ಬಿಡಲಾಯಿತು. ರಾತ್ರಿ 8.20ರ ಬಳಿಕ ಎಲ್ಲ ನಿಲ್ದಾಣಗಳಲ್ಲಿ ಮತ್ತೆ ಪ್ರವೇಶ ಆರಂಭವಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.