ಬೆಂಗಳೂರು: ನಗರದಲ್ಲಿರುವ ವ್ಯಗ್ರ ಹಾಗೂ ಕಚ್ಚುವುದನ್ನೇ ಅಭ್ಯಾಸ ಮಾಡಿಕೊಂಡಿರುವ ಬೀದಿ ನಾಯಿಗಳನ್ನು (ಆಲ್ಫಾ ಡಾಗ್) ಶಾಶ್ವತವಾಗಿ ‘ಆಶ್ರಯ ಕೇಂದ್ರ’ದಲ್ಲಿ ಇಟ್ಟು ಪೋಷಣೆ ಮಾಡಲು ಬಿಬಿಎಂಪಿ ಚಿಂತನೆ ನಡೆಸಿದೆ.
ಬೀದಿ ನಾಯಿಗಳು ಕಚ್ಚುವ ಪ್ರಕರಣಗಳು ನಗರದಲ್ಲಿ ಹೆಚ್ಚಾಗುತ್ತಿದೆ. ಪ್ರಾಣಿ ಸಂತಾನ ನಿಯಂತ್ರಣ (ಎಬಿಸಿ) ನಿಯಮದಂತೆ ಕಚ್ಚುವ ಬೀದಿ ನಾಯಿಗಳನ್ನು ಹಿಡಿದು ಶಸ್ತ್ರಚಿಕಿತ್ಸೆ ಅಥವಾ ರೇಬಿಸ್ ಚುಚ್ಚುಮದ್ದು ನೀಡಿ ಹತ್ತು ದಿನ ನಿಗಾವಹಿಸಿ, ಅವುಗಳಿದ್ದ ಸ್ಥಳಕ್ಕೆ ಬಿಡಲಾಗುತ್ತಿದೆ. ಇದಾದ ಮೇಲೂ, ಕಚ್ಚುವುದನ್ನೇ ಅಭ್ಯಾಸ ಮಾಡಿಕೊಂಡಿರುವ ನಾಯಿಗಳು ಮತ್ತೆ ಕಚ್ಚುವ ಪ್ರಕರಣಗಳು ದಾಖಲಾಗುತ್ತಿವೆ.
ಕಚ್ಚುವ ಅಭ್ಯಾಸವುಳ್ಳ ಅಥವಾ ವ್ಯಗ್ರ ಬೀದಿ ನಾಯಿಗಳನ್ನು ನಿಗಾ ಕೇಂದ್ರದಲ್ಲಿರಿಸಿ ಔಷಧೋಪಚಾರ ನಡೆಸಿದರೂ ಅವುಗಳು ಕಚ್ಚುವ ಚಾಳಿ ಬಿಡುತ್ತಿಲ್ಲ. ಹೀಗಾಗಿ, ಅಂತಹ ಬೀದಿ ನಾಯಿಗಳನ್ನು ಶಾಶ್ವತವಾಗಿ ಇರಿಸಿ, ಪೋಷಣೆ ಮಾಡಲು ‘ಆಶ್ರಯ ತಾಣ’ಗಳನ್ನು ನಿರ್ಮಿಸಲು ಬಿಬಿಎಂಪಿ ಪಶುಸಂಗೋಪನೆ ವಿಭಾಗದ ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ. ಇದಕ್ಕಿರುವ ಕಾನೂನು ತೊಡಕುಗಳನ್ನು ನಿವಾರಿಸಿಕೊಂಡು, ಪ್ರಾಣಿದಯಾ ಸಂಘದ ಸಲಹೆಗಳನ್ನು ಪಡೆದು ಹೊಸ ಯೋಜನೆ ಅನುಷ್ಠಾನ ಮಾಡಲು ಯೋಚಿಸಿದ್ದಾರೆ.
‘ದೆಹಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಬೀದಿ ನಾಯಿಗಳನ್ನು ಹಿಡಿದು, ಅವುಗಳನ್ನು ಆಶ್ರಯ ತಾಣಗಳಿಗೆ ಸ್ಥಳಾಂತರಿಸಿ’ ಎಂದು ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ. ‘ಈ ಆದೇಶವನ್ನು ನಗರದಲ್ಲೂ ಪಾಲಿಸಬೇಕು’ ಎಂಬ ಆಗ್ರಹ ವಿಧಾನ ಪರಿಷತ್‌ನಲ್ಲೂ ಕೇಳಿ ಬಂದಿರುವುದರಿಂದ ಆ ಬಗ್ಗೆ ಚರ್ಚೆ ಆರಂಭವಾಗಿದೆ.
‘ಎಲ್ಲ ಬೀದಿ ನಾಯಿಗಳಿಗೂ ‘ಆಶ್ರಯ ಕೇಂದ್ರ’ ಸ್ಥಾಪಿಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ ವ್ಯಗ್ರ ಹಾಗೂ ಕಚ್ಚುವ ಅಭ್ಯಾಸ ಇರುವ ಬೀದಿ ನಾಯಿಗಳನ್ನಾದರೂ ‘ಆಶ್ರಯ ಕೇಂದ್ರ’ಗಳಲ್ಲಿ ಶಾಶ್ವತವಾಗಿ ಉಳಿಸಿಕೊಳ್ಳಲು ಯೋಜನೆ ರೂಪಿಸಬೇಕಾಗಿದೆ. ಇದು ಇನ್ನೂ ಆರಂಭಿಕ ಚರ್ಚೆಯಾಗಿದ್ದು, ಇದರ ಬಗ್ಗೆ ಸರ್ಕಾರದ ಮಟ್ಟದಲ್ಲಿ ತೀರ್ಮಾನವಾಗಬೇಕಿದೆ’ ಎಂದು ಬಿಬಿಎಂಪಿ ಪಶು ಸಂಗೋಪನೆ ವಿಭಾಗ ಅಧಿಕಾರಿಗಳು ತಿಳಿಸಿದರು.
‘ಕಚ್ಚಿದ ಬೀದಿ ನಾಯಿಗಳನ್ನು ಹಿಡಿದು ನಿಗಾ ಕೇಂದ್ರದಲ್ಲಿ ಇರಿಸಿ ಅವುಗಳಿಗೆ ಎಬಿಸಿ ಕಾರ್ಯಕ್ರಮದಂತೆ 10 ದಿನ ಔಷಧೋಪಚಾರ ಮಾಡಲಾಗುತ್ತದೆ. ಆ ನಂತರ ಅವುಗಳನ್ನು ಮತ್ತೆ ಅದೇ ಸ್ಥಳದಲ್ಲಿ ಬಿಡಲಾಗುತ್ತಿದೆ. ಅವು ಮತ್ತೆ ಕಚ್ಚುತ್ತಿವೆ. ಹೀಗಾಗಿ ಇಂತಹ ‘ಆಲ್ಫಾ ಡಾಗ್’ಗಳನ್ನು ಹೆಚ್ಚು ದಿನ ನಿಗಾ ಕೇಂದ್ರದಲ್ಲಿ ಉಳಿಸಿಕೊಳ್ಳಲು ನಿಯಗಳಲ್ಲಿರುವ ಅವಕಾಶಗಳನ್ನು ಪರಿಶೀಲಿಸಲಾಗುತ್ತಿದೆ’ ಎಂದು ಬಿಬಿಎಂಪಿ ಪಶುಸಂಗೋಪನೆ ವಿಭಾಗದ ಅಧಿಕಾರಿಗಳು ತಿಳಿಸಿದರು. ‘ನಿಗಾ ಕೇಂದ್ರದಲ್ಲಿರುವ ‘ಆಲ್ಫಾ ಡಾಗ್’ಗಳ ನಡವಳಿಕೆ ಸುಧಾರಿಸಿದ ಮೇಲೆ ಅವುಗಳನ್ನು ಬಿಡಬೇಕು ಎಂಬ ಯೋಚನೆ ಇದೆ. ಅದಕ್ಕಾಗಿ ವೈದ್ಯರು ಪ್ರಾಣಿಪ್ರಿಯರೂ ಸೇರಿದಂತೆ ಎಲ್ಲರನ್ನೂ ಒಳಗೊಂಡ ಒಂದು ಸಮಿತಿ ರಚಿಸಿ ಆ ಸಮಿತಿಯ ನಿರ್ಧಾರದಂತೆ ಎಷ್ಟು ದಿನ ‘ಆಲ್ಫಾ ಡಾಗ್’ಗಳನ್ನು ನಿಗಾ ಕೇಂದ್ರದಲ್ಲಿ ಇರಿಸಿಕೊಳ್ಳಬೇಕು ಎಂದು ತೀರ್ಮಾನಿಸಲಾಗುತ್ತದೆ. ಈ ಬಗ್ಗೆ ಚರ್ಚೆ ನಡೆಯುತ್ತಿದ್ದು ಮುಂದಿನ ದಿನಗಳಲ್ಲಿ ಅಂತಿಮಗೊಳ್ಳುವ ಸಾಧ್ಯತೆ ಇದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.